Advocate Padmaraj: ಅಭಿವೃದ್ಧಿ ನಿಗಮಕ್ಕೆ ಅನುದಾನವಿದೆ: ಬಡ ವಿದ್ಯಾರ್ಥಿಗಳ ಅರಿವು ಸಾಲಕ್ಕೆ ಮಾತ್ರ ಅನುದಾನವಿಲ್ಲ: ಸರ್ಕಾರದ ನಡೆಗೆ ಆಕ್ರೋಶ
ಮಂಗಳೂರು: ಸರ್ಕಾರದ ಬಳಿ ಜಾತಿಗೊಂದು ಅಭಿವೃದ್ಧಿ ನಿಗಮ ಸ್ಥಾಪಿಸಲು ಹಣ, ಅನುದಾನ ಇದೆ. ಆದರೆ, ಬಡ ವಿದ್ಯಾರ್ಥಿಗಳ ಅರಿವು ಸಾಲಕ್ಕೆ ಅನುದಾನವಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ವೃತ್ತಿಪರ ಶಿಕ್ಷಣ ಕೋರ್ಸ್‌ಗೆ ಸೇರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ‘ಅರಿವು ಶೈಕ್ಷಣಿಕ ಸಾಲ’ ಯೋಜನೆ ಅನುಷ್ಠಾನಕ್ಕೆ ಅನುದಾನದ ಕೊರತೆ ಇದೆ ಎಂಬ ಕಾರಣದಿಂದ ನಿಗಮದಿಂದ ಸಾಲ ಒದಗಿಸುವುದಿಲ್ಲ ಎಂದು ಘೋಷಿಸಲಾಗಿದೆ... ಜಾತಿಗೊಂದು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಸರ್ಕಾರದ ಬಳಿ ಅನುದಾನ ಇದೆ... ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವ್ಯಾಪ್ತಿಯಲ್ಲಿ ಬರುವ ಬಡ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಿಗೆ ಸೇರುವುದಕ್ಕೆ ಒಂದು ಲಕ್ಷ ರೂಪಾಯಿ ಸಾಲ ಸೌಲಭ್ಯ ನೀಡಲು ಸರ್ಕಾರದ ಬಳಿ ದುಡ್ಡಿಲ್ಲ ಎನ್ನುವುದು ವಿಪರ್ಯಾಸವೇ ಸರಿ ಎಂದು ವಕೀಲರೂ ಆಗಿರುವ ಬಿಲ್ಲವ ಸಮುದಾಯದ ಮುಖಂಡ ಆರ್ ಪದ್ಮರಾಜ್ ವಿಷಾದ ವ್ಯಕ್ತಪಡಿಸಿದ್ದಾರೆ.
ಆರ್ಥಿಕವಾಗಿ ಮುಂದುವರಿದ ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗುತ್ತಿದೆಯೇ ಹೊರತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ಮಾಡಲಾಗುತ್ತಿಲ್ಲ... ಬಡವರ್ಗದ ಜನರ ಸಮಸ್ಯೆ ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲವೆ? ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತಿರುವ ‘ಅರಿವು ಶೈಕ್ಷಣಿಕ ಸಾಲ’ ಯೋಜನೆಯನ್ನು ಅನುದಾನ ಕೊರತೆ ಕಾರಣದಿಂದ ಕೈಬಿಟ್ಟದ್ದು ಯಾವ ನ್ಯಾಯ? ಜಾತಿ ಜಾತಿಗಳ ಓಲೈಕೆಗಾಗಿ ನಿಗಮ ಸ್ಥಾಪನೆ ಮಾಡಲು ಒತ್ತಾಯ ಮಾಡುತ್ತಿರುವ ರಾಜಕಾರಣಿಗಳಿಗೇಕೆ ಬಡವರ ಸಮಸ್ಯೆ ಕಾಣಲಿಲ್ಲ? ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಹಿಂದೆ ದೇವರಾಜ ಅರಸು ನಿಗಮದ ವ್ಯಾಪ್ತಿಯಲ್ಲಿದ್ದ ಆರ್ಯವೈಶ್ಯ, ಸವಿತಾ ಸಮಾಜ, ವಿಶ್ವಕರ್ಮ, ಉಪ್ಪಾರ, ಮಡಿವಾಳರ ನಿಗಮಗಳು ಪ್ರತ್ಯೇಕಗೊಂಡಿದ್ದು, ಅಲ್ಲಿಯೂ ಅರ್ಜಿ ಕರೆಯಲಾಗಿದೆ... ಆದರೆ ಕರಾವಳಿಯಲ್ಲಿ ಆ ವರ್ಗಕ್ಕೆ ಸೇರಿದ ಜನ ಕಡಿಮೆ. ಹೆಚ್ಚು ಮಂದಿ 2ಎ ವಿಭಾಗದಲ್ಲಿ ಬರುವ ಬಿಲ್ಲವ, ಈಡಿಗ ಮಡಿವಾಳ, ಸಫಲಿಗ, ಶೇರಿಗಾರ, ಮೂಲ್ಯ, ಕುಲಾಲ್, ಮೊಯ್ಲಿ ಹೀಗೆ ಕರಾವಳಿ ಸೇರಿ ಕರ್ನಾಟಕದಲ್ಲಿ ಅನೇಕ ಜಾತಿಯ ವಿದ್ಯಾರ್ಥಿಗಳಿಗೆ ಅರಿವು ಯೋಜನೆಯ ಸಾಲ ಸಿಗದೆ ಈ ಕರೊನಾ ಸಂಕಷ್ಟದ ಮಧ್ಯೆ ಸಮಸ್ಯೆಯಾಗಿದೆ. ಕೋವಿಡ್‌ನಂತಹ ಈ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ಜಾತಿ ಜಾತಿಗಳ ಓಲೈಕೆ ಮಾಡುವ ಬದಲು ಇನ್ನಾದರೂ ಹಿಂದುಳಿದ ವರ್ಗದ ಬಡ ವಿದ್ಯಾರ್ಥಿಗಳ ಅಳಲನ್ನು ಕೇಳುವತ್ತ ಜವಾಬ್ದಾರಿ ವಹಿಸಲಿ ಎಂದು ಪದ್ಮರಾಜ್ ಅಳಲು ತೋಡಿಕೊಂಡಿದ್ದಾರೆ.