NIA Raid Politically Motivated-SDPI | ಎನ್.ಐ.ಎ ದಾಳಿ ರಾಜಕೀಯ ಪ್ರೇರಿತ - ಎಸ್ ಡಿ.ಪಿ.ಐ
ಬೆಂಗಳೂರು, ನವಂಬರ್.19- ಬೆಂಗಳೂರಿನ ಡಿ.ಜೆ ಮತ್ತು ಕೆ.ಜಿ ಹಳ್ಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಘಟನೆಯ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂಬುವುದಕ್ಕೆ ಸಾಕ್ಷಿ ಸಂಪತ್ ರಾಜ್ ಬಂಧನವೇ ಪ್ರಮುಖವಾಗಿದೆ. ಸಂಪತ್ ರಾಜ್ ಬಂಧನದ ನಂತರ ಮತ್ತೊಮ್ಮೆ ಕಸ್ಟಡಿಗೆ ಪಡೆದಿರುವ ತನಿಖಾ ಸಂಸ್ಥೆ ಘಟನೆಗೆ ಕಾರಣಕಾರ್ತರಾದ ನೈಜ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸ ಬೇಕಾಗಿತ್ತು. ಸಂಪತ್ ರಾಜ್ ರವರ ರಾಜಕೀಯ ವೈಶಮ್ಯಕ್ಕೆ ಈಗಾಗಲೇ ಬಲಿಪಶುಗಳಾಗಿ ಅನೇಕ ಅಮಾಯಕರು ಜೈಲಿನಲ್ಲಿದ್ದಾರೆ. ಈ ಎಲ್ಲಾ ವಾಸ್ತವಂಶ ಗೊತ್ತಿರುವ ತನಿಖಾ ಸಂಸ್ಥೆ ಸರ್ಕಾರದ ಒತ್ತಡಕ್ಕೆ ಮಣಿದು ಬಿಜೆಪಿ ಯ ಸೈದ್ಧಾಂತಿಕ ವಿರೋಧಿಯಾದ ಎಸ್.ಡಿ.ಪಿ.ಐ ಪಕ್ಷವನ್ನು ಹಾಗೂ ಒಂದು ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿಸಿ ಕೊಂಡು ತನಿಖೆ ನೆಪವೊಡ್ಡಿ ನಮ್ಮ ಪಕ್ಷದ ವಾರ್ಡ್ ಕಛೇರಿ ಮೇಲೆ ದಾಳಿ ಮಾಡಿದಲ್ಲದೇ, ಮಾರಕಾಸ್ತ್ರಗಳು ಸಿಕ್ಕಿವೆ ಎಂದು ಮಾಧ್ಯಮಕ್ಕೆ ಸುಳ್ಳು ಮಾಹಿತಿ ನೀಡಿ ನಮ್ಮ ಪಕ್ಷದ ಬೆಳವಣಿಗೆಗೆ ತಡೆಯೊಡ್ಡುವ ಹೇಯ ಕೃತ್ಯಕ್ಕೆ ತನಿಖಾ ಸಂಸ್ಥೆ ಕೈಹಾಕಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅಫ್ಸ ರ್ಕೂಡ್ಲೀಪೇಟೆ ತಿಳಿಸಿದ್ದಾರೆ.
ತನಿಖಾ ಸಂಸ್ಥೆ ನೈಜತೆಯನ್ನು ಮರೆಮಾಚಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ. ಅಲ್ಲದೇ ಪಕ್ಷದ ಕುರಿತು ಸಮಾಜಕ್ಕೆ ತಪ್ಪು ಸಂದೇಶ ನೀಡುವ ತನ್ನ ಪ್ರಯತ್ನಕ್ಕೆ ಅಧಿಕಾರ ದುರ್ಬಳಕೆ ಮಾಡಿ ಕೊಳ್ಳುತ್ತಿರುವ ತನಿಖಾ ಸಂಸ್ಥೆಯ ಕಾರ್ಯ ವೈಖರಿಯನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿದ್ದೇವೆ ಎಂದು ಅಫ್ಸರ್ ತಿಳಿಸಿದ್ದಾರೆ.