Udupi Court News | ಪುತ್ತೂರು ಗ್ರಾಮದ ದಂಪತಿಗೆ ಜೀವ ಬೆದರಿಕೆ: ಇಬ್ಬರು ಮಹಿಳಾ ಅಪರಾಧಿಗಳಿಗೆ ಜೈಲು ಶಿಕ್ಷೆ
ಉಡುಪಿ: ದಂಪತಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ ಇಬ್ಬರು ಮಹಿಳೆಯರುಗೆ ಉಡುಪಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಆರೋಪಿಗಳು ಅಕ್ರಮ ಕೂಟ ರಚಿಸಿಕೊಂಡು ಜೀವ ಬೆದರಿಕೆ ಹಾಕಿರುವುದು ಸಾಬೀತಾಗಿದೆ ಎಂದು ಉಡುಪಿ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು, ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
ಉಡುಪಿ ತಾಲೂಕು ಕುಕ್ಕಿಕಟ್ಟೆ ಬಡಗುಬೆಟ್ಟು ಗ್ರಾಮದ ಅರ್ಚನಾ ಮತ್ತು ತೆಂಕನಿಡಿಯೂರು ಗ್ರಾಮ ಈಶ್ವರನಗರದ ಜ್ಯೋತಿ ಇವರು 2014ರ ಜೂನ್ ನಲ್ಲಿ ಉಡುಪಿ ತಾಲೂಕು ಪುತ್ತೂರು ಗ್ರಾಮದ ಮನೆ ನಂ: 2-92ಎ ರಲ್ಲಿ ವಾಸವಾಗಿರುವ ದಾಮೋದರ ನಾಯಕ್ ಮತ್ತು ಪವಿತ್ರ ಡಿ ನಾಯಕ್‌ರವರು ಮನೆಗೆ ಬೀಗ ಹಾಕಿ ಹೋದ ಸಂದರ್ಭದಲ್ಲಿ ಮನೆಯ ಬಾಗಿಲಿನ ಬೀಗ ಒಡೆದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದರು.
ಅಷ್ಟೇ ಅಲ್ಲದೆ, ದಂಪತಿಯಾದ ದಾಮೋದರ ನಾಯಕ್ ಮತ್ತು ಪವಿತ್ರ ಡಿ ನಾಯಕ್ ಮನೆಗೆ ಬಂದಾಗ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ನಗರ ಠಾಣೆಯ ಉಪ ನಿರೀಕ್ಷಕಿ ಮೀನಾಕ್ಷಿ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಎಮ್.ಎನ್ ಮಂಜುನಾಥ್‌ರವರು, ಆರೋಪಿತರ ವಿರುದ್ಧದ ಆರೋಪವು ರುಜುವಾತಾಗಿದೆ ಎಂದು ತೀರ್ಪು ನೀಡಿದ್ದಾರೆ.
ಅಪರಾಧಿಗಳಿಬ್ಬರಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು, ಅಪರಾಧಿಗಳಿಗೆ ತಲಾ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ.