-->
Mangaluru Airport Naming Controversy | ಏರ್‌ಪೋರ್ಟ್‌ಗೆ ಕೋಟಿ ಚೆನ್ನಯ್ಯ  ಹೆಸರು: ಉಡುಪಿ ಪುತ್ತಿಗೆ ಮಠಾಧೀಶರಿಂದ ಯಾಕೀ ಕ್ಯಾತೆ?

Mangaluru Airport Naming Controversy | ಏರ್‌ಪೋರ್ಟ್‌ಗೆ ಕೋಟಿ ಚೆನ್ನಯ್ಯ ಹೆಸರು: ಉಡುಪಿ ಪುತ್ತಿಗೆ ಮಠಾಧೀಶರಿಂದ ಯಾಕೀ ಕ್ಯಾತೆ?




ಲೇಖನ: ನವೀನ್ ಸೂರಿಂಜೆ, ಪತ್ರಕರ್ತರು


ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ವಿಮಾನ ನಿಲ್ದಾಣ ಎಂದು ಹೆಸರಿಡಬೇಕು ಎಂಬ ಆಗ್ರಹಗಳು ಹೆಚ್ಚಾಗುತ್ತಿದ್ದಂತೆ ವೈದಿಕರು ಎದ್ದು ಕುಳಿತಿದ್ದಾರೆ. ವಿಮಾನ ನಿಲ್ದಾಣಕ್ಕೆ ಮಧ್ವಾಚಾರ್ಯ ಮತ್ತು ಶಂಕರಾಚಾರ್ಯ ಹೆಸರನ್ನು ಜೋಡಿಸಿ ಮಧ್ವಶಂಕರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರಿಡಬೇಕು ಎಂದು ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಒತ್ತಾಯಿಸಿದ್ದಾರೆ.


ಈವರೆಗೂ ಇಂತಹುದೊಂದು ಆಗ್ರಹ ಉಡುಪಿ ಅಷ್ಠಮಠಗಳಿಂದಾಗಲೀ, ಬ್ರಾಹ್ಮಣ ಸಂಘದಿಂದಾಗಲೀ ಕೇಳಿ ಬಂದಿರಲಿಲ್ಲ. ಯಾವಾಗ ಕೋಟಿ ಚೆನ್ನಯ್ಯ ಹೆಸರಿಗೆ ಆಗ್ರಹಗಳು ಜಾಸ್ತಿಯಾದವೋ ಅಲ್ಲಿಂದ ವೈದಿಕರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಮಧ್ವ ಶಂಕರರ ಹೆಸರು ಪ್ರಸ್ತಾಪಿಸಲಾಗಿದೆ.


ದ್ವೈತ ಸಿದ್ದಾಂತದ ಮಾಧ್ವಚಾರ್ಯರು ಮತ್ತು ಅದ್ವೈತ ಸಿದ್ದಾಂತದ ಶಂಕರಾಚಾರ್ಯರನ್ನು ಒಟ್ಟುಗೂಡಿಸಿ ಒಂದು ಹೆಸರು ಮಾಡಿರುವುದು ಎಷ್ಟು ಹಾಸ್ಯಾಸ್ಪದವೋ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೊಂದಕ್ಕೆ ಮಧ್ವರ ಹೆಸರು ಮತ್ತು ಅದನ್ನು ಸೂಚಿಸಿದ್ದು ಪುತ್ತಿಗೆ ಸುಗುಣೇಂದ್ರ ತೀರ್ಥರು ಎಂಬುದು ಅಷ್ಟೇ ಹಾಸ್ಯಾಸ್ಪದ ವಿಚಾರ.


ಹಾಗೆ ನೋಡಿದ್ರೆ ಈ ಸುಗುಣೇಂದ್ರ ತೀರ್ಥರು ಈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಂತ್ರಸ್ತರು. ಇದರಿಂದಾಗಿಯೇ ಅವರು ಭಾರೀ ಅವಮಾನಗಳನ್ನು ಎದುರಿಸಬೇಕಾಯಿತು.


ಮಧ್ವಾಚಾರ್ಯರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿ ಪರ್ಯಾಯ ಪೂಜಾ ಮಠಗಳಿಗೆ ಕೆಲವು ನಿಯಮಗಳನ್ನು ರೂಪಿಸಿದರು. ಅದರಲ್ಲಿ ಮುಖ್ಯವಾದುದು ಅಷ್ಠಮಠದ ಕೃಷ್ಣಪೂಜೆ ಮಾಡುವ ಮಠಗಳ ಸ್ವಾಮೀಜಿಗಳು ಸಮುದ್ರೋಲ್ಲಂಘನೆ ಮಾಡುವಂತಿಲ್ಲ. ಅರ್ಥಾತ್ ವಿದೇಶ ಪ್ರವಾಸ ಮಾಡುವಂತಿಲ್ಲ. ಆದರೆ ಪುತ್ತಿಗೆ ಸುಗುಣೇಂದ್ರ ತೀರ್ಥರು ಈ ನಿಯಮವನ್ನು ಮೀರಿ ವಿದೇಶಕ್ಕೆ ಹಾರಿದ್ದರು. ಬಳಿಕ ಪುತ್ತಿಗೆ ಸುಗುಣೇಂದ್ರ ತೀರ್ಥರ ಪರ್ಯಾಯ ಕೃಷ್ಣಪೂಜೆ ಸರದಿ ಬಂದಾಗ ಉಳಿದೆಲ್ಲಾ ಮಠಗಳು ವಿರೋಧಿಸಿದವು. ಯಾವುದೇ ಕಾರಣಕ್ಕೂ ಪುತ್ತಿಗೆ ಶ್ರೀಗಳು ಸರ್ವಜ್ಞ ಪೀಠಾರೋಹಣ ಮಾಡಬಾರದು ಎಂದು ತಾಕೀತು ಮಾಡಿದವು. 


ವಿದೇಶಪ್ರವಾಸವನ್ನೇ ಅಪವಿತ್ರ ಎಂದು ಸಾರಿದ ಮಧ್ವಾಚಾರ್ಯರ ಹೆಸರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೂಕ್ತವೇ ?


ನೇರವಾಗಿ ಕೋಟಿ ಚೆನ್ನಯ್ಯ ಹೆಸರಿಗೆ ವಿರೋಧ ವ್ಯಕ್ತಪಡಿಸಲಾಗದ ಸ್ವಾಮೀಜಿಗಳ ಮಧ್ವ ಶಂಕರರ ಹೆಸರನ್ನು ತೇಲಿಬಿಡಲು ಪ್ರಯತ್ನ ನಡೆಸಿದ್ದಾರೆ. ಹಾಗೇನಾದರೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ವರ ಹೆಸರಿಟ್ಟರೆ ಅದು ಕೋಟಿಚೆನ್ನಯ್ಯರ ಸಮುದಾಯಕ್ಕೆ ಮಾಡುವ ಮೋಸ ಮಾತ್ರವಲ್ಲದೆ ಖುದ್ದು ಮಧ್ವಾಚಾರ್ಯರಿಗೆ ಮಾಡುವ ಅವಮಾನವಾಗಿದೆ.


Ads on article

Advertise in articles 1

advertising articles 2

Advertise under the article