Sexual Harassment by Police Inspector? | ದೂರು ನೀಡಲು ಬಂದವಳಿಗೆ ಲೈಂಗಿಕ ಕಿರುಕುಳ: ಆ ಇನ್ಸ್‌ಪೆಕ್ಟರ್ ಯುವತಿಗೆ ಮಾಡಿದ್ದೇನು...?
ಬೆಳ್ತಂಗಡಿ; ಪ್ರಕರಣವೊಂದಕ್ಕೆ ಠಾಣೆಗೆ ದೂರು ನೀಡಲು ಬಂದ ಯುವತಿಯ ಜೊತೆಗೆ ಸಲುಗೆ ಬೆಳೆಸಿಕೊಂಡ ಚಾಮರಾಜರಾಜಪೇಟೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಯುವತಿಯನ್ನು ಧರ್ಮಸ್ಥಳದ ವಸತಿಗೃಹಕ್ಕೆ ಕರೆತಂದು ದುರ್ಬಳಸಿಕೊಂಡಿರುವುದಾಗಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪ್ರತಿದೂರು ನೀಡಿರುವ ಸಬ್ ಇನ್ಸ್‌ಪೆಕ್ಟರ್, ತನ್ನನ್ನೇ ಯುವತಿ ಬ್ಲ್ಯಾಕ್‌ಮೇಲ್ ಮಾಡಿದ್ದಾಗಿ ಆಪಾದಿಸಿದ್ದಾರೆ.
ಚಾಮರಾಜಪೇಟೆ ಠಾಣಾ ಸಬ್ ಇನ್ಸ್‌ಪೆಕ್ಟರ್ ವಿಶ್ವನಾಥ ಬಿರಾದಾರ್ ಅವರೇ ಯುವತಿಯಿಂದ ಗಂಭೀರ ಆರೋಪಕ್ಕೊಳಗಾಗಿ ಇದೀಗ ವೃತ್ತಿಯಿಂದ ಅಮಾನತುಗೊಂಡವರು.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ, ದಕ್ಷ ಪೊಲೀಸ್ ಅಧಿಕಾರಿ ಎಂದೇ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವ ಲಕ್ಷ್ಮೀ ಪ್ರಸಾದ್ ನೀಡಿದ ವರದಿ ಮೇರೆಗೆ ಪೊಲೀಸ್ ಇಲಾಖೆ ವಿಶ್ವನಾಥ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಂಡಿದೆ.
ಪ್ರಕರಣದ ಹಿನ್ನೆಲೆ;
ಲೇಪ್‌ಟಾಪ್ ಕಳವು ಪತ್ತೆಗಾಗಿ ಠಾಣೆಗೆ ದೂರು ನೀಡಲು ಬಂದಿದ್ದ ಯುವತಿ ಮತ್ತು ವಿಶ್ವನಾಥ ಬಿರಾದಾರ್ ಅವರು ಪರಸ್ಪರ ಪರಿಚಿತರಾಗಿದ್ದರು. ಬಳಿಕ ಈ ಪರಿಚಯ ಪ್ರೇಮಕ್ಕೆ ತಿರುಗಿ ವಿವಾಹದ ಹಂತದವರೆಗೂ ಬಂದಿತ್ತು ಎನ್ನಲಾಗಿದೆ. ಇದೀಗ ಯುವತಿ ನೀಡಿದ ದೂರಿನ ಪ್ರಕಾರ, ನವೆಂಬರ್ 9 ರಂದು ತನ್ನನ್ನು ಬಿರಾದಾರ್ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು.
ಮದುವೆಯಾಗುವುದಾಗಿ ನಂಬಿಸಿ ಕರೆತಂದಿದ್ದರು. ಲಾಡ್ಜ್ನಲ್ಲಿ ತಂಗಿದ್ದ ವೇಳೆ ತನಗೆ ಅತ್ಯಾಚಾರವೆಸಗಿ ಮದುವೆ ಆಗದೇ ಅಲ್ಲಿಂದ ವಾಪಸಾಗಿದ್ದಾರೆ ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಪೊಲೀಸರ ಗಮನಕ್ಕೆ ಬಂದಿದ್ದ ಪ್ರಕರಣದಲ್ಲಿ ವಿಶ್ವನಾಥ ಬಿರಾದಾರ್ ಅವರು ಎಸ್.ಐ ಎಂದು ತಿಳಿದಿರದ ಪೊಲೀಸರು
ಅವರಿಗೆ ಪೊಲೀಸ್ ಭಾಷೆಯಲ್ಲಿ ಉತ್ತರ ನೀಡಿದ್ದರು. ಈ ವೇಳೆ ಕೊನೇ ಗಳಿಗೆಯಲ್ಲಿ ವಿಶ್ವನಾಥ ಅವರು ಸಬ್ ಇನ್ಸ್‌ಪೆಕ್ಟರ್ ಎಂದು ತಿಳಿದು ಪೇಚಿಗೆ ಸಿಲುಕಿದ್ದರು ಎನ್ನಲಾಗಿದೆ.
ಬಿರಾದಾರ್ ದೂರಿನ ಪ್ರಕಾರ, ಸದ್ರಿ ಯುವತಿ ಠಾಣೆಗೆ ದೂರು ನೀಡಲು ಬಂದಿದ್ದ ವೇಳೆ ನನ್ನ ನಂಬರ್ ಪಡೆದಿದ್ದಳು. ಬಳಿಕ ಆಕೆ ನಿರಂತರ ಕರೆ ಮಾಡುತ್ತಾ, ಕರ್ತವ್ಯಕ್ಕೆ ಅಡ್ಡಿಯಾಗುವಂತೆ ವರ್ತಿಸುತ್ತಿದ್ದಳು. ಮದುವೆಯಾಗುವಂತೆಯೂ ದಂಬಾಲು ಬಿದ್ದಿದ್ದಳು. ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಳು.
ಇನ್ನೂ ಒಂದು ಹಂತ ಮುಂದಕ್ಕೆ ಹೋಗಿ 10 ಲಕ್ಷ ರೂ.ಬೇಡಿಕೆ ಇಟ್ಟಿದ್ದಳು. ಕಮಿಷನರ್ ಗೆ ದೂರು ನೀಡುವುದಾಗಿ ಬೆದರಿಸಿ, ಇಲ್ಲದಿದ್ದರೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಳು. ಇದರಿಂದ ಮರ್ಯಾದೆಗೆ ಅಂಜಿ ಆಕೆಯ ಜೊತೆ ಧರ್ಮಸ್ಥಳ ಕ್ಕೆ ಬಂದಿದ್ದು, ಒಟ್ಟು ಈ ಎಲ್ಲ ಬೆಳವಣಿಗೆಯಿಂದ ನನ್ನ ವೃತ್ತಿಗೆ ತೊಂದರೆ ಎದುರಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ನಾನು ಧರ್ಮಸ್ಥಳ ಠಾಣೆಗೆ ಅನಿವಾರ್ಯವಾಗಿ ದೂರು ನೀಡಬೇಕಾಗಿ ಬಂತು ಎಂದಿದ್ದಾರೆ.
ಎರಡೂ ಕಡೆಯವರ ದೂರಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನವೆಂಬರ್ 11ರಂದು ಪ್ರತ್ಯೇಕ ಪ್ರಕರಣ ದಾಖಲಾಗಿವೆ.