-->
Alva's News | ಆಳ್ವಾಸ್ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಂದ ಮಂಗಳೂರು ಎಪಿಎಂಸಿ ಕ್ಷೇತ್ರ ಭೇಟಿ

Alva's News | ಆಳ್ವಾಸ್ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಂದ ಮಂಗಳೂರು ಎಪಿಎಂಸಿ ಕ್ಷೇತ್ರ ಭೇಟಿ







ಮೂಡುಬಿದಿರೆ: ಇಂದಿನ ಯುವ ಪೀಳಿಗೆಯ ಮುಂದೆ ದೊಡ್ಡ ಗುರಿ ಇದ್ದು, ಅದಕ್ಕೆ ತಕ್ಕಂತೆ ಅವರು ತಮ್ಮನ್ನು ತಯಾರಿ ಮಾಡಿಕೊಳ್ಳುತ್ತಿದ್ದು, ಇದು ನಮ್ಮ ಪೀಳಿಗೆ ಹಾಗೂ ಇಂದಿನ ಪೀಳಿಗೆಗಿರುವ ದೊಡ್ಡ ವ್ಯತ್ಯಾಸವಾಗಿದೆ ಎಂದು ಮಂಗಳೂರು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆ ತಿಳಿಸಿದರು.


ಅವರು ಆಳ್ವಾಸ್‌ನ ಕಾಲೇಜಿನ ಎಂಬಿಎ ವಿಭಾಗ ಆಯೋಜಿಸಿದ್ದ "ಮಂಗಳೂರು ಎಪಿಎಂಸಿ ಕ್ಷೇತ್ರ ಭೇಟಿ’’ ವರದಿ ಮಂಡನೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಶಾಲೆ ಎಂಬುದು ನಮ್ಮ ಸ್ಫೂರ್ತಿಯನ್ನು ಹೆಚ್ಚಿಸುವ ಸೆಲೆ. ಆ ಹಿನ್ನೆಲೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡಿ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ನೀಡುತ್ತಿದೆ ಎಂದರು.


ಕೃಷಿ ಉತ್ಪನ್ನಗಳನ್ನು ತಂದ ರೈತರಿಗೆ ಶೋಷಣೆಯಾಗದಂತೆ, ಅವರಿಗೆ ಸೂಕ್ತ ಮೌಲ್ಯ ಹಾಗೂ ಭದ್ರತೆ ಒದಗಿಸುವ ವೇದಿಕೆಯಾಗಿ ಕೃಷಿ ಉತ್ಪನ್ನ ಮಾರಾಟ ಮಂಡಳಿ ಕೆಲಸ ಮಾಡುತ್ತದೆ. ಎಪಿಎಂಸಿ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸಿದರೆ ಪ್ರತಿ ವ್ಯವಹಾರದ ಮೇಲೆ ಎಪಿಎಂಸಿ ಚುನಾಯಿತ ಆಡಳಿತ ನಿಗಾ ಇಡಬಹುದಾಗಿದೆ. ಇಲ್ಲಿ ರೈತನಿಗೆ ಮೋಸ ಆಗುವ ಸಾಧ್ಯತೆ ಅತ್ಯಂತ ಕಡಿಮೆಯಾಗಿರುತ್ತದೆ. . ಅಲ್ಲದೆ ರೈತನಿಗೆ ತನಗೆ ದೊರೆಯಬೇಕಾದಷ್ಟು ಬೆಲೆ ಸಿಗದೇ ಇದ್ದರೆ ನೇರವಾಗಿ ಎಪಿಎಂಸಿ ಗೋದಾಮಿನಲ್ಲಿ ಸರಕು ಇಟ್ಟು ಅಲ್ಲಿಂದ ಸಾಲ ಪಡೆಯುವ ಅವಕಾಶವೂ ಇದೆ ಎಂದರು.


ಸಂವಾದ ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಕಾರ್ತಿಕ್ ರಾಯ್ಕರ್, ‘’ರೈತ ತಾನು ಬೆಳೆದ ಬೆಳೆಯನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ನೇರವಾಗಿ ಮಾರಾಟ ಮಾಡಲು ಅವನಲ್ಲಿ ಜಾಗೃತಿ ಕೊರತೆ ಇದೆ ಎಂದಾಗ’’, ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎಪಿಎಂಸಿ ಹೆಚ್ಚಿನ ಜಾಗೃತಿ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದು ತಿಳಿಸಿದರು. ಎಂಬಿಎ ವಿದ್ಯಾರ್ಥಿ ವರುಣ್ ಕಟ್ಟಿ"ಮುಂದುವರೆದ ದೇಶಗಳು ತಮ್ಮ ರೈತರಿಗೆ ಯಾವ ಸಂಧರ್ಭದಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ಎಂದು ತಿಳಿಸುವುದರಿಂದ ರೈತರು ನಷ್ಟ ಹೊಂದುವುದಿಲ್ಲ, ಆ ಹಿನ್ನಲೆಯಲ್ಲಿ ಭಾರತವು ಈ ಪದ್ದತಿಯನ್ನು ಪಾಲಿಸುವುದು ಉತ್ತಮ ಎಂದು ತಿಳಿಸಿದರು.



ಮಂಗಳೂರು ಎಪಿಎಂಸಿ ಮಂಡಿಗೆ ಆಳ್ವಾಸ್ ಕಾಲೇಜಿನ ಎಂಬಿಎ, ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಎಮ್‌ಕಾಂ ಎಚ್‌ಆರ್‌ಡಿ ವಿಭಾಗದ ೮೦ಕ್ಕೂ ಅಧಿಕ ವಿದ್ಯಾರ್ಥಿಗಳು ಮುಂಜಾನೆ 5 ಘಂಟೆಗೆ ಕ್ಷೇತ್ರ ಭೇಟಿಯ ಹಿನ್ನೆಲೆಯಲ್ಲಿ ಬುಧವಾರ ಭೇಟಿ ನೀಡಿದ್ದರು. ಕ್ಷೇತ್ರ ಭೇಟಿಯ ವರದಿ ಮಂಡನೆಯನ್ನು ವಿದ್ಯಾರ್ಥಿಗಳು ೯ ತಂಡದಲ್ಲಿ ತಮ್ಮ ವೈಶಿಷ್ಟ್ಯಪೂರ್ಣ ವೀಕ್ಷಣೆ ಹಾಗೂ ವಿಚಾರಣೆಯ ಅಂಶಗಳನ್ನು ಮಂಡಿಸಿದರು.


ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಎಂಬಿಎ ವಿಭಾಗದ ಮುಖ್ಯಸ್ಥೆ ಡಾ ಕ್ಲಾರೆಟ್ ಮೆಂಡೋನ್ಸಾ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. 


ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರಿಯಾ ಸಿಕ್ವೇರಾ ಕಾರ್ಯಕ್ರಮ ನಿರ್ವಹಿಸಿದರು. ಡಾ ವಿಷ್ಣು ಪ್ರಸನ್ನ, ಡಾ ಸಫಿಯಾ, ಶ್ರೀಗೌರಿ ಜೋಷಿ, ಅಕ್ಷಯ್ ಜೈನ್, ಗುರು ಪ್ರಸಾದ ಹಾಗೂ ಜಾನ್ಸನ್ ಫರ್ನಾಂಡೀಸ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.  

Ads on article

Advertise in articles 1

advertising articles 2

Advertise under the article