-->
Tribute to Bannanje Govindacharya | "ಬನ್ನಂಜೆ ಗೋವಿಂದಾಚಾರ್ಯ ಎಂಬ ವಿದ್ವತ್ ಕಡಲು"

Tribute to Bannanje Govindacharya | "ಬನ್ನಂಜೆ ಗೋವಿಂದಾಚಾರ್ಯ ಎಂಬ ವಿದ್ವತ್ ಕಡಲು"



Uploading: 29554 of 29554 bytes uploaded.

Santhosh Ananthapura with Bannanje

ಬರಹ: ಸಂತೋಷ್ ಅನಂತಪುರ


ಹೆಸರೇ ರೋಮಾಂಚನಗೊಳಿಸುವುದು ಬಹಳ ಅಪರೂಪದ ವಿಚಾರ. ಅದರಲ್ಲೂ ಬಹುಶ್ರುತರಾಗಿದ್ದರಂತೂ ಕೇಳಲೇಬೇಡಿ.ಅಂತಹದ್ದರಲ್ಲಿ ಯುಗಗಳಿಗೊಮ್ಮೆ ಹುಟ್ಟಿ ಮಿನುಗಿ ಬೆಳಗುವ ಬೆರಳೆಣಿಕೆಯ ತಾರೆಗಳ ಪಟ್ಟಿಯಲ್ಲಿ ಬನ್ನಂಜೆ ಗೋವಿಂದಾಚಾರ್ಯರೂ ಒಬ್ಬರು. ಉಡುಪಿಯ ಸತ್ವಭರಿತ ನೆಲದಲ್ಲಿ ಮೊಳೆತು ಚಿಗುರಿ ರಾಜ್ಯ, ದೇಶ ಹಾಗೂ ಜಾಗತಿಕವಲಯದಲ್ಲಿ ತಮ್ಮದೇ ಛಾಪು ಮೂಡಿಸಿದವರು. ತತ್ವ ದರ್ಶನ, ಅಧ್ಯಾತ್ಮ,ಕಾವ್ಯ, ಕಥೆ, ಸಂಗೀತ ಅಂತ ಹತ್ತಲವು ವಿಷಯಗಳಲ್ಲಿ ಪ್ರಭುತ್ವವನ್ನು ಸಂಪಾದಿಸಿದವರು. ಯಾವುದೇ ವಿಚಾರವನ್ನು ಎತ್ತಿಕೊಂಡರೂ ಅದರಲ್ಲಿ ಅತ್ಯುತ್ತಮ ಮಟ್ಟವನ್ನು ತಲುಪುವುದೇ ಅವರ ಮುಖ್ಯ ಗುರಿಯಾಗಿತ್ತು.ಇದು ತಾವೆತ್ತಿಕೊಂಡ ವಿಚಾರಗಳ ಕುರಿತಂತೆ ಅವರಿಗಿರುವ ಆಸ್ಥೆ ಹಾಗು ಬದ್ಧತೆಯನ್ನು ತೋರಿಸುತ್ತದೆ.


ಕೂಲಂಕುಷವಾಗಿ ಅಧ್ಯಯನ ಮಾಡಿ ಅಧಿಕೃತವಾಗಿ ಮಾತನಾಡಬಲ್ಲ ದಿಗ್ಗಜರು ಮತ್ತು ವಿರಳಾತಿವಿರಳ ಸಂಶೋಧಕರು. ಆಚಾರ್ಯರು ತಮ್ಮ ಆಸಕ್ತಿಗಳಿಗೆ ಎಂದೂ ಬೇಲಿ ಹಾಕಿದವರಲ್ಲ. ಹೊಸ ಬಗೆಯ ಜ್ಞಾನದಾಹದ ಆಸಕ್ತಿಗಳನ್ನು ಬರ ಸೆಳೆದುಕೊಂಡು ಕೊನೆಯವರೆಗೂ ಅಧ್ಯಯನಶೀಲರಾಗಿಯೇ ಇದ್ದರು. ಜ್ಞಾನ ಎಲ್ಲಿಂದಾದರೂ ಸರಿ ಅದು ಉಪಯೋಗವಾಗುವುದಾದರೆ ಸ್ವೀಕರಿಸುವ ವೈಶಾಲ್ಯತೆ ಅವರಲ್ಲಿತ್ತು. ಅಲ್ಲದೆ ಅದನ್ನು ತಮ್ಮದೇ ಧಾಟಿಯಲ್ಲಿ ಹೇಳಿ ತಿಳಿಸಿ, ನಿಜವನ್ನು ಸರಳ ರೇಖೆಯ ಮೇಲೆ ತಂದು ನಿಲ್ಲಿಸುತಿದ್ದರು.ಜ್ಞಾನವನ್ನು ಹಂಚುತ್ತಲೇ ಇರಬೇಕೆಂದು ನಂಬಿ ಅದರಂತೆ ಬದುಕಿದವರು. ಅವರ ಪ್ರವಚನಗಳೇ ಅದಕ್ಕೆಜೀವಂತ ಸಾಕ್ಷಿ.


***


ಆಚಾರ್ಯರ ಹೆಸರನ್ನು ನಾನು ಕೇಳಿದ್ದು ಬಾಲ್ಯದಲ್ಲಿ.ಒಂದೊಮ್ಮೆ ನಾನು ಸಣ್ಣವನಿರುವಾಗ ಅವರು ಮತ್ತು ವೀಣಕ್ಕ ನನ್ನ ‘ಅನಂತಪುರ’ ಮನೆಗೆ ಬಂದಿದ್ದರು. ಆಗ ದೊಡ್ಡಪ್ಪ ಈಶ್ವರಯ್ಯ ಉದಯವಾಣಿಯಲ್ಲಿ ಅವರ ಸಹದ್ಯೋಗಿಯಾಗಿದ್ದರು. ಆ ನಂತರ ಬಹಳಷ್ಟು ಬಾರಿ ದೊಡ್ಡಪ್ಪ-ಅಪ್ಪನ ಚರ್ಚೆಯಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಬಂದು ಹೋಗುತ್ತಿದ್ದರು. ಅಂದು ಕಿವಿಗೆ ಬಿದ್ದ ಅವರ ಹೆಸರು ಬೆಳೆದಂತೆ ಅಕ್ಷರಶ: ನನಗೆ ಬೆರಗನ್ನು ಹುಟ್ಟಿಸಿತ್ತು.ಕಾಲವುರುಳಿದಂತೆ ಅಲ್ಲಿಲ್ಲಿ ಕೇಳಿ, ಓದಿ, ತಿಳಿದು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅವರನ್ನು ಅರಿತುಕೊಂಡಿದ್ದೆ.ಅವರನ್ನು ಅರಿತುಕೊಂಡೆ ಎನ್ನುವುದಿಲ್ಲಿ ಬಾಲಿಶವೆನಿಸಿಬಹುದು.



ನನ್ನಂತಹ ಸಾಮಾನ್ಯನಿಗೆ ಅವರೊಬ್ಬ ಮಹಾಜ್ಞಾನದ ಕಡಲು. ಆ ಕಡಲ ಬಳಿ ಅದೆಷ್ಟೋ ಬಾರಿ ಹೋಗಿ ಅದರ ಕಿನಾರೆಯಲ್ಲಿ ನಿಂತು, ಕುಳಿತೆದ್ದು ಬರುತ್ತಿದ್ದೆ. ಆದರೆ ಕಡಲಿಗಿಳಿದು ಪಾದವನ್ನು ಅದ್ದಿಸುವ ಸಾಹಸಕ್ಕೆ ಎಂದೂ ಹೋಗಿರಲಿಲ್ಲ. ಕಾರಣ ಆ ಕಡಲಲ್ಲಿ ಪಾದವದ್ದಿಸಲೂ ತುಸು ಪುಣ್ಯ ಬೇಕಿತ್ತು. ಬನ್ನಂಜೆ ಎಂಬ ವಿದ್ವತ್ ಕಡಲ ಮುಂದೆ ನಿಂತು ಅದೆಬ್ಬಿಸುವ ತೆರೆಗಳಬ್ಬರಕ್ಕೆ ಹದವಾಗುತ್ತಾ, ಬೀಸುವ ಮಾರುತಕ್ಕೆ ದೇಹವನ್ನು ಬಾಗಿಸಿ ಒಂದಷ್ಟು ನೀಗಿಸಿಕೊಳ್ಳುತ್ತಾ ಆ ಪುಣ್ಯಕ್ಕಾಗಿ ಕಾಯುತ್ತಲಿದ್ದೆ. ಕಡಲೊಳಗಿಳಿದು ಪಾದವದ್ದಿಸಬೇಕೆಂಬ ಹಂಬಲವು ಮಾತ್ರ ಕನಸಾಗಿಯೇ ಉಳಿದಿತ್ತು.

***

“ಸಮಯಾನು ಸಮಯವುಂಟೇ ಭಕ್ತವತ್ಸಲ ನಿನಗೆ..." ಎಂದು ಕನಕದಾಸರು ಹಾಡಿದಂತೆ,ಆಚಾರ್ಯರ ದರುಶನಕ್ಕಾಗಿ ಕನಕನಂತೆ ನಾನೂ ಕಾಯುತ್ತಿದ್ದೆ.ಸಮಯ ಕೂಡಿ ಬಂತು ಅನ್ನಿ ಅಥವಾ ದಕ್ಕಬೇಕಾದದ್ದು ದಕ್ಕಬೇಕಾದ ಸಮಯದಲ್ಲಿ ದಕ್ಕುವಷ್ಟೇ ದಕ್ಕುತ್ತದೆ ಅಂತಲೂ ಅನ್ನಿ. ಒಟ್ಟಿನಲ್ಲಿ ಅಂತಹ ಗಳಿಗೆಯೊಂದು ನನ್ನ ಪಾಲಿಗೊದಗಿ ಬಂದಿತ್ತು. ಅಂದೊಂದು ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ಖೈದಿಗಳಿಂದ ನಾಟಕ ಪ್ರದರ್ಶನದ ವ್ಯವಸ್ಥೆಯನ್ನು‘ಸಂಕಲ್ಪ ಮೈಸೂರು’ ತಂಡವು ಹಮ್ಮಿಕೊಂಡಿತ್ತು.ಆ ಪ್ರದರ್ಶನದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ ನಿರ್ವಹಣೆಯ ಹೊಣೆಗಾರಿಕೆಯು ನನ್ನದಾಗಿತ್ತು. ಅಂದಿನ ಗಣ್ಯ ಅತಿಥಿಗಳನ್ನು ಸ್ವೀಕರಿಸಲು ಸಭಾಂಗಣದ ಹೊರಗೆ ಕಾಯುತ್ತಿದ್ದೆ.



ವೀಣಾ ಬನ್ನಂಜೆ ಹಾಗು ಅವರ ಸ್ನೇಹಿತರು ಕೂಡ ಆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದರು. ಕಾರ್ಯಕ್ರಮ ಶುರುವಾಗದಿರುವುದರಿಂದ ಅವರೂ ಕೂಡ ಹೊರಗಡೆ ನಿಂತು ತಮ್ಮ ಬಳಗದೊಂದಿಗೆ ಮಾತನಾಡುತ್ತಿದ್ದರು.ವೀಣಕ್ಕನನ್ನು ಬಲ್ಲ ನನಗೆ ಅವರೊಂದಿಗೆ ಚರ್ಚಿಸುವುದು ಕಷ್ಟವೆನಿಸಲಿಲ್ಲ. ಕ್ರಮೇಣ ಆ ಚರ್ಚೆಯಲ್ಲಿ ನಾನೂ ಅರಿಯದೆ ಭಾಗಿಯಾದೆ ಮತ್ತು ಚರ್ಚಿತ ವಿಷಯದ ಕುರಿತು ನನ್ನ ಸಲಹೆಗಳನ್ನೂ ನೀಡಿದೆ.



ಎಲ್ಲವನ್ನೂ ಕೇಳಿಸಿಕೊಂಡ ವೀಣಕ್ಕ ಅದೇ ವಾರದ ಅಂತ್ಯದಲ್ಲಿ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ "ಬನ್ನಂಜೆ ೮೦"ಕಾರ್ಯಕ್ರಮದ ಕುರಿತಾಗಿನ ಪೂರ್ವಭಾವಿ ಸಭೆಗೆ ನನ್ನನ್ನು ಆಹ್ವಾನಿಸಿದ್ದರು. ಒಪ್ಪಿಕೊಂಡು ಭಾಗವಹಿಸಿಯೂ ಇದ್ದೆ. ಮುಂದೆ ‘ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ’ದ ಸಾಮಾನ್ಯ ಸದಸ್ಯನಾಗಿ ಆಚಾರ್ಯರೊಂದಿಗೆ, ವೀಣಕ್ಕನೊಂದಿಗೆ ಬೆರೆತು ಕೈಯಲ್ಲಾದ ಸೇವೆಯನ್ನು ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ನೇರವಾಗಿಯೋ, ಪರೋಕ್ಷವಾಗಿಯೋ ಮಾಡುತ್ತಾ ಹೋದೆ. ಕನಸಿರುವುದೇ ನನಸಾಗಲು ಎನ್ನುವುದು ಸುಳ್ಳಲ್ಲ.

***

ಆಚಾರ್ಯರು ಜ್ಞಾನಕ್ಕಾಗಿ ತಮ್ಮನ್ನು ತೆರೆದಿರಿಸಿದ ಬಗೆ ಮತ್ತವರು ಜ್ಞಾನವನ್ನು ಜೀರ್ಣಿಸಿಕೊಳ್ಳುವ ರೀತಿ ಪ್ರಾಯಶ: ಅವರಿಗೊಬ್ಬರಿಗೆ ಮಾತ್ರ ಸಾಧ್ಯವಿತ್ತು. ಸದಾ ಅಧ್ಯಯನಶೀಲರಾದ ಅವರು ಒಂದಲ್ಲ ಒಂದು ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಜ್ಞಾನದ ಹಸಿವು ಅವರಿಗೆ ಬಹಳಷ್ಟಿತ್ತು. ಅದಕ್ಕಾಗಿ ತಮ್ಮನ್ನು ತಾವು ಯಾವತ್ತೂ ತೆರೆದಿರಿಸಿಕೊಂಡಿದ್ದರು.ಹಾಗಂತ ಅವರು ತಮ್ಮ ನಿಷ್ಠುರ ನಿಲುವಿಗೂ ಬದ್ಧರಾಗಿದ್ದರು. ಅವರ ಒಳನೋಟ, ಹೊಳಹುಗಳಲೆಲ್ಲವೂ ವಿಶಿಷ್ಟವಾದುವೇ. ತಾವು ನಂಬಿದ ಸಿದ್ಧಾಂತಕ್ಕೆ ಬದ್ದವಾಗಿಯೂ, ತಾವಿರುವ ಸಮಾಜಕ್ಕೆ ಪ್ರಯೋಜನವಾಗಿಯೂ, ತಮ್ಮಿಷ್ಟದ ಹಾದಿಯಲ್ಲಿ ಹೂವಾಗಿಯೂ ಅರಳಿ ಕಂಪನ್ನು ಸೂಸಿದವರು.ಸ್ವತಹ ವಾಗ್ದೇವಿಯೇ ಅವರ ನಾಲಗೆಯಲ್ಲಿ ಕುಳಿತು ನುಡಿಸಿದಂತೆ ಆಚಾರ್ಯರು ಜಗದೋದ್ದಾರಕನನ್ನು ತಮ್ಮ ಅಸ್ಖಲಿತ ಮಾತುಗಳಲ್ಲಿ ಆಡಿಸಿ ತೂಗಿದ ಪರಿ ಅನನ್ಯ.



ಕರ್ಮಠ ಸಂಪ್ರದಾಯಗಳ ವಿರುಧ್ಧ ಧನಿ ಎತ್ತಿ, ಎಡ-ನಡು-ಬಲವೆಂಬ ಎಡಬಿಡಂಗಿತನಕ್ಕೆಆಸ್ಪದ ಕೊಡದೆ ಸ್ವ-ಅಧ್ಯಾಯದಿಂದ ಬೆಳಗಿ ಬೆಳೆದು ಬಾಳಿದವರು. ಸಾಹಿತ್ಯ-ಕಾವ್ಯ ಕ್ಷೇತ್ರಗಳಲ್ಲಿ ತಮ್ಮದೇ ಅಚ್ಚನ್ನು ಒತ್ತಿದರೂ ಕಾಣುವ ಕಣ್ಣುಗಳಿಗೆ ಮಾತ್ರ ಅವರು ಕಾಣದೆ ಹೋದರು.ಹಾಗಂತ ಅದಕ್ಕಾಗಿ ಪರಿತಪಿಸದೆ ತಮ್ಮ ನಿತ್ಯ ಕಾಯಕವಾದ ಅಧ್ಯಯನ, ಸಂಶೋಧನೆಯಲ್ಲಿ ಮುಳುಗಿರುತ್ತಿದ್ದರು. ಬಹು ಮೌಲ್ಯಯುತ ಸಂಸ್ಕೃತ ಗ್ರಂಥಗಳನ್ನು ಕನ್ನಡೀಕರಿಸಿದ ಗರಿಮೆ ಅವರದ್ದು. ಜ್ಞಾನಾರ್ಜನೆಯನ್ನು ತಮ್ಮ ಬದುಕಿನ ಬಹುಮುಖ್ಯ ವಿಷಯವನ್ನಾಗಿ ಪರಿಗಣಿಸಿ ನಡೆದಾಡಿದರು, ಜಗದಗಲ ಸುತ್ತಾಡಿದರು.ಇಳಿಗಾಲದಲ್ಲಿ ಮಾತನ್ನು ಕೇಳದ ದೇಹದೊಂದಿಗೆ ತರ್ಕಿಸಬಲ್ಲ ಠೀಕು-ಠಾಕಿನ ಮನಸ್ಸನ್ನಿಟ್ಟುಕೊಂಡು ನೋವುಗಳನ್ನುಂಡ ದೇಹವನ್ನೂ ಪಳಗಿಸಿಟ್ಟಿದ್ದರು. ಅವರ ಸ್ವಾಸ್ತ್ಯ ಚಿತ್ತ ಶ್ರೇಷ್ಠತಮವೂ, ಕ್ರಿಯಾಶೀಲವೂ ಆಗಿತ್ತು.



ಅವರನ್ನು ನೆಚ್ಚಿಕೊಂಡವರ ಜೊತೆ ಒಂದಷ್ಟು ಹೊತ್ತಾದರೂ ಸಮಯವನ್ನವರು ಕಳೆಯುತ್ತಿದ್ದರು. ಅಂತಹ ಹೊತ್ತುಗಳು ಮುತ್ತುಗಳಾಗಿರುತ್ತಿದ್ದವು.ಅವರ ಸಾಮಿಪ್ಯವೇ ಹಾಗಿತ್ತು.ಅವರೊಂದಿಗೆ ಇದ್ದಷ್ಟು ಸಮಯ ಹತ್ತಲವು ವಿಚಾರಗಳ ಕುರಿತಂತೆ ತರ್ಕಿಸಿ, ಚರ್ಚಿಸಿ ಅರಿತುಕೊಂಡು, ಸೂರ್ಯನಿಂದ ಬೆಳಕನ್ನು ಪಡೆದು ಬೆಳಗುವ ಚಂದಿರನಂತಹ ಭಾಗ್ಯ ನಮಗೊದಗುತ್ತಿತ್ತು.



ಅವರ ಎಂಭತ್ತರ ಸಂಭ್ರಮಗಳಲ್ಲಿ ಪಾಲ್ಗೊಂಡು ನನ್ನ ಅಳಿಲು ಸೇವೆಯನ್ನು ಸಲ್ಲಿಸಿ ಅವರ ಪ್ರೀತಿ-ಒಲುಮೆಯ ಆಶೀರ್ವಾದಕ್ಕೆ ತಲೆಬಾಗಿ ನಮಿಸಿದ್ದೆ. ಅಷ್ಟೇ ಯಾಕೆ ಬನ್ನಂಜೆ ಎಂಬವೈದುಷ್ಯದ ಬೆರಗನ್ನು ಸ್ವೀಕರಿಸಲಾಗುವಷ್ಟನ್ನು ಸ್ವೀಕರಿಸಿ, ಅನುಭವಿಸಿ ಅವರ ಜ್ಞಾನ ಸಾಗರದಿಂದ

ಬೊಗಸೆಯಲ್ಲಿ ತುಂಬುವಷ್ಟನ್ನು ತುಂಬಿಸಿಕೊಂಡೆ. ಜೊತೆಗೆ ಬನ್ನಂಜೆ ಕಡಲಲ್ಲಿ ಪಾದಗಳನ್ನೂ ಅದ್ದಿಸಿಕೊಂಡು ದಕ್ಕಿದಷ್ಟನ್ನು ದಕ್ಕಿಸಿಕೊಂಡು ಕೃತಾರ್ಥನಾದೆ. ಗುರುವರ್ಯರೇ ನಿಮಗೆ ನೀವೇ ಇತಿಯೂ-ಗತಿಯೂ. ಪ್ರಣಾಮ...

courtesy: fb

Ads on article

Advertise in articles 1

advertising articles 2

Advertise under the article