LDF Leads, BJP gains in Kerala | ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಎಡ ಪಾರಮ್ಯ, ಬಿಜೆಪಿ ಉತ್ತಮ ಸಾಧನೆ
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಸಾಧನೆ ಮಾಡಿದೆ. ಆಡಳಿತಾರೂಢ ಎಡರಂಗ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ತನ್ನ ಪಾರಮ್ಯವನ್ನು ಮೆರೆದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ್ದ ಯುಡಿಎಫ್ ಮಾತ್ರ ಕಳಪೆ ಸಾಧನೆ ಮಾಡಿದೆ.
941 ಗ್ರಾಮ ಪಂಚಾಯತ್‌ಗಳ ಪೈಕಿ ಎಡ ರಂಗ 517ರಲ್ಲಿ ಜಯ ಸಾಧಿಸಿದೆ. ಐಕ್ಯ ಪ್ರಜಾಸತ್ತಾತ್ಮಕ ರಂಗ 374 ಸ್ಥಾನಗಳಲ್ಲಿ ತಮ್ಮ ಮೇಲುಗೈ ಉಳಿಸಿಕೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 22 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಅದ್ಭುತ ಸಾಧನೆ ಎಂದು ಬಣ್ಣಿಸಲಾಗಿದೆ.
ಇನ್ನು ಮಹಾನಗರ ಪಾಲಿಕೆಯಲ್ಲೂ ಎಲ್‌ಡಿಎಫ್ ಭರ್ಜರಿ ಜಯ ಗಳಿಸಿದೆ. 6 ಪಾಲಿಕೆಗಳ ಪೈಕಿ 4 ಪಾಲಿಕೆಯನ್ನು ತನ್ನದಾಗಿಸಿಕೊಂಡಿದೆ. ಉಳಿದ ಎರಡರಲ್ಲಿ ಕಾಂಗ್ರೆಸ್ ನೇತೃತ್ವದ ಐಕ್ಯ ರಂಗ ಗೆದ್ದು ತೃಪ್ತಿಪಟ್ಟುಕೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಯಾವುದೇ ಪಾಲಿಕೆಯನ್ನೂ ಮುನ್ನಡೆ ಸಾಧಿಸಲಿಲ್ಲ.
ಪ್ರತಿಷ್ಠಿತ ತಿರುವನಂತಪುರಂ ಪಾಲಿಕೆಯ 100 ವಾರ್ಡ್‌ಗಳ ಪೈಕಿ ಎಲ್‌ಡಿಎಫ್50 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಬಿಜೆಪಿ 30 ಸ್ಥಾನಗಳನ್ನು ಗೆದ್ದು ಪ್ರಧಾನ ಪ್ರತಿಪಕ್ಷದ ಸ್ಥಾನವನ್ನು ಅಲಂಕರಿಸಿಕೊಂಡಿದೆ. ಯುಡಿಎಫ್ ಮಾತ್ರ ಕೇವಲ 9 ಕ್ಷೇತ್ರಗಳಲ್ಲಿ ಗೆದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ಸಲ ಬಿಜೆಪಿ 34 ಸ್ಥಾನಗಳನ್ನು ಗೆದ್ದು ಈ ಬಾರಿ ಅಧಿಕಾರ ಹಿಡಿಯುವ ಲಕ್ಷಣ ತೋರಿಸಿತ್ತು.
ಆದರೆ, ಮುನ್ಸಿಪಲ್ ಚುನಾವಣೆಗಳಲ್ಲಿ ಬಿಜೆಪಿ ಹಿಂದೆ ಬಿದ್ದಿದೆ. 86 ಮುನ್ಸಿಪಲ್‌ಗಳ ಪೈಕಿ 45ರಲ್ಲಿ ಎಡರಂಗ ತನ್ನ ಬಾವುಟವನ್ನು ಹಾರಿಸಿದೆ. 35ರಲ್ಲಿ ಕೈ ನೇತೃತ್ವದ ಐಕ್ಯರಂಗ ಪಾರಮ್ಯ ಮೆರೆದಿದೆ. ಇತರರು 4ರಲ್ಲಿ ಹಾಗೂ ಬಿಜೆಪಿ 2ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಜಿಲ್ಲಾ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ 14ರಲ್ಲಿ 10 ಸ್ಥಾನವನ್ನು ಎಲ್‌ಡಿಎಫ್ ಬಾಚಿಕೊಂಡಿದೆ. 4 ಸ್ಥಾನ ಕೈ ಪಾಲಾಗಿದೆ. ಬಿಜೆಪಿ ಮಾತ್ರ ಸೊನ್ನೆ ಸುತ್ತಿದೆ.