B Y Vijayendra | ಬಿಎಸ್‌ವೈ ಉತ್ತರಾಧಿಕಾರಿ ಪಟ್ಟಕ್ಕೆ ಸಜ್ಜಾಗುತ್ತಿರುವ ವಿಜಯೇಂದ್ರ: ಬೆಂಬಲವಾಗಿ ನಿಂತ ಲಿಂಗಾಯತ ಸಮಾಜ!
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಬಿಎಸ್‌ವೈ ಅವರ ಮುಂದಿನ ಉತ್ತರಾಧಿಕಾರಿಯನ್ನಾಗಿ ಬಿಂಬಿಸಲು ಲಿಂಗಾಯಿತ ಸಮುದಾಯ ತಯಾರಿ ನಡೆಸಿದೆ.
ಇದೇ ಹಿನ್ನೆಲೆಯಲ್ಲಿ ಬರಲಿರುವ ಬಸವ ಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜಯೇಂದ್ರ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲು ವರಿಷ್ಠರ ಮೇಲೆ ಒತ್ತಡ ಹೇರಲು ಲಿಂಗಾಯತ ಸಮಾಜ ನಿರ್ಧರಿಸಿದೆ.
ವಿಜಯೇಂದರ ಅವರ ಸಂಘಟನಾ ಚಾತುರ್ಯ, ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ಹೈ ಕಮಾಂಡ್ ಗೂ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ. ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾದ ಲಿಂಗಾಯಿತ ಸಮಾಜ ವಿಜಯೇಂದ್ರ ಅವರನ್ನು ಸರ್ವಸಮ್ಮತದ ನಾಯಕರನ್ನಾಗಿ ರೂಪಿಸಲಾಗುತ್ತಿದೆ. ಇದರ ಹಿಂದೆ ರಾಜಕೀಯ ಲೆಕ್ಕಾಚಾರವಿದ್ದು, ಈ ಬಗ್ಗೆ ಬಿಜೆಪಿಯ ವರಿಷ್ಠರಿಗೂ ಸ್ಪಷ್ಟ ಸಂದೇಶ ರವಾನೆಯಾಗಿದೆ.
ಮರಾಠ ಪ್ರಾಧಿಕಾರ ರಚನೆಯನ್ನು ವಿಜಯೇಂದ್ರ ಅವರು ಬೆಂಬಲಿಸಿದ್ದಾರೆ. ಇದಕ್ಕೆ ಪ್ರಬಲ ಕಾರಣವೂ ಇದೆ. ಬಸವ ಕಲ್ಯಾಣ ಕ್ಷೇತ್ರದ ಒಟ್ಟು ಮತದಾರರ ಪೈಕಿ ಶೇಕಡಾ 47ರಷ್ಟು ಮರಾಠ ನಾಯಕ ಸಮುದಾಯ ಪಂಗಡದ ಮತಗಳಿವೆ. ಇದೇ ಕ್ಷೇತ್ರದಲ್ಲಿ ಶೇಕಡಾ 58ರಷ್ಟು ಲಿಂಗಾಯಿತರಿದ್ದಾರೆ.
ನಿರಂತರ ಜನ ಸಂಪರ್ಕದೊಂದಿಗೆ ಕಾರ್ಯಕರ್ತರ ವಿಶ್ವಾಸ ಗಳಿಸುತ್ತಿರುವ ವಿಜಯೇಂದ್ರ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವತ್ತ ಗಮನ ಹರಿಸಿದ್ದಾರೆ.
ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಭದ್ರ ಕೋಟೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಹಿಂದೆ ವಿಜಯೇಂದ್ರ ಅವರ ಪರಿಶ್ರಮ ಇದೆ. ಇದನ್ನು ಕಾರ್ಯಕರ್ತರೂ ಒಪ್ಪುತ್ತಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವಿಜಯೇಂದ್ರ ಅವರ ಬೆಂಬಲಿಗರ ಒಂದು ಬ್ರಿಗೇಡ್ ಆರಂಭಗೊಂಡಿದೆ.