C.T. Ravi on ED Raid | ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ: ಬಾಲ ಬಿಚ್ಚಿದ್ರೆ ಬಾಲಾನೂ ಕಟ್..ತಲೇನೂ ಕಟ್... ಅಂದದ್ದು ಯಾಕೆ..?
ಬೆಂಗಳೂರು: ತಮ್ಮ ಕಠಿಣ ಮಾತುಗಳಿಗೆ ಖ್ಯಾತಿ ಪಡೆದಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗ್ರಾಸವಾಗಿದ್ದಾರೆ.
ಪಿಎಫ್‌ಐ ವಿದೇಶಿ ನಿಧಿ ಸಂಗ್ರಹದ ಬಗ್ಗೆ ಜಾರಿ ನಿರ್ದೇಶನಾಲಯದ ತನಿಖೆ ನಡೆಯುತ್ತಿದೆ. ಇಲ್ಲಿ ಅಕ್ರಮ ಹಣ ಚಲಾವಣೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅಕ್ರಮ ಹಣ ಚಲಾವಣೆ ಕುರಿತ ತನಿಖೆ ನಡೆಸಬಾರದು ಎಂದು ಹೇಳಲು ಪಿಎಫ್‌ಐ ಯಾರು...? ಎಂದು ಸಿ.ಟಿ. ರವಿ ಖಾರವಾಗಿ ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಚೇರಿ ಮೇಲೆ ಸಿಎಫ್‌ಐ ಕಾರ್ಯಕರ್ತರು ಮುತ್ತಿಗೆ ಹಾಕಿರುವುದು ಸರಿಯಲ್ಲ. ಸಿಎಫ್‌ಐ ಈಗ ಬಾಲ ಬಿಚ್ಚಿ ಮೆರೆಯುವ ಕಾಲ ಈಗ ಇಲ್ಲ. ಅವರ ಆಟ ಈಗ ಏನೂ ನಡೆಯದು. ಬಾಲ ಬಿಚ್ಚಿದರೆ ಬಾಲಾನೂ ಕಟ್, ತಲೇನೂ ಕಟ್ ಮಾಡಬೇಕಾಗುತ್ತದೆ ಎಂದು ಮಾತಿನ ಭರದಲ್ಲಿ ಹೇಳಿದ್ದಾರೆ.
ಸಿಎಎ ವಿರುದ್ಧದ ಪ್ರತಿಭಟನೆಗೆ ದೇಶ-ವಿದೇಶದಿಂದ ನೂರಾರು ಕೋಟಿ ಅಕ್ರಮ ಹಣ ಹರಿದು ಬಂದಿದೆ ಎಂಬ ಮಾಹಿತಿಗಳು ಇದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಅವರು ತನಿಖೆ ನಡೆಸಿದರೆ, ಇವರು ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದು ಏಕೆ...? ಎಂದು ಸಿ.ಟಿ. ರವಿ ಪ್ರಶ್ನಿಸಿದರು.
ಭಾರತ ಇರುವುದು ಭಯೋತ್ಪಾದನೆ ಮಾಡಲು ಇಲ್ಲ. ಭಯೋತ್ಪಾದನೆಗೆ ವಿದೇಶದಿಂದ ಹಣ ಬರುವುದನ್ನು ತನಿಖೆ ನಡೆಸಲೇ ಬೇಕಾಗಿದೆ. ಇದು ರಾಷ್ಟ್ರದ ಹಿತದೃಷ್ಟಿಯಿಂದ ಆಗಬೇಕಾದ ತುರ್ತು ಕಾರ್ಯ ಎಂದು ಅವರು ಇಡಿ ತನಿಖೆಯನ್ನು ಸಮರ್ಥಿಸಿಕೊಂಡರು.