-->
Loan App EXCLUSIVE | ಈ ಸ್ಟೋರಿ ತಪ್ಪದೆ ಓದಿ- ಸುಲಭ ಸಾಲಕ್ಕೆ ಮರುಳಾದಿರಿ ಜೋಕೆ: "ಲೋನ್" ಆಪ್‌ಗಳಿಗೆ ಬಲಿಯಾದರೆ ಬದುಕೇ ದುರ್ಭರ!

Loan App EXCLUSIVE | ಈ ಸ್ಟೋರಿ ತಪ್ಪದೆ ಓದಿ- ಸುಲಭ ಸಾಲಕ್ಕೆ ಮರುಳಾದಿರಿ ಜೋಕೆ: "ಲೋನ್" ಆಪ್‌ಗಳಿಗೆ ಬಲಿಯಾದರೆ ಬದುಕೇ ದುರ್ಭರ!






ಆಂಡ್ರಾಯ್ಡ್ ಫೋನ್ ಜಿಯೋ ನೆಟ್ ವರ್ಕ್ ಬಂದ ಮೇಲೆ... ಇಂಟರ್ನೆಟ್ ಬಳಕೆ ಸರ್ವೇ ಸಾಮಾನ್ಯವಾಗಿದೆ. ಇನ್ನು ಲಾಕ್ ಡೌನ್ ಅವಧಿಯಲ್ಲಿ ಸಾವಿರಾರು ಆಪ್‌ಗಳು ಸಾಲದ ಭರ್ಜರಿ ಆಫರ್ ನೀಡಿದ್ದವು.‌ಯಾವುದೇ ಡಾಕ್ಯುಮೆಂಟ್ ಬೇಕಿಲ್ಲ, ಅರ್ಧ ಗಂಟೆಯಲ್ಲಿ ಸಾಲ ನೀಡುತ್ತೇವೆ ಎಂಬ ಆಹ್ವಾನಗಳು ಇವೆ.‌ ಇದಿಷ್ಟೆ ಅಲ್ಲ ಬೈಕ್/ಸ್ಕೂಟರ್ without down payment book ಮಾಡಿ ಎನ್ನುವ ಆಫರ್ ಗಳು ಫೇಸ್ ಬುಕ್‌ನಲ್ಲಿ ಬರ್ತವೆ.


ಎಸ್ ಎಂ‌ಎಸ್ ಗಮನಿಸುವವರಾದರೆ ನಿಮ್ಮ ಅಕೌಂಟ್ ಡೀಟೇಲ್ಸ್ ಕೊಡಿ ಕೆಲವೇ ಕ್ಷಣಗಳಲ್ಲಿ ಇಂತಿಷ್ಟು ಹಣ ನಿಮ್ಮ ಅಕೌಂಟಿಗೆ ಬರುತ್ತೆ ಎಂಬ ಸಂದೇಶಗಳು ನಿರಂತರವಾಗಿ ಬರುತ್ತವೆ. ಇವು ಎಷ್ಡು ವಂಚನೆಯ ಜಾಲ ಹೊಂದಿವೆ ಎಂಬ ಕುರಿತು ಫೇಸ್ ಬುಕ್ ನಲ್ಲಿ @RoopaLakshmi ಬರೆದಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ಇಂತಹ ಕಂಪೆನಿಗಳ ಮೇಲೆ ‌ರೇಡ್‌‌ ಆಗಿ‌ ಪ್ರಕರಣವೂ ದಾಖಲಾಗಿದೆ.‌


ಮೋಸದ ಕಂಪೆನಿಗಳ ಜಾಲದಲ್ಲಿ ನೀವು ಸಿಲುಕಿರ ಬಹುದು, ಅಥವ ಅಂತಹ ಆಹ್ವಾನದ‌ ಸಂದೇಶ ಪಡೆದಿರ ಬಹುದು.. ಹಾಗಿದ್ದಲ್ಲಿ ಅವಶ್ಯವಾಗಿ ಓದಲೇ‌ಬೇಕಾದ ಬರಹ ಇದು..‌ಓದಿಕೊಳ್ಳಿ..

| ಅರಕಲಗೂಡು ಜಯಕುಮಾರ್


ಸಾಲದ ಆಪ್‌ಗಳ ವಂಚನೆ ಹೀಗಿರುತ್ತೆ.....

Article by RoopaLakshmi


ಒಂದು ತಿಂಗಳಿಂದ ಈ ಲೋನ್ ಆಪ್ ಗಳ ಬಗ್ಗೆ ಬರೆಯಬೇಕು ಅಂತಂದುಕೊಂಡರೂ, ಈ ಆಪ್ ಗಳು RBI ಕಣ್ಣು ತಪ್ಪಿಸಿ, ಹೇಗೆ ರಂಗೋಲಿ ಕೆಳಗೆ ತೂರುತ್ತಿವೆ? ಅನ್ನೋದು ಸರಿಯಾಗಿ ಅರ್ಥವಾಗದಿದ್ದುದರಿಂದ ಬರೆಯೋಕೆ ಆಗಿರಲಿಲ್ಲ.


ನಿಮಗೆ ಅರ್ಜೆಂಟಾಗಿ ಸಾಲ ಬೇಕು. ಏನು ಮಾಡ್ತೀರಿ? ಅಸಂಖ್ಯಾತ ಆಪ್ ಗಳು ನಿಮ್ಮ KYC ಡಿಟೇಲ್ಸ್ ಕೊಟ್ಟರೆ ಸಾಕು, ಕೊಡ್ತೀವಿ ಅಂತಾ ಮುಂದು ಬರ್ತಾರೆ. ಅದು ಕೂಡ ಕೇವಲ ಅರ್ಧ ಗಂಟೇಲಿ! ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಟ್ರಾನ್ಸ್ಫರ್ ಆಗುತ್ತದೆ. ಆದರೆ ಅದಕ್ಕೊಂದಿಷ್ಟು ಕಂಡೀಷನ್ ಗಳಿವೆ. ನೀವು ನಿಮ್ಮ ಮೊಬೈಲಿನ ಕಾಂಟಾಕ್ಟ್ಸ್ ಮತ್ತು SMS ಗಳಿಗೆ access ಕೊಡಬೇಕು. ನಿಮ್ಮ ಆಧಾರ್, ಪ್ಯಾನ್ ಕಾರ್ಡ್ ಡಿಟೇಲ್ಸ್ ಮತ್ತು ನಿಮ್ಮ ಬ್ಯಾಂಕ್ ಖಾತೆಯ ವಿವರ ಕೊಟ್ಟರಾಯಿತು, ಅಕೌಂಟಿಗೆ ಹಣ ಬರುತ್ತದೆ.


9000 ಸಾಲ ತೊಗೊಂಡ್ರೆ ಹತ್ತು ದಿವಸಗಳಿಗೆ ಬಡ್ಡಿ 90 ರೂಗಳು, Processing Fee ಅಂತಾ 2350 ಮತ್ತು GST 400! ಅಂದ್ರೆ ನಿಮ್ಮ ಖಾತೆಗೆ ಬರೋದು 6250/- ರೂಗಳು ಮಾತ್ರ.‌ ನೀವು ಕಟ್ಟಬೇಕಿರುವುದು ಹತ್ತು ದಿವಸಗಳಲ್ಲಿ 9090 ರೂ.! ಅಂದ್ರೆ ಹತ್ತು ದಿವಸಗಳಿಗೆ ನೀವು ಕಟ್ಟುವ ಬಡ್ಡಿ 45% ! ಅಂದ್ರೆ RBI ಮತ್ತು ಕರ್ನಾಟಕದ Money Lending Act ಪ್ರಕಾರ ಇದು ಕಾನೂನು ಬಾಹಿರ. ಆದರೂ ರಾಶಿ ರಾಶಿ ಆಪ್ ಗಳು ಜನರ ಜೀವವನ್ನು / ಜೀವನವನ್ನು ಈ ಕೊರೊನಾ ಪಾಂಡೆಮಿಕ್ ಸಮಯದಲ್ಲಿ ಹಿಂಡಿ ಹಿಪ್ಪೆ ಮಾಡುತ್ತಿವೆ.


ಕೆಲವು ಆಪ್ ಗಳು ಕೇವಲ ಐದಾರು ದಿವಸಗಳ ಸಮಯ ಕೊಟ್ಟರೆ, ಕೆಲವು ಹತ್ತು ದಿವಸಗಳ ಸಮಯ ಕೊಡುತ್ತವೆ. ಹಾಗೂ ಇಂತಹದಕ್ಕೆ ಬಲಿ ಬೀಳುವವರು ಕೆಳ ಮಧ್ಯಮ ವರ್ಗದ ಅಥವಾ ಮಧ್ಯಮ ವರ್ಗದ ಜನರು ಮಾತ್ರ.‌ ಇವರೇನೂ ಲಕ್ಷಗಟ್ಟಲೆ ಸಾಲ ಕೊಡೋಲ್ಲ. 1000, 2000, 5000 ಹೀಗೆ ಅಷ್ಟೆ ಕೊಡೋದು. ನೀವು ನೂರಾರು ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡರೆ ಮಾತ್ರ ಲಕ್ಷಗಟ್ಟಲೆ ತೊಗೋಬಹುದು. ಒಂದು ಆಪ್ ನ ಸಾಲ ಕಟ್ಟಲು ಮೂರು ಆಪ್ ಗಳಿಂದ ಸಾಲ ತೊಗೋತಾರೆ, ಮೂರು ಆಪ್ ಗಳ ಸಾಲ ಕಟ್ಟೋಕೆ ಒಂಭತ್ತು ಆಪ್ ಗಳ ಸಹಾಯ ಹೀಗೆ ಚೈನ್ ಲಿಂಕ್ ನಡೆಯುತ್ತದೆ.


ಅಕಸ್ಮಾತ್ ನೀವು ಸಾಲ ಮರುಪಾವತಿ ಮಾಡಲು ಅರ್ಧ ಗಂಟೆ ತಡವಾದರೂ, "ಈ ಹೆಸರಿನವರು ನಮ್ಮ ಬಳಿ ಸಾಲ ತೆಗೆದುಕೊಂಡಿದ್ದಾರೆ, ಅವರು ನಿಮ್ಮ ಹೆಸರನ್ನು ಶ್ಯೂರಿಟಿಯಾಗಿ ಕೊಟ್ಟಿದ್ದಾರೆ, ನೀವೀಗ ಹಣವನ್ನು ಕಟ್ಟದಿದ್ದರೆ, ನಿಮ್ಮ ಹೆಸರಿಗೆ ಲೀಗಲ್ ನೋಟೀಸ್ ಬರುವುದು" ಎಂಬ ಮೆಸೇಜ್ ನಿಮ್ಮ ಮೊಬೈಲಿನ ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆಲ್ಲಾ ಹೋಗುತ್ತದೆ. ಅವಮಾನ ತಡೆಯಲಾಗದೆ, ನೀವು ಕಟ್ಟುತ್ತೀರಿ ಎಂಬ ಐಡಿಯಾ ಅವರದ್ದು. ಕಟ್ಟಲೇಬೇಕೆಂಬ ಅನಿವಾರ್ಯತೆ ಬಿದ್ದ ಕೂಡಲೇ, ನೀವು ಹಣ ಹೊಂದಿಸಲು ಮತ್ತದೇ ಆಪ್ ಗಳ ಮೊರೆ ಹೋದಿರಿ ಎಂದಿಟ್ಟುಕೊಳ್ಳಿ, ಅಲ್ಲಿಗೆ ನಿಮಗೆ ಈ ವಿಷವರ್ತುಲದಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ.


ನನ್ನ ಆಸ್ಪತ್ರೆಯಲ್ಲಿ ಈ‌ ಹಿಂದೆ ಕೆಲಸ ಮಾಡುತ್ತಿದ್ದ ಒಂದಿಬ್ಬರು ಸ್ಟಾಫ್ ಗಳು 20 ಸಾವಿರ ಹಣದ ಅವಶ್ಯಕತೆ ಬಂದಾಗ,‌ ಈ ಆಪ್ ಗಳಲ್ಲಿ ಸಾಲ ಮಾಡಿ, ಕನಿಷ್ಟವೆಂದರೂ ಎರಡು ಲಕ್ಷ ಸಾಲ ವಾಪಾಸ್ಸು ಕಟ್ಟಿದ್ದಾರೆ. ಅದು ಕೂಡ ಬರೀ ನಾಲ್ಕೈದು ತಿಂಗಳಲ್ಲಿ. ಅಷ್ಟು ಕಟ್ಟಿದರೂ, ಮತ್ತೆ ಕಟ್ಟಲು ಇನ್ನೂ ೨.೫ ಲಕ್ಷ ಬಾಕಿ ಇದೆ! ಅವಮಾನ ತಡೆಯಲಾರದೆ, ಆಕೆ ಒಂದೆರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಕೂಡ ಆಲೋಚಿಸಿದ್ದಳಂತೆ! :(


ಆನ್ಲೈನ್ ಗ್ಯಾಂಬ್ಲಿಂಗ್ ಗಿಂತ NBFC ಗಳ ಈ ಆನ್ಲೈನ್ ಸಾಲ ಜನರನ್ನು ಜಾಸ್ತಿ ಬೀದಿಗೆ ತಳ್ಳುತ್ತಿದೆ. ಈ ಒಂದು ವಾರದಲ್ಲಿ ನನ್ನ ಗಮನಕ್ಕೆ ನಾಲ್ಕೈದು ಮಂದಿ ಬಂದಿದ್ದಾರೆ ಅಂದರೆ ಇದು ಭಾರತದಲ್ಲಿ ಎಷ್ಟರ ಮಟ್ಟಿಗೆ ವ್ಯಾಪಿಸಿರಬಹುದು, ಎಷ್ಟು ಜನರನ್ನು ಹಾಳು ಮಾಡಿರಬಹುದು? ಹತ್ತು ದಿವಸಗಳಿಗೆ 45% ಬಡ್ಡಿಯಾದರೆ ಒಂದು ತಿಂಗಳಿಗೆ ಎಷ್ಟು ಬಡ್ಡಿಯಾಗಬಹುದು? ಜನರು ಅಷ್ಟೊಂದು ಬಡ್ಡಿ ಕಟ್ಟಿ, ನಿಜವಾಗಿಯೂ ಬದುಕಲು ಸಾಧ್ಯವೇ? :(


(ಮೊನ್ನೆ ಸಿಸಿಬಿಯವರು ಈ ಲೋನ್ ಆಪ್ ಗಳ ಮೇಲೆ ಆಕ್ಷನ್ ತೊಗೊತೀವಿ ಅಂತಾ ಹೇಳಿದ್ದಾರಂತೆ! ಆದರೆ ಸಿಸಿಬಿಯಲ್ಲಿ ಪೊಲೀಸ್ ಸ್ಟೇಷನ್ ಗಳಿಗಿಂತ ಜಾಸ್ತಿ ಭ್ರಷ್ಟಾಚಾರವಿದೆ. ಆರಾಮಾಗಿ ಆಪ್ ಗಳವರು / NBFC ಗಳು ತಪ್ಪಿಸಿಕೊಂಡು, ಮತ್ತೆ ಬೇರೆ ಯಾವುದೋ ರೂಪದಲ್ಲಿ ಜನರನ್ನು ಕಾಡುತ್ತವೆ)

Ads on article

Advertise in articles 1

advertising articles 2

Advertise under the article