Farmers Protest | ಕಾವೇರುತ್ತಿರುವ ರೈತ ಹೋರಾಟ: ಅನ್ನದಾತನ ಆತಂಕ, ದಿಲ್ಲಿ ಚಲೋ, ಸರ್ಕಾರದ ಪ್ರತಿಷ್ಠೆ
|ಅರಕಲಗೂಡು ಜಯಕುಮಾರ್, ಹಿರಿಯ ಪತ್ರಕರ್ತರು
emungaru special: ಸರಿ ಸುಮಾರು ಒಂದೂವರೆ ಲಕ್ಷ ಮಂದಿ ರೈತರು ವಾರದಿಂದ ನಡೆಸುತ್ತಿರುವ ದಿಲ್ಲಿ ಚಲೋ ಚಳುವಳಿಗೆ ಈ ಹೊತ್ತಿನಲ್ಲಿ ಮಹತ್ವ ಬಂದಿದೆ. ಅಧಿಕಾರಸ್ಥರು ಮಾಡುವ ಯಾವುದೇ ಕಾನೂನುಗಳು ಅಥವ ಯೋಜನೆಗಳು ಜನಸ್ನೇಹಿಯಾಗಿರ ಬೇಕು, ವಿಶ್ವಾಸಪೂರ್ವಕವಾಗಿರ ಬೇಕು. ಅದು ಮಿತಿಗಳನ್ನು ದಾಟಿ ಪ್ರಕಟವಾದಾಗ ಇಂತಹ ಚಳುವಳಿಗಳು ಭುಗಿಲೇಳುತ್ತವೆ. ಒಂದು ವಾರದಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿಯಲ್ಲಿ ಪ್ರಧಾನವಾಗಿ ಪಂಜಾಬ್ ಮತ್ತು ಹರ್ಯಾಣದ ರೈತರು ಪಾಲ್ಗೊಂಡಿದ್ದಾರೆ. ಇವರಿಗೆ ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಕಾಂಡ, ಮದ್ಯಪ್ರದೇಶ ರಾಜ್ಯಗಳ ರೈತ ಸಂಘಟನೆಗಳ ಭಾರೀ ಬೆಂಬಲ ವ್ಯಕ್ತವಾಗಿದೆ. 35ಕ್ಕೂ ರೈತ ಸಂಘಟನೆಗಳ ಜೊತೆಗೆ, ಖಾಪ್ ಸಂಘಟನೆಗಳು ಬೆಂಬಲಿಸಿವೆ. ಪಂಜಾಬ್ ನಿಂದ ದೆಹಲಿಗೆ ಆಗಮಿಸುತ್ತಿದ್ದ ರೈತರನ್ನು ಹರ್ಯಾಣದಲ್ಲಿ ತಡೆಯುವ ಪ್ರಯತ್ನಗಳು ವಿಫಲವಾಗಿದೆ. ಪ್ರವಾಹದಂತೆ ದೆಹಲಿಯೆಡೆಗೆ ಮುನ್ನುಗ್ಗಿ ಬರುತ್ತಿರುವ ರೈತರನ್ನು ತಡೆಯಲು ಜಲಫಿರಂಗಿ ಬಳಸಲಾಯಿತು. ಆದರೆ ರೈತ ಶಕ್ತಿಯ ಮುಂದೆ ತಡೆಯುವ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ದೆಹಲಿಯ ಮದ್ಯಭಾಗದಲ್ಲಿ ಪ್ರತಿಭಟನೆಗೆ ಅವಕಾಶ ನೀಡ ಬೇಕು ಎನ್ನುವ ರೈತ ಸಂಘಟನೆಗಳನ್ನು ದೆಹಲಿ ಪ್ರವೇಶಿಸುವ ದ್ವಾರದಲ್ಲೇ ತಡೆದು ನಿಲ್ಲಿಸಲಾಗಿದೆ. ದೆಹಲಿ ಪ್ರವೇಶಿಸುವ ಮುಖ್ಯ ದ್ವಾರಗಳನ್ನೇ ಅಗೆಯಲಾಗಿದೆ, ಭಾರೀ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ, ಆದರೆ ರೈತರ ಸಂಖ್ಯೆ ಭದ್ರತಾ ಪಡೆಗಳಿಗಿಂತ ಹೆಚ್ಚಿರುವುದು ಬ ಪೇಚಿಗೆ ಸಿಲುಕಿಸಿದೆ.
emungaru special: |ದಿಲ್ಲಿ ಚಲೋ ಏಕೆ?:
ಇತ್ತೀಚೆಗೆ, ಕೇಂದ್ರ ಸರ್ಕಾರ 2020 ಜೂನ್ 5 ರಂದು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಮೂರು ಮುಖ್ಯ ಮಸೂದೆಗಳು ಈ ಹೊತ್ತಿನಲ್ಲಿ ನಡೆಯುತ್ತಿರುವ ಪ್ರಖರ ರೈತ ಚಳವಳಿಗೆ ಮುಖ್ಯ ಕಾರಣವಾಗಿದೆ. ಆ ಮೂರು ಮುಖ್ಯ ಮಸೂದೆಗಳು ಹೀಗಿವೆ.
1. ಕೃಷಿಕ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ-(ಉತ್ತೇಜನ ಮತ್ತು ಬೆಂಬಲ) ಮಸೂದೆ-2020
2. ಕೃಷಿಕರ -ಸಬಲೀಕರಣ & ಸಂರಕ್ಷಣೆ- ಮೌಲ್ಯ ಭರವಸೆ ಮತ್ತು ಕೃಷಿಕ ಸೇವೆಗಳ ಒಪ್ಪಂದ ಮಸೂದೆ-2020
3. ಅಗತ್ಯ ಸರಕುಗಳ ಮಸೂದೆ( ತಿದ್ದುಪಡಿ)-2020
ಆದರೆ, ಈ ಕಾಯ್ದೆಗಳ ಬಗೆಗೆ ಯಾವುದೇ ಮಾಹಿತಿ ಇಲ್ಲದೆ, ಪ್ರಾಥಮಿಕ ಜ್ಞಾನದ ಕೊರತೆಯಿಂದ ಅಪನಂಬಿಕೆಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳುತ್ತಾರೆ.
ಕೇಂದ್ರದ ಹೊಸ ಕಾಯ್ದೆಯಿಂದ ರೈತರ ಉತ್ಪಾದನೆಗಳಿಗೆ ಕನಿಷ್ಠ ಬೆಂಬಲ ಬೆಲೆ ಪದ್ದತಿ ಸ್ಥಗಿತವಾಗುತ್ತದೆ. ವರ್ಷಗಳು ಕಳೆದಂತೆ ಕಾರ್ಪೊರೇಟ್ ಕಂಪನಿಗಳು ತಮ್ಮದೇ ನೀತಿ-ನಿಯಮಗಳನ್ನು ರೂಪಿಸಿ ರೈತರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತವೆ. ರೈತರು ತಮ್ಮ ಉತ್ಪನ್ನಗಳಿಗೆ ಕಡಿಮೆ ಬೆಲೆ ಪಡೆಯ ಬೇಕಾಗುತ್ತದೆ. ಕಾಯ್ದೆಯಿಂದಾಗಿ ಇದುವರೆಗೆ ಜಾರಿ ಇರುವ ಮಂಡಿ ವ್ಯವಸ್ಥೆ ಹೋಗಿ ಬಿಡುತ್ತದೆ. ಕಷ್ಟ ಸುಖಕ್ಕೆ ಮುಂಗಡವಾಗಿ ಹಣ ನೀಡುತ್ತಿದ್ದ ಏಜೆಂಟುಗಳು ಇಲ್ಲವಾಗುತ್ತಾರೆ ಎಂಬುದು ದಿಲ್ಲಿ ಚಲೋ ಚಳುವಳಿಯಲ್ಲಿ ರೈತರು ಪ್ರತಿಪಾದಿಸುತ್ತಿರುವ ಸಂಗತಿ. ಇದಿಷ್ಟೇ ಅಲ್ಲ ಉದ್ದೇಶಿತ ವಿದ್ಯುತ್ (ತಿದ್ದುಪಡಿ) ಕಾಯ್ದೆ 2020 ಅನ್ನು ಹಿಂದಕ್ಕೆ ಪಡೆಯಿರಿ, ಇದರಿಂದಾಗಿ ರಿಯಾಯ್ತಿ ದರದ ವಿದ್ಯುತ್ ಕೃಷಿ ಬಳಕೆಗೆ ಸಿಗುವುದಿಲ್ಲ ಎಂಬ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
|ಕಾಯ್ದೆಗಳಿಂದ ತೊಂದರೆ ನಿಜವೇ?:
emungaru special: ದೇಶದಲ್ಲಿ ಎಪಿಎಂಸಿ ಮತ್ತು ಎಂಎಸ್ ಪಿ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ರೈತರು-ದಲ್ಲಾಳಿಗಳು-ವ್ಯಾಪಾರಸ್ಥರ ಪಾಲ್ಗೊಳ್ಳುವಿಕೆಯ ಎಪಿಎಂಸಿ ವ್ಯವಸ್ಥೆಯಲ್ಲಿರುವ ಲೋಪ ದೋಷಗಳ ಹೊರತಾಗಿಯೂ ಆಹಾರ ಭದ್ರತೆಯ ಖಾತರಿಗೆ ಇದು ಪೂರಕವಾಗಿದೆ. ಇದೇ ಎಪಿಎಂಸಿಯಲ್ಲಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವ ಎಂಎಸ್ಪಿ ವ್ಯವಸ್ಥೆಯೂ ಜಾರಿಯಲ್ಲಿದೆ. ಆದರೆ ರೈತರೇ ಕೆಲವೇ ಪ್ರಮುಖ ಕೃಷಿ ಉತ್ಪನ್ನಗಳಿಗೆ ಮಾತ್ರ ಕನಿಷ್ಠ ಬೆಂಬಲ ವ್ಯವಸ್ಥೆ ಇದೆ. ಇದು ಪಂಜಾಬ್ ಸೇರಿದಂತೆ ನಾಲ್ಕೈದು ರಾಜ್ಯಗಳ ರೈತರಿಗೆ ಮಾತ್ರ ಅನುಕೂಲಕರವಾಗಿದೆ. ಇನ್ನೂ ಎಪಿಎಂಸಿಯಲ್ಲಿ ಸಶಕ್ತ ನಿರ್ವಹಣಾ ನೀತಿಯ ಕೊರತೆಗಳಿಂದ ವ್ಯಾಪಾರಿಗಳು ಮತ್ತು ದಲ್ಲಾಳಿಗಳ ಪಾರುಪತ್ಯವಿದೆ. ಹಾಗಾಗಿ ತೂಕ, ಪ್ರಮಾಣ ಬೆಲೆ ಪಾವತಿಯಲ್ಲಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ತೊಂದರೆಗಳಿಗೆ ರೈತರ ಹಿತಾಸಕ್ತಿ ಕಾಯುವ ಸುಧಾರಣೆ ಅವಶ್ಯವಿತ್ತು.
ನಮ್ಮ ಮಾನ್ಯ ಪ್ರಧಾನಿಯವರು ಹೇಳುತ್ತಾರೆ, "ಹಳೆ ಎಪಿಎಂಸಿ ವ್ಯವಸ್ಥೆ ತೆಗೆಯುವುದಿಲ್ಲ ಅದು ಹಾಗೆಯೇ ಮುಂದುವರೆಯುತ್ತದೆ. ಆದರೆ ಹೊಸ ಕಾಯ್ದೆಯಲ್ಲಿ ರೈತರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡದೇ ಬಂಡವಾಳ ಶಾಹಿಗಳ ಒಡೆತನ ಮತ್ತು ನಿಯಂತ್ರಣದಲ್ಲಿರುವ ಖಾಸಗಿ ಮಂಡಿಗಳು, ಖಾಸಗಿ ಎಪಿಎಂಸಿಗಳ ಸ್ಥಾಪನೆಗೆ ಅವಕಾಶ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಖಾಸಗಿ ಮಂಡಿಗಳಲ್ಲಿ ಕೊಳ್ಳುವವರು ಹಾಗೂ ವ್ಯಾಪಾರಿಗಳಿಗೆ ತೆರಿಗೆ ಅಥವಾ ಶುಲ್ಕದ ಹೊರೆಯಿಲ್ಲ!".
ಇದು ಎಪಿಎಂಸಿಗಳಿಂದ ಖಾಸಗಿ ಮಂಡಿಗಳ ಕಡೆಗೆ ಹೆಚ್ಚು ಆಕರ್ಷಣೆಗೊಳಗಾಗಲು ಅವಕಾಶ ಮಾಡಿದಂತಾಗುವುದಿಲ್ಲವೇ...? ಕಾರ್ಪೊರೇಟ್ ಹಿತಾಸಕ್ತಿಯಿಂದ ಕಾಲಾನಂತರದಲ್ಲಿ ಕ್ರಮೇಣ ಸರ್ಕಾರಿ ಎಪಿಎಂಸಿಗಳು ಅಳಿದುಹೋಗಲಿದೆಯೋ ಎಂಬುದೂ ರೈತರ ಆತಂಕಕ್ಕೆ ಕಾರಣವಾಗಿದೆ.
ಎಪಿಎಂಸಿ ವ್ಯವಸ್ಥೆ ಸ್ಥಗಿತವಾದರೆ ಸರ್ಕಾರವು ಪಡಿತರ ವ್ಯವಸ್ಥೆಗಾಗಿ ಆಹಾರ ಖರೀದಿಯನ್ನು ನಿಲ್ಲಿಸುವ ಅಪಾಯವಿದೆ. ಹೀಗಾದಾಗ ದೇಶದ ಕೋಟ್ಯಾಂತರ ಮಂದಿ ಬಡವರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ ಎಂಬುದು ವಾದ.
|ನಿಶ್ಚಿತ ಬೆಲೆ :
ಸರ್ಕಾರವು ರೈತರ ಉತ್ಪನ್ನಗಳನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಒಪ್ಪಂದದ ಆಧಾರದಲ್ಲಿ ಗುತ್ತಿಗೆ ನೀಡಲು ಅವಕಾಶ ಮಾಡಿಕೊಡುತ್ತಿದೆ. ಈ ಮಸೂದೆಯ ಪ್ರಕಾರ ರೈತರು ಮತ್ತು ಕಂಪೆನಿಗಳು ಬೆಲೆ, ಗುಣಮಟ್ಟ ಮತ್ತು ಬೆಳೆಗಳ ಬಗ್ಗೆ ಪೂರ್ವಭಾವಿ ಒಪ್ಪಂದ ಮಾಡಿಕೊಳ್ಳಲು ಅವಕಾಶ ಇದೆ ಎಂದು ಕಾಯ್ದೆ ಹೇಳುತ್ತಿದೆ.
ಆದರೆ ಇಂತಹ ಒಪ್ಪಂದಗಳು ಸರ್ಕಾರ ಗುರುತಿಸಲ್ಪಟ್ಟ ಸ್ವತಂತ್ರ ಏಜೆನ್ಸಿಯು ನಿಗದಿ ಮಾಡುವ ಗುಣಮಟ್ಟ ಅಳವಡಿಸಿಕೊಳ್ಳ ಬೇಕು ಮತ್ತು ಅದಕ್ಕೆ ಬದ್ದವಾಗಿರ ಬೇಕು ಎನ್ನುತ್ತದೆ. ಇದು ನ್ಯಾಯಯುತವಾಗಿಲ್ಲ, ಆಕ್ಷೇಪಣೆಗಳಿದ್ದಾಗ ಕಾರ್ಪೊರೇಟ್ ಕಂಪನಿಗಳ ವಿರುದ್ಧ ಸರ್ಕಾರಿ ವ್ಯವಸ್ಥೆಯ ನೀತಿಗಳು ಬಲಹೀನವಾಗುತ್ತವೆ ಎಂಬುದು ಆತಂಕ.
ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ:
emungaru special: ಈ ಕಾಯ್ದೆಯಲ್ಲಿ ಬೃಹತ್ ಕಂಪನಿಗಳಿಗೆ ನಮ್ಮ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಲು ಅವಕಾಶ ಮಾಡಿದೆ. ಕೃಷಿಯ ಉತ್ಪಾದನೆ , ಮಾರಾಟ, ಸಾಗಾಟ, ಸಂಗ್ರಹ ಹಾಗೂ ಬೆಲೆ ನಿಗದಿ ಪ್ರಕ್ರಿಯೆಗಳಲ್ಲಿ ಸರ್ಕಾರದ ಮದ್ಯ ಪ್ರವೇಶದಿಂದ ಈ ಬಾಬತ್ತುಗಳಲ್ಲಿ ವಿದೇಶಿ ಮತ್ತು ಖಾಸಗಿ ಬಂಡವಾಳ ಬರುತ್ತಿಲ್ಲ. ಆದ್ದರಿಂದ ಸರ್ಕಾರ ಈ ತಿದ್ದುಪಡಿ ಮಸೂದೆಯ ಮೂಲಕ ಆಹಾರ ಸರಕುಗಳ ಸಾಗಾಟ, ಸಂಗ್ರಹ ಇತ್ಯಾದಿಗಳಿಗಿದ್ದ ಮಿತಿಯನ್ನು ತೆಗೆದು ಹಾಕಲಾಗುತ್ತದೆ ಮತ್ತು ಆಹಾರ ಸಂಸ್ಕರಣೆ ಉದ್ಯಮಗಳಿಗಾಗಿ ಮತ್ತು ರಫ್ತುಗಳಿಗಾಗಿ ದೊಡ್ಡ ಕಂಪನಿಗಳಿಗೆ ಮಿತಿಯಿಲ್ಲದ ಆಹಾರ ಸಂಗ್ರಹಣೆಗೆ ಅವಕಾಶ ಮಾಡುತ್ತದೆ.
|ಆತಂಕ ಏಕೆ?:
emungaru special: ಈ ಮಸೂದೆಯಿಂದ ಬೃಹತ್ ಪ್ರಮಾಣದಲ್ಲಿ ಆಹಾರ ಸಂಗ್ರಹಣೆಯ ಲಾಭ ಪಡೆಯುವ ಕಂಪನಿಗಳು ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಳ ಮಾಡುತ್ತವಲ್ಲವೇ ಎಂಬುದು ರೈತರ ಪ್ರಶ್ನೆ. ಇದಕ್ಕಿಂತ ಆತಂಕಕಾರಿ ಸಂಗತಿ ಎಂದರೆ ಯುದ್ದ ಮತ್ತು ಕ್ಷಾಮ ಬಂದಾಗಲೂ ಖಾಸಗಿ ಕಂಪನಿಗಳು ರಫ್ತಿಗಾಗಿ ಮತ್ತು ಕೈಗಾರಿಕೋತ್ಪಾದನೆಗಾಗಿ ಮಾಡಿಕೊಂಡ ಸಂಗ್ರಹವನ್ನು ಮುಟ್ಟುವುದಿಲ್ಲ ಎಂಬ ಭರವಸೆ ಮಸೂದೆಯಲ್ಲಿ ಅಡಕವಾಗಿರುವುದು. ಒಟ್ಟಾರೆಯಾಗಿ ಈ ಕಾಯ್ದೆಯು ಪರೋಕ್ಷವಾಗಿ ಕಾಳಸಂತೆ, ಕಳ್ಳದಂಧೆಗೆ ಕಾರಣವಾಗಿ ದೇಶದ ಆರ್ಥಿಕತೆಯನ್ನು ಕೆಡವ ಬಹುದೆಂಬುದು ಚಿಂತಕರ ಅಭಿಮತ.
emungaru special: ಭಾರತ ಕೃಷಿ ಪ್ರದಾನ ದೇಶ. ಗ್ರಾಮೀಣ ಪ್ರದೇಶಗಳ ಅಭಿವೃದ್ದಿ, ಕೃಷಿಗೆ ಉತ್ತೇಜನ, ಮಾರುಕಟ್ಟೆ ವ್ಯವಸ್ಥೆ ಹೀಗೆ ಎಂಬ ಮಾತುಗಳನ್ನೆ ದಶಕಗಳಿಂದ ಕೇಳುತ್ತಲೇ ಬಂದಿದ್ದೇವೆ. ರೈತರ ಹಿತಾಸಕ್ತಿಗೆ ಅನುಷ್ಠಾನಗೊಂಡ ಯೋಜನೆಗಳು ಮತ್ತು ಪ್ರೋತ್ಸಾಹಕ್ಕಿಂತ ವರ್ತಮಾನದಲ್ಲಿ ವ್ಯಾಪಾರಿಗಳಿಗೆ ಮತ್ತು ಬಂಡವಾಳಶಾಹಿಗಳಿಗೆ ದಕ್ಕಿದೆ. ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ಇಂತಹ ನಡೆಗಳು ಲಾಭದಾಯಕವಾದ ಆಸಕ್ತಿಗಳೆಡೆಗೆ ಇರುವುದನ್ನು ಗಮನಿಸ ಬಹುದು. ಅಧಿಕಾರಸ್ಥರು ಮಸೂದೆಗಳನ್ನು ಜಾರಿಗೆ ತರುವಾಗ ಸಾಕಷ್ಟು ಚರ್ಚೆ ನಡೆಸ ಬೇಕಾಗುತ್ತದೆ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕಾಗುತ್ತದೆ. ಸರ್ಕಾರವೇ ಹೇಳುವಂತೆ ಈ ಕಾಯ್ದೆಗಳು ರೈತರ ಹಿತಾಸಕ್ತಿಯನ್ನೇ ಕಾಪಾಡುವಂತಿದ್ದರೆ, ಆ ಕುರಿತು ವಿಸ್ತೃತವಾದ ಜಾಗೃತಿ ಮೂಡಿಸ ಬೇಕಲ್ಲವೇ? ದಿಲ್ಲಿ ಚಲೋ ಚಳುವಳಿಯಲ್ಲಿ ಪಾಲ್ಗೊಂಡು ರಸ್ತೆ ಬದಿಗಳಲ್ಲಿ ಇರುವ ರೈತರಿಗೆ, ಕೋವಿಡ್ 19 ಸೋಂಕಿನ ಈ ಸಂದರ್ಭ ತೊಂದರೆಯಾಗದಿರಲಿ. ಅನ್ನದಾತ ಮತ್ತು ಸರ್ಕಾರದ ನಡುವಿನ ಮಾತುಕತೆ ಯಶಸ್ವಿಯಾಗಲಿ, ಸರ್ಕಾರ ರೈತರ ಹಿತಾಸಕ್ತಿಗೆ ಸ್ಪಂದಿಸಲಿ ರೈತರು ಕ್ಷೇಮವಾಗಿ ನೆಮ್ಮದಿಯಿಂದ ಮನೆಗಳಿಗೆ ಹಿಂತಿರುಗಲಿ.
ರೈತರ ಸಿಟ್ಟಿಗೂ ಕಾರಣವಿದೆ...!
emungaru special: ದೇಶದ ಕೃಷಿರಂಗದಲ್ಲಿ ಪರಿವರ್ತನೆ ತರುವ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಮೂರು ಮಸೂದೆಗಳನ್ನು ಕೇಂದ್ರ ಜಾರಿಗೆ ತಂದಿದೆ. 2020 ರ ಜೂನ್ 5 ರಂದು ಹೊರಡಿಸಲಾದ ಸುಗ್ರೀವಾಜ್ಞೆಗಳ ಮೂಲಕ ಇದು ಅಸ್ತಿತ್ವಕ್ಕೆ ಬಂದಿದೆ. ಮಸೂದೆಯ ಕುರಿತು ವ್ಯಾಪಕ ಚರ್ಚೆ ನಡೆಯದೆ, ಲಾಕ್ ಡೌನ್ ಹೊತ್ತಿನಲ್ಲಿ ತರಾತುರಿಯಿಂದ ಸುಗ್ರೀವಾಜ್ಞೆ ಹೊರಡಿಸಿರುವುದು ಕೂಡ ರೈತರ ಸಿಟ್ಟಿಗೆ ಕಾರಣವಾಗಿದೆ.
ಹೋರಾಟದ ಕಿಚ್ಚನ್ನು ದಮನಿಸುವ ಹುನ್ನಾರ
emungaru special: ದಿಲ್ಲಿ ಚಲೋ ಚಳುವಳಿಯಲ್ಲಿ ಪಾಲ್ಗೊಂಡವರನ್ನು ನಕ್ಸಲರೆಂದು, ಖಲಿಸ್ತಾನ್ ಬೆಂಬಲಿಗರೆಂದು, ಐಶಾರಾಮಿ ಕಾರುಗಳಲ್ಲಿ ಬಂದಿದ್ದಾರೆಂದು, ಬಿರಿಯಾನಿ ತಿನ್ನುತ್ತಿದ್ದಾರೆ ಇವರು ರೈತರೇ ಎಂದು ಪ್ರಶ್ನಿಸುವ ಮೂಲಕ ರೈತ ಸಮುದಾಯಕ್ಕೆ ಅವಮಾನ ಮಾಡಲಾಗುತ್ತಿದೆ. ರೈತ ಶಕ್ತಿ ಬುನಾದಿಯಾಗಿ ಈ ದೇಶ ನಿಂತಿದೆ. ಆಡಳಿತ ವ್ಯವಸ್ಥೆಯ ಎಲ್ಲ ಹಂತಗಳಲ್ಲಿಯೂ ರೈತರೇ ಮಕ್ಕಳೇ ಇರುವಾಗ ರೈತ ಧ್ವನಿಯನ್ನು ಅಡಗಿಸುವ ಹುನ್ನಾರಗಳು ನಡೆಯಲೇ ಬಾರದು.