
Father suicide | ಅಪ್ಪನಿಗೆ ಹೊಡೆದ ಮಗ: ಘಟನೆಯಿಂದ ಬೇಸತ್ತು ಕಟ್ಟಡದಿಂದ ಜಿಗಿದು ತಂದೆ ಆತ್ಮಹತ್ಯೆ
ಸುಳ್ಯ: ಕ್ಷುಲ್ಲಕ ವಿಚಾರಕ್ಕೆ ಮಗನಿಂದಲೇ ಪೆಟ್ಟು ತಿಂದು ಹಲ್ಲೆಗೊಳಗಾದ ತಂದೆ ಮಾನಸಿಕವಾಗಿ ಘಾಸಿಗೊಂಡು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತರನ್ನು ಬಂದಡ್ಕ ನಿವಾಸಿ 69 ವರ್ಷದ ಲಕ್ಷ್ಮಣ ಗೌಡ ಎಂದು ಗುರುತಿಸಲಾಗಿದೆ.
ಕಳೆದ ಡಿಸೆಂಬರ್ 1ರಂದು ಲಕ್ಷ್ಮಣ ಮತ್ತು ಅವರ ಮಗನ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಈ ಸಂದರ್ಭದಲ್ಲಿ ಲಕ್ಷ್ಮಣ ಗೌಡ ಅವರಿಗೆ ಅವರ ಮಗ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದ್ದ. ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು.
ಜಗಳದಲ್ಲಿ ಗಾಯಗೊಂಡಿದ್ದ ತಂದೆ ಲಕ್ಷ್ಮಣ ಗೌಡ ಅವರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿಸೆಂಬರ್ 19ರಂದು ಸೊಸೆ ಊಟ ತರಲೆಂದು ಹೊರಟಾಗ ಲಕ್ಷ್ಮಣ ಆಸ್ಪತ್ರೆಯ ವಾರ್ಡ್‌ನಿಂದ ಹೊರಬಂದು ಈ ಕೃತ್ಯ ಎಸಗಿದ್ದಾರೆ. ಘಟನೆಯಿಂದ ಅವರು ಮಾನಸಿಕವಾಗಿ ತೀವ್ರ ನೊಂದಿದ್ದರು ಎಂದು ಹೇಳಲಾಗಿದೆ.
ಆಸ್ಪತ್ರೆಗೆ ಬಂದ ಮಗ, ಅಪ್ಪನನ್ನು ಹುಡಿಕಿದಾಗ ಎಲ್ಲಿಯೂ ಕಾಣಸಿಗಲಿಲ್ಲ. ಬಳಿಕ ಹುಡುಕಾಡಿದಾಗ ಎರಡನೇ ಮಹಡಿಯಿಂದ ಹಾರಿದ್ದ ಲಕ್ಷ್ಮಣ ಗೌಡ ಶವವಾಗಿ ಆಸ್ಪತ್ರೆಯ ಮೈದಾನದಲ್ಲಿ ಪತ್ತೆಯಾಗಿದ್ದಾರೆ.
ಮೃತರ ಪತ್ನಿ ಲಲಿತಾ ಅವರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಮಗ ಮತ್ತು ಸೊಸೆ ನಿರಂತರವಾಗಿ ಜಗಳ ಮಾಡಿಕೊಳ್ಳುತ್ತಿದ್ದರು. ಈ ಕಾರಣ ಉಂಟಾಗಿದ್ದ ಜಗಳದಿಂದ ಗಾಯಗೊಂಡಿದ್ದ ಲಕ್ಷ್ಮಣ ಗೌಡರು ತೀವ್ರವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.