Goldfinch Prakash Shetty | ಬಂಜಾರಾ ಪ್ರಕಾಶ್ ಶೆಟ್ಟಿ ಅವರಿಂದ ಅಶಕ್ತ-ಬಡ-ನಿರ್ಗತಿಕರಿಗೆ ಕೋಟಿ ರೂ. ಸಹಾಯ
ಎಂಜಿಆರ್ ಗ್ರೂಪ್ ಸಂಸ್ಥೆಯಿಂದ ದ.ಕ.ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯ 800 ಮಂದಿ ಬಡ, ಅಶಕ್ತ, ನಿರ್ಗತಿಕರಿಗೆ ಒಂದು ಕೋಟಿ ರೂ. ಸಹಾಯಧನ ವಿತರಣಾ ಕಾರ್ಯಕ್ರಮ ನಗರದ ಬಂಗ್ರ ಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯಿತು.
ಸಹಾಯಧನ ವಿತರಣೆ ಮಾಡಿ ಮಾತನಾಡಿದ ಎಂಜಿಆರ್ ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಕೆ.ಶೆಟ್ಟಿ ಮಾತನಾಡಿ, ಸನ್ಮಾರ್ಗದಲ್ಲಿ ನಾನು ಉದ್ಯಮದಲ್ಲಿ ಗಳಿಸಿರುವ ಹಣದಲ್ಲಿ ಸಣ್ಣ ಮೊತ್ತದ ಧನಸಹಾಯವನ್ನು ಸತ್ಪಾತ್ರರಿಗೆ ನೀಡುತ್ತಿದ್ದೇನೆ. ನಮ್ಮ ಸಂಸ್ಥೆಯ ಸಾವಿರಾರು ನೌಕರರು ದುಡಿದುದರ ಫಲವಾಗಿ ಇಂದು ನಾನು ಇಷ್ಟೊಂದು ಮೊತ್ತದ ಧನ ಸಹಾಯ ಮಾಡಲು ಸಹಕಾರಿಯಾಗಿದೆ ಎಂದು ಹೇಳಿದರು.
ನಾನು ನನ್ನ 20ವರ್ಷದ ವಯಸ್ಸಿನವರೆಗೂ ಸಾಕಷ್ಟು ಕಷ್ಟಪಟ್ಟಿದ್ದೆ. ಬಳಿಕ ಬೆಂಗಳೂರು ಸೇರಿ ಅಲ್ಲಿ 10 ವರ್ಷಗಳ ಕಾಲ ದುಡಿದುದರ ಫಲಿತಾಂಶ ನನಗೆ 1993ರ ಬಳಿಕ ದೊರಕಲಾರಂಭಿಸಿದೆ. ಕಷ್ಟ ಎಲ್ಲರಿಗೂ ಬರುತ್ತದೆ. ಆದರೆ ಅದನ್ನು ಸಮರ್ಪಕವಾಗಿ ಎದುರಿಸುವ ಛಲ ಇರಬೇಕು. ಆದ್ದರಿಂದ ಇಂದು ಶಿಕ್ಷಣ ಸಹಾಯಧನ ಪಡೆದ 400 ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಾಧನೆ ಮಾಡಿ ಅಶಕ್ತರಿಗೆ ಸಹಾಯ ಮಾಡಬೇಕು ಎಂದು ಪ್ರಕಾಶ್ ಕೆ.ಶೆಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಭರತ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸದಾನಂದ ಶೆಟ್ಟಿ, ಬಂಟರ ಯಾನೇ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಿಜೆಪಿ ಮುಖಂಡ ಗುರ್ಮೆ ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.