-->
IPS Officer Madhukar Shetty | ಐಪಿಎಸ್ ಅಧಿಕಾರಿ ವಡ್ಡರ್ಸೆ ಮಧುಕರ್ ಶೆಟ್ಟಿ ನೆನಪಲ್ಲಿ..- ಮಟ್ಟು ಲೇಖನ

IPS Officer Madhukar Shetty | ಐಪಿಎಸ್ ಅಧಿಕಾರಿ ವಡ್ಡರ್ಸೆ ಮಧುಕರ್ ಶೆಟ್ಟಿ ನೆನಪಲ್ಲಿ..- ಮಟ್ಟು ಲೇಖನ




ಬರಹ: ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು

ಬೆಂಗಳೂರಿನ ವರ್ತೂರು ಕೋಡಿ ವೃತ್ತಕ್ಕೆ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಹೆಸರನ್ನಿಡುವ ಬಿಬಿಎಂಪಿ ಪ್ರಸ್ತಾವವನ್ನು ರಾಜ್ಯ ಸರ್ಕಾರ ತಿರಸ್ಕರಿಸಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮಧುಕರ್ ಬದುಕಿದ್ದಾಗ ನಡೆದಿದ್ದ ಪ್ರಸಂಗವೊಂದು ನೆನಪಾಗುತ್ತಿದೆ.


2014ರ ಜನವರಿ-ಫೆಬ್ರವರಿ ತಿಂಗಳಿರಬಹುದು. ಮಂಗಳೂರಿನ ಬಂಟ್ಟ್ ಹಾಸ್ಟೆಲ್ ಸರ್ಕಲ್ ಗೆ ವಡ್ಡರ್ಸೆ ರಘುರಾಮ ಶೆಟ್ಟಿಯವರ ನಾಮಕರಣ ಮಾಡಬಹುದಲ್ಲಾ ಎಂದು ವಡ್ಡರ್ಸೆಯವರ ಅಳಿಯ ನವೀನ್ ಶೆಟ್ಟಿ ಒಂದು ದಿನ ನನ್ನನ್ನು ಕೇಳಿದ್ದರು. ಆಗ ಮಂಗಳೂರು ಮಹಾನಗರಪಾಲಿಕೆಗೆ ಆಗಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಆಡಳಿತಾಧಿಕಾರಿಯಾಗಿದ್ದರಿಂದ ಅಲ್ಲಿಂದ ಪ್ರಸ್ತಾವ ಹೊರಡಿಸುವುದು ಕಷ್ಟದ ಕೆಲಸವಾಗಿರಲಿಲ್ಲ. ರಾಜ್ಯ ಸರ್ಕಾರದ ಮಟ್ಟದಲ್ಲಿ ಅಂಗೀಕಾರ ಕೊಡಿಸುವ ಜವಾಬ್ದಾರಿ ನನಗಿರಲಿ ಎಂದು ಅವರಿಗೆ ತಿಳಿಸಿದ್ದೆ.

ಅಮೆರಿಕದಲ್ಲಿದ್ದ ಮಧುಕರ್ ಶೆಟ್ಟಿಯವರಿಗೆ ಯಾರ ಮೂಲಕವೋ ಈ ಸುದ್ದಿ ಗೊತ್ತಾಗಿ ಅವರು ಕೆಂಡಾಮಂಡಲವಾಗಿದ್ದರು. ತಕ್ಷಣ ನವೀನ್ ಗೆ ಪೋನ್ ಮಾಡಿ. “ ಬಂಟರ ಸಂಘದ ಎದುರಿನ ಸರ್ಕಲ್ ಗೆ ತಂದೆ ಹೆಸರು ಇಟ್ಟು ಅವರನ್ನು ಆ ಜಾತಿಗೆ ಕಟ್ಟಿಹಾಕುವ ಯೋಚನೆಯಾ ನಿಮಗೆ? ಇದು ಅವರಿಗೆ ಮಾಡುವ ಅವಮಾನವಲ್ಲವೇ? ಎಂದೆಲ್ಲಾ ಕೂಗಾಡಿದ್ದಾರೆ. ಇದೇ ಕೋಪದಿಂದ ವಡ್ಡರ್ಸೆ ಕುಟುಂಬದಲ್ಲಿ ತಾನು ಬಹಳ ಇಷ್ಟಪಡುತ್ತಿದ್ದ ನವೀನ್ ಜೊತೆ ಒಂದೆರಡು ವರ್ಷ ಮಾತುಕತೆಯನ್ನೇ ನಿಲ್ಲಿಸಿಬಿಟ್ಟಿದ್ದರು.


ಅದರ ನಂತರ ಒಂದು ದಿನ ಮಧುಕರ್ ಸಿಕ್ಕಾಗ ಇದನ್ನು ಪ್ರಸ್ತಾಪಿಸಿ ನೀವು ಅಷ್ಟೊಂದು ಸೂಕ್ಷ್ಮವಾದರೆ ಹೇಗೆ ಎಂದು ಕೇಳಿದ್ದೆ. ಆಗಲೂ ಸಿಟ್ಟಿನಿಂದ, “ಈ ರೀತಿ ಯಾವುದೋ ಸರ್ಕಲ್ ಗೆ ಅದೂ ಬಂಟರ ಸಂಘದ ಎದುರಿನ ಸರ್ಕಲ್ ಗೆ ಹೆಸರಿಡುವುದು ಸರಿ ಅಲ್ಲ’ ಎಂದು ವಾದಿಸಿದ್ದರು.


ಅವರು ಹೇಳಿರುವ ದೃಷ್ಟಿಯಲ್ಲಿ ಅವರ ಅಭಿಪ್ರಾಯ ಸರಿ ಎನಿಸಿದರೂ ‘’ ನೋಡಿ, ವಡ್ಡರ್ಸೆಯವರು ಕೇವಲ ನಿಮ್ಮ ತಂದೆ ಅಲ್ಲ, ಅವರೊಬ್ಬ ಸಾರ್ವಜನಿಕ ವ್ಯಕ್ತಿ. ನಿಮ್ಮಂತೆಯೇ ಅವರನ್ನು ಪ್ರೀತಿಸುವ, ಅಭಿಮಾನದಿಂದ ಕಾಣುವ ನಮ್ಮಂತಹವರಿದ್ದಾರೆ. ಅಂತಹವರು ತಮಗೆ ಕಂಡಹಾಗೆ ಪ್ರೀತಿ-ಅಭಿಮಾನ ವ್ಯಕ್ತಪಡಿಸಲು ಹೊರಟರೆ ಅದಕ್ಕೆ ನಿಮ್ಮ ಅನುಮತಿ ಬೇಕೆಂದು ನೀವು ಬಯಸಿದರೆ ತಪ್ಪಲ್ವಾ? ಎಂದು ಕೇಳಿದ್ದೆ.


ಅದಕ್ಕೆ ಮಧುಕರ್ ‘ ಅವರ ನೆನಪಲ್ಲಿ ಜನರಿಗೆ ಉಪಯೋಗುವಾಗುವಂತಹ ಬೇರೆ ಏನನ್ನಾದರೂ ಮಾಡೋಣ. ವಡ್ಡರ್ಸೆಯವರ ಹೆಸರಲ್ಲಿ ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸುವ ಯೋಚನೆ ಇದೆ. ನಾನೂ ಬಹಳ ದಿನ ಈ ಪೊಲೀಸ್ ಕೆಲಸದಲ್ಲಿರುವುದಿಲ್ಲ, ನೀವೂ ಬಂದೂ ಬಿಡಿ. ಕೂಡಿ ಏನಾದರೂ ಮಾಡೋಣ’’ ಎಂದವರು ಕೊನೆಗೆ ಹೇಳದೆ ಹೋಗಿಬಿಟ್ಟರು.


Ads on article

Advertise in articles 1

advertising articles 2

Advertise under the article