Kuloor Bridge Upgradation | ಕೂಳೂರು ಸೇತುವೆಗಳ ಮಧ್ಯೆ ಷಟ್ಪಥ ಸೇತುವೆ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ
ಮಂಗಳೂರು: ಮಂಗಳೂರಿನ ಕೂಳೂರು ಸೇತುವೆಗಳ ನಡುವಿನ ಆರು ಪಥಗಳ ಸೇತುವೆಯನ್ನು ನಿರ್ಮಾಣ ಮಾಡುವ ಕಾಮಗಾರಿಗೆ ಶನಿವಾರ ಚಾಲನೆ ನೀಡಲಾಗುವುದು. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಡಿಜಿಟಲ್ ಸಂಪರ್ಕದ ಮೂಲಕ ಈ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
66 ಕೋಟಿ ರೂ. ವೆಚ್ಚದ ಈ ಯೋಜನೆ ನೂತನ ಸೇತುವೆ ಹಾಗೂ ಕೂಡು ರಸ್ತೆಗಳ ನಿರ್ಮಾಣ ಕಾರ್ಯವನ್ನು ಒಳಗೊಂಡಿರುತ್ತದೆ. ಎರಡು ಸೇತುವೆಗಳ ಮಧ್ಯೆ ಹೊಸದಾಗಿ ಷಟ್ಪಥ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.
ಕೂಳೂರಿನಲ್ಲಿ ಇರುವ ಹಳೆಯ ಕಮಾನು ಸೇತುವೆ 1952ರ ಸೆ. 21ರಂದು ಲೋಕಾರ್ಪಣೆಗೊಂಡಿತ್ತು. 68 ವರ್ಷಗಳ ಹಿಂದೆ ಈ 600 ಅಡಿ ಉದ್ದದ ಸೇತುವೆಯನ್ನು ಮದ್ರಾಸ್ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯ (ಅಂದಿನ ಸಾರ್ವಜನಿಕ ಕಾರ್ಯ) ಸಚಿವ ಎನ್. ರಂಗಾರೆಡ್ಡಿ ಉದ್ಘಾಟಿಸುವ ಮೂಲಕ ಸಾರ್ವಜನಿಕ ಸೇವೆಗೆ ಬಿಟ್ಟುಕೊಟ್ಟಿದ್ದರು.
ಇತ್ತೀಚಿಗೆ ಕೂಳೂರು ಸೇತುವೆಯ ಕಾರ್ಯಕ್ಷಮತೆ ಮತ್ತು ಸ್ಥಿತಿ ಪರಿಶೀಲನೆಯನ್ನುಹೈದರಾಬಾದ್‌ನ ಆರ್.ವಿ. ಸಂಸ್ಥೆ ಕೈಗೊಂಡಿತ್ತು. ಕೇಂದ್ರ ಭೂ ಸಾರಿಗೆ ಸಚಿವಾಲಯದ ಸೂಚನೆ ಮೇರೆಗೆ ಈ ಪರಿಶೀಲನೆ ಮಾಡಲಾಗಿತ್ತು. ಇದು ಸಂಚಾರಕ್ಕೆ ಅಯೋಗ್ಯ ಎಂಬ ವರದಿ ಹಿನ್ನೆಲೆಯಲ್ಲಿ ಬಳಿಕ ಸೇತುವೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.