IT Park in Mangaluru | ಮಂಗಳೂರು ಐಟಿ ಪಾರ್ಕ್‌ಗೆ ಬಂಟ್ವಾಳ ರಾಮಕೃಷ್ಣ ಬಾಳಿಗ ಹೆಸರು: ಅವರ ಒಂದು ಕಿರು ಪರಿಚಯ
ಬೆಂಗಳೂರು ಸಿಲಿಕಾನ್ ಸಿಟಿಯ ನಿರ್ಮಾತೃ ದಿವಂಗತ ಬಂಟ್ವಾಳ ರಾಮಕೃಷ್ಣ ಬಾಳಿಗಾ ಹೆಸರಿನಲ್ಲಿ ಮಂಗಳೂರಿನಲ್ಲಿ ಐಟಿ ಪಾರ್ಕ್ ಗೆ ಚಿಂತನೆ
1929 ಡಿಸೆಂಬರ್ 29 ರ೦ದು ಬಂಟ್ವಾಳದಲ್ಲಿ ಜನಿಸಿದ ರಾಮಕೃಷ್ಣ ಬಾಳಿಗಾ ಅವರು ಬೆಂಗಳೂರು ಸಿಲಿಕಾನ್ ಸಿಟಿಯ ನಿರ್ಮಾತೃ ಎಂಬ ವಿಷಯವು ನಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿಲ್ಲ.
1976 - 84 ರ ಅವಧಿಯಲ್ಲಿ ಕಿಯೋನಿಕ್ಸ್ ನ ಮೊದಲ ಅಧ್ಯಕ್ಷರಾಗಿ 332 ಎಕರೆ ಭೂಮಿಯನ್ನು ಪಡೆದು ಬೆಂಗಳೂರಿನ ಹೊರವಲಯದಲ್ಲಿ ಬೃಹತ್ ಎಲೆಕ್ಟ್ರಾನಿಕ್ ಸಿಟಿಯನ್ನು ನಿರ್ಮಾಣ ಮಾಡಿದವರು ಬಂಟ್ವಾಳ ರಾಮಕೃಷ್ಣ ಬಾಳಿಗರು.
ಮಂಗಳೂರಿನ ಕೆನರಾ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಬಾಳಿಗರು ಚೆನ್ನೈನ ಕಾಲೇಜಿನಲ್ಲಿ ಇ೦ಜಿನಿಯರಿ೦ಗ್ ಪದವಿ ಪಡೆದು ಇಂಡಿಯನ್ ಇನ್ಸ್ಟ್ಯೂಟ್ ಆಫ್ ಸೈನ್ಸ್ ನಲ್ಲಿ ಪವರ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಮೆರಿಕದ ಜನರಲ್ ಎಲೆಕ್ಟ್ರಿಕ್ ನವರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಬಾಳಿಗಾ ಅವರನ್ನು ತಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ನೀಡಿದ ಆಹ್ವಾನದ ಮೇರೆಗೆ ಉಇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು.
1960 ರಲ್ಲಿ ಮಣಿಪಾಲದ ಎಂಐಟಿಯಲ್ಲಿ ಪ್ರೊಫೆಸರ್ ಮತ್ತು ವೈಸ್ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದ ಬಾಳಿಗಾರವರು 1961-68 ರ ವರೆಗೆ ಭಾರತ್ ಎಲೆಕ್ಟ್ರಾನಿಕ್ಸ್ ನ ರಾಡಾರ್ ವಿಭಾಗದಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು.
1973 ರಿಂದ 1976 ರ ವರೆಗೆ ಕಿಯೋನಿಕ್ಸ್ ನ ಸ್ಥಾಪಕ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾಗಿ ಭಾರತದ ಮೊದಲ ಸಿಲಿಕಾನ್ ಸಿಟಿ ನಿರ್ಮಾಣಕ್ಕೆ ಕಾರಣಕರ್ತರಾದರು.
1970 ರ ದಶಕದಲ್ಲಿ ಬಾಳಿಗಾ ಅವರು ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಮಾಡುವ ದೂರದರ್ಶಿತ್ವ ಹೊಂದಿದ್ದರು. ಕರ್ನಾಟಕದ ಆಗಿನ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸ್ ಅವರು ಬಾಳಿಗಾ ಅವರಿಗೆ ಸಂಪೂರ್ಣ ಬೆಂಬಲ ನೀಡಿದರು.
1974 ರಲ್ಲಿ ಕಿಯೋನಿಸ್ಕ್ ನ ಸ್ಥಾಪಕ ಅಧ್ಯಕ್ಷರಾದ ಬಾಳಿಗಾರವರು 1978 ರಲ್ಲಿ ಬೆಂಗಳೂರಿನ ಹೊರವಲಯದ ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೋಗೂರು ಗ್ರಾಮದ 332 ಎಕರೆ ಜಮೀನಿ ನಲ್ಲಿ ಇಲೆಕ್ಟ್ರಾನಿಕ್ ಸಿಟಿಯನ್ನು ಸ್ಥಾಪನೆ ಮಾಡಿದರು.
ಬಾಳಿಗಾ ಅವರು ಸ್ಥಾಪಿಸಿದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಸ್ತುತ ವಿಶ್ವದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್; ವಿಪ್ರೋ; ಎಚ್ ಪಿ ಸಹಿತ ನೂರಕ್ಕೂ ಅಧಿಕ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಹಾಗೂ 1ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಸೇವೆ ಸಲ್ಲಿಸುತ್ತಿದ್ದಾರೆ.
ಭಾರತ್ ಇಲೆಕ್ಟ್ರಾನಿಕ್ಸ್ ನಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ 3000 ನಿವೇಶನಗಳ ಬೃಹತ್ ವಸತಿ ಗೃಹ ಬಡಾವಣೆಯನ್ನು ನಿರ್ಮಿಸಿರುವುದು ಬಾಳಿಗಾ ಅವರ ಮಹತ್ಸಾಧನೆಯಾಗಿದೆ.
ರಾಮಕೃಷ್ಣ ಬಾಳಿಗ ಅವರು ಮಂಗಳೂರಿನ ಖ್ಯಾತ ವಕೀಲರೂ ಆಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸರ್ಕಾರದಲ್ಲಿ ಕಾನೂನು ಸಚಿವರು ಮತ್ತು ವಿಧಾನಸಭೆಯ ಸ್ಪೀಕರ್ ಆಗಿ ಅದ್ಭುತವಾಗಿ ಸೇವೆ ಸಲ್ಲಿಸಿದ್ದ ಬಂಟ್ವಾಳದ ದಿವಂಗತ ವೈಕುಂಠ ಬಾಳಿಗಾ ಅವರ ಸುಪುತ್ರರಾಗಿದ್ದಾರೆ.
ಬೆಂಗಳೂರು ಸಿಲಿಕಾನ್ ಸಿಟಿಯ ನಿರ್ಮಾತೃ ; ಕಿಯೋನಿಕ್ಸ್ ನ ಪ್ರಪ್ರಥಮ ಅಧ್ಯಕ್ಷ ಬಂಟ್ವಾಳದ ದಿವಂಗತರ ರಾಮಕೃಷ್ಣ ಬಾಳಿಗಾರ ಹೆಸರಿನಲ್ಲಿ ಮಂಗಳೂರಿನಲ್ಲಿ ಐಟಿ ಪಾರ್ಕ್ ಈಡೇರಿಸಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.
ಐಟಿ ಪಾರ್ಕ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸಂಸದ ನಳಿನ್ ಕುಮಾರ್ ಕಟೀಲ್ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಸೇರಿದಂತೆ ಪ್ರಮುಖರ ಗಮನಸೆಳೆಯಲಾಗಿದ್ದು ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗುವುದು ಎಂದಿದ್ದಾರೆ.
ಸುಮಾರು ನೂರು ಎಕರೆ ಜಾಗದಲ್ಲಿ ಎಲೆಕ್ಟ್ರಾನಿಕ್ ಸಿಟಿ ಸ್ಥಾಪಿಸುವ ಚಿಂತನೆ ಇದೆ. ಮಂಗಳೂರು ಐಟಿ ಪಾರ್ಕ್ ಇಸ್ರೇಲ್ ಮಾದರಿಯಲ್ಲಿ ನಿರ್ಮಾಣಗೊಳಿಸಬೇಕೆಂಬ ಯೋಚನೆ ಇದೆ. ಕೋವಿಡ್ ಕಾರಣ ಆರ್ಥಿಕ ಸಂಕಷ್ಟ ಇರುವುದರಿಂದ ಸರಕಾರ; ಖಾಸಗಿ ಸಹಭಾಗಿತ್ವದಲ್ಲಿ ಸುಧಾರಿತ ತ೦ತ್ರಜ್ಞಾನ; ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಉತ್ಪನ್ನಗಳನ್ನು ಉದ್ದೇಶಿತ ಸಿಲಿಕಾನ್ ಸಿಟಿಯಲ್ಲಿ ಅಭಿವೃದ್ಧಿಪಡಿಸಬಹುದು.
ಪ್ರಸ್ತಾವಿತ ಸಿಟಿಯಲ್ಲೇ ಲೇಸರ್; ರೊಬಾಟಿಕ್ಸ್; ಅರೆವಾಹಕಗಳು; ಚಿಪ್ ಮುಂತಾದ ಆಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ
ದೇರೆಬೈಲ್ ನಲ್ಲಿಯೂ ಕಿಯೋನಿಕ್ಸ್ ಸಂಸ್ಥೆಗೆ ಭೂಮಿಯಿದ್ದು ಸುಮಾರು 6ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಯೋಜನೆ ರೂಪಿಸಿ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಶ್ರೀ ಹರಿಕೃಷ್ಣ ಬಂಟ್ವಾಳ್ ತಿಳಿಸಿರುತ್ತಾರೆ.
*✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ