
Decoit at Kokkada | ಕೊಕ್ಕಡ ಮನೆಗೆ ನುಗ್ಗಿ ದರೋಡೆ ಪ್ರಕರಣ: ಎರಡು ವಿಶೇಷ ತಂಡ ರಚಿಸಿದ ದ.ಕ. ಎಸ್‌ಪಿ ಲಕ್ಷ್ಮಿಪ್ರಸಾದ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದ ದರೋಡೆ ಪ್ರಕರಣ ಪೊಲೀಸರಿಗೆ ಸವಾಲಾಗಿದೆ. ಈ ಮಧ್ಯೆ, ಪ್ರಕರಣವನ್ನು ಭೇದಿಸಲು ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ವಿವರ ನೀಡಿದ್ದಾರೆ.
ಏಳರಿಂದ ಎಂಟು ಮಂದಿ ಮುಸುಕುಧಾರಿ ದುಷ್ಕರ್ಮಿಗಳ ತಂಡ ಈ ಕೃತ್ಯ ನಡೆಸಿದೆ ಎಂಬುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್‌ಪಿ ಪತ್ರಕರ್ತರಿಗೆ ಮಾಹಿತಿ ನೀಡಿದ್ಧಾರೆ.
ದರೋಡೆ ಸಂದರ್ಭದಲ್ಲಿ ಚೂರಿ ಇರಿತಕ್ಕೊಳಗಾಗಿರುವ ಗೀತಾ ಶೆಟ್ಟಿ ಸದ್ಯ ಅಪಾಯದಿಂದ ಪಾರಾಗಿದ್ಧಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಪಿ ವಿವರ ನೀಡಿದ್ದಾರೆ.
ಕೊಕ್ಕಡದಲ್ಲಿ ನಡೆದ ದರೋಡೆ ಪ್ರಕರಣವು ಇತ್ತೀಚೆಗೆ ನಡೆದ ಕಾರ್ಕಳ ದರೋಡೆ ಪ್ರಕರಣ ಮತ್ತು ಜೈಪುರದಲ್ಲಿ ನಡೆದ ದರೋಡೆಗೆ ಸಾಮ್ಯತೆ ಹೊಂದಿದೆ. ಅದೇ ತಂಡ ಈ ಕೃತ್ಯವನ್ನು ನಡೆಸಿರುವ ಶಂಕೆ ಇದೆ ಎಂದು ಹೇಳಲಾಗಿದೆ.
ಆದರೆ, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.