Arrest warrant against Vilas Nayak and his mother | ಸುವಿಧಾ ಹೋಮ್ಸ್ ಪ್ರಕರಣ: ಉದ್ಯಮಿ ವಿಲಾಸ್ ನಾಯಕ್, ತಾಯಿ ವೀಣಾ ಜಿ. ನಾಯಕ್ ಗೆ ಸಂಕಷ್ಟ, ಕೋರ್ಟ್‌ನಿಂದ ಅರೆಸ್ಟ್ ವಾರೆಂಟ್!
ಉಡುಪಿ: ಕರಾವಳಿಯ ಪ್ರಖ್ಯಾತ ಯುವ ಉದ್ಯಮಿ ವಿಲಾಸ್ ನಾಯಕ್ ಮತ್ತು ಅವರ ತಾಯಿ ವೀಣಾ ಜಿ. ನಾಯಕ್ ಅವರ ಬಂಧನಕ್ಕೆ ಗ್ರಾಹಕ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಬಂಧನ ವಾರೆಂಟ್ ಜಾರಿಗೊಳಿಸಲು ಆದೇಶ ಹೊರಡಿಸಿದೆ.
ಉಡುಪಿಯಲ್ಲಿ ನಿರ್ಮಾಣ ಮಾಡುತ್ತಿರುವ ಸುವಿಧಾ ಹೋಮ್ಸ್ ಎರಡನೇ ಹಂತದ ವಸತಿ ಸಮುಚ್ಚಯದ ನಿರ್ಮಾಣ ವಿಳಂಬ, ಕಳಪೆ ಗುಣಮಟ್ಟ ಹಾಗೂ ಇತರ ಗ್ರಾಹಕ ಸಂಬಂಧಿ ದೂರುಗಳ ಹಿನ್ನೆಲೆಯಲ್ಲಿ ಕೆಲ ಗ್ರಾಹಕರು ಉಡುಪಿ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ್ದ ಉಡುಪಿ ಗ್ರಾಹಕ ನ್ಯಾಯಾಲಯ 2019ರ ನವೆಂಬರ್‌ನಲ್ಲಿ ಐದು ಮಂದಿ ಗ್ರಾಹಕರಿಗೆ ತಲಾ ಸುಮಾರು 15 ಲಕ್ಷ ರೂಪಾಯಿಗಳಷ್ಟು ಪರಿಹಾರ ನೀಡುವಂತೆ ವೀಣಾ ಜಿ. ನಾಯಕ್, ವಿಲಾಸ್ ನಾಯಕ್ ಹಾಗೂ ಇತರರಿಗೆ ಆದೇಶ ಮಾಡಿತ್ತು.
ಆದರೆ, ಅವರು ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ಮಾಡಿರಲಿಲ್ಲ. ಇದರಿಂದ ಐವರು ಅರ್ಜಿದಾರರು ಮತ್ತೆ ಉಡುಪಿ ನ್ಯಾಯಾಲಯದ ಮೆಟ್ಟಿಲೇರಿ ಆದೇಶ ಜಾರಿಗೊಳಿಸುವಂತೆ ಮರು ಅರ್ಜಿ ಸಲ್ಲಿಸಿದ್ದರು.
ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಒಂದು ವರ್ಷಗಳಷ್ಟು ಕಾಲ ನ್ಯಾಯಾಲಯ ಕಾರ್ಯಕಲಾಪ ವಿಳಂಬವಾಗಿತ್ತು. ಆದರೆ, ಈ ಪರಿಹಾರದ ಮೊತ್ತವನ್ನು ನೀಡಲು ಉದ್ಯಮಿ ವಿಲಾಸ್ ನಾಯಕ್ ಮತ್ತು ವೀಣಾ ಜಿ. ನಾಯಕ್ ಅವರು ಹಿಂದೇಟು ಹಾಕಿದ್ದು, ಇದನ್ನು ಪರಿಗಣಿಸಿದ ಗ್ರಾಹಕ ನ್ಯಾಯಾಲಯ, ಸುವಿಧಾ ಹೋಮ್ಸ್ ಗೃಹ ನಿರ್ಮಾಣ ಸಮುಚ್ಚಯಕ್ಕೆ ಸಂಬಂಧಿಸಿದಂತೆ ವಿಲಾಸ್ ನಾಯಕ್ ಹಾಗೂ ಇತರರ ಬಂಧನಕ್ಕೆ ವಾರೆಂಟ್ ಜಾರಿಗೊಳಿಸಿದೆ.
ಈ ಮಧ್ಯೆ, ವಿಲಾಸ್ ನಾಯಕ್ ಹಾಗೂ ಇತರರು ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಉಡುಪಿ ನ್ಯಾಯಾಲಯದ ಕಾರ್ಯಕಲಾಪಕ್ಕೆ ತಡೆಯಾಜ್ಞೆ ಪಡೆಯಲು ಸಾಧ್ಯವಾಗಿಲ್ಲ.
ಗ್ರಾಹಕರಿಬ್ಬರ ಪರ ಮಂಗಳೂರು ನ್ಯಾಯವಾದಿ ಶ್ರೀಪತಿ ಪ್ರಭು ವಾದಿಸಿದ್ದಾರೆ.
ಘಟನೆಯ ವಿವರ
2011ರಲ್ಲಿ ಸುವಿಧಾ ಹೋಮ್ಸ್ ಎರಡನೇ ಹಂತದ ವಸತಿ ಸಮುಚ್ಚಯ ನಿರ್ಮಾಣ ಪ್ರಕ್ರಿಯೆ ಆರಂಭವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರಿಂದ ಬುಕ್ಕಿಂಗ್ ಸ್ವೀಕರಿಸಲಾಗಿತ್ತು. ಬುಕ್ಕಿಂಗ್ ಜೊತೆಗೆ ಲಕ್ಷಗಟ್ಟಲೆ ಮುಂಗಡ ಹಣವನ್ನೂ ಪಡೆಯಲಾಗಿತ್ತು.
ಆದರೆ, ಬುಕ್ಕಿಂಗ್ ಮಾಡಿದ್ದರೂ ಐದಾರು ವರ್ಷಗಳ ಕಾಲ ವಿಲಾಸ್ ನಾಯಕ್ ನಿರ್ಮಾಣ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ಮಾಡಿರಲಿಲ್ಲ. ಸುಮಾರು ಏಳು ವರ್ಷಗಳ ನಂತರ ಗ್ರಾಹಕರಿಗೆ ಅಂತಿಮ ಹಂತದ ಕಂತು ಪಾವತಿ ಮಾಡಲು ಬಿಲ್ಡರ್ ಕಡೆಯಿಂದ ಮನವಿ ಪತ್ರ ಬಂದಿತ್ತು.
ಆದರೆ, ಅಲ್ಲಿ ಹೋಗಿ ನೋಡಿದಾಗ ಪರಿಸ್ಥಿತಿಯೇ ಬೇರೆಯಾಗಿತ್ತು. ಬಿಲ್ಡಿಂಗ್ ಸೋರಿಕೆಯಾಗಿತ್ತು. ಗಲೀಜು, ಕಸ ರಾಶಿಯಿಂದ ಕೊಳೆತು ನಾರುವಂತಹ ಪರಿಸ್ಥಿತಿ ಇತ್ತು. ಅಪಾರ್ಟ್‌ಮೆಂಟ್ ಇನ್ನೂ ಪೂರ್ಣಗೊಂಡಿರಲಿಲ್ಲ. ಇದರಿಂದ ಗ್ರಾಹಕರು ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು.