Arakalagud Jayakumar Column | ದೇಣಿಗೆಯಾಗಿ ಬಂದ ಮಾಸ್ಕ್, ಸ್ಯಾನಿಟೈಝರ್ ಏನಾದವು?
ಕೋವಿಡ್ ಸೋಂಕು ಜಗತ್ತನ್ನೇ ಆವರಿಸಿ ಬರೋಬ್ಬರಿ ಹತ್ತು ತಿಂಗಳು ಸರಿದು ಹೋಗಿದೆ. ಬ್ರಿಟನ್ ವೈರಸ್ ನ ಭೀತಿಯು ಕಣ್ಣ ಮುಂದಿದೆ. ಇವೆರಡಕ್ಕೂ ಸುರಕ್ಷತಾ ಮುನ್ನೆಚ್ಚರಿಕೆ ಏನು ಎಂಬ ಪ್ರಶ್ನೆಗೆ ಉತ್ತರ ಒಂದೇ ಮಾಸ್ಕ್ ಧರಿಸಿ , ಅಂತರ ಕಾಯ್ದುಕೊಳ್ಳಿ, ಕೈ ಸ್ವಚ್ಚವಾಗಿರಿಸಿಕೊಳ್ಳಿ. ಇಂಗ್ಲೀಷ್ ನಲ್ಲಿ ಇದನ್ನೇ SMS ಎನ್ನಲಾಗುತ್ತದೆ. Sanitize, Mask, Social Distancing ಎಂದರ್ಥ.
ದಂಡವೇ? ಜಾಗೃತಿಯೇ?
ಇದರೊಟ್ಟಿಗೆ ಹಾಕಿರುವ ವಿಡಿಯೋ ಗಮನಿಸಿ. ವಲಸಿಗ ಕೂಲಿ ಕಾರ್ಮಿಕ ಮಹಿಳೆಯೋರ್ವರು, ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾಗ ಬಿಬಿಎಂಪಿ ಮಾರ್ಷಲ್ ಬರುತ್ತಾರೆ. ಮಾಸ್ಕ್ ಧರಿಸಿಲ್ಲವೆಂಬ ಕಾರಣಕ್ಕೆ ರೂ. 250/- ದಂಡ ವಿಧಿಸಿದ್ದಾರೆ. ತುತ್ತಿನ ಕೂಳಿಗೆ ಬಿಡಿಗಾಸು ದುಡಿಯುವ ಮಹಿಳೆ 250ರೂಪಾಯಿ ದಂಡ ತೆತ್ತ ನೋವಿಗೆ ಕಣ್ಣೀರು ಹಾಕಿದ್ದಾರೆ. ಮಾರ್ಷಲ್ ಗಳನ್ನು ಪ್ರಶ್ನಿಸಿದ್ದಾರೆ, ಆದರೆ ದಂಡದಿಂದ ರಿಯಾಯ್ತಿ ಸಿಕ್ಕಿಲ್ಲ. ವೈರಲ್ ಆದ ಈ ವಿಡಿಯೋ ನೋಡಿದ ಅನೇಕ ಮಂದಿ ಮಹಿಳೆಯ ಕಣ್ಣೀರನ್ನು ಲೇವಡಿ ಮಾಡಿದವರೇ ಹೆಚ್ಚು. ಆದರೆ ಆ ಮಹಿಳೆ ಯಾವ ಸಂದರ್ಭದಲ್ಲಿ ಮಾಸ್ಕ್ ಧರಿಸಿರಲಿಲ್ಲ? ಎಂದು ವಿಚಾರ ಮಾಡಿದವರು ಕಡಿಮೆ. ಆಕೆ ಕೂಲಿ ಕೆಲಸ ನಿರ್ವಹಿಸುವ ಸಂದರ್ಭ ಜನ ದಟ್ಟಣೆ ಇರಲಿಲ್ಲ. ಆಕೆ ಮಾಸ್ಕ್ ಧರಿಸುವಂತೆ ನೋಡಿಕೊಳ್ಳ ಬೇಕಿದ್ದುದು ಸಂಬಂಧಿಸಿದ ಮೇಸ್ತ್ರಿಯ ಹೊಣೆಯಾಗಿತ್ತು. ಅಥವ ಮಾರ್ಷಲ್ ಗಳು ತಿಳುವಳಿಕೆ ಮೂಡಿಸಿ ಮಾಸ್ಕ್ ಧರಿಸುವಂತೆ ಹೇಳ ಬಹುದಿತ್ತು. ಅವೆರಡೂ ಆಗಲಿಲ್ಲ, ದಿನದ ದುಡಿಮೆ 'ದಂಡ' ಕ್ಕೆ ಸಂದಾಯವಾಯ್ತು.
ದೇಣಿಗೆ ಬಂದ ಮಾಸ್ಕ್ ಎಲ್ಲಿ?
ಲಾಕ್ ಡೌನ್ ಆದ ಸಂದರ್ಭ ಮಾರುಕಟ್ಟೆ ಗೆ ಥರಾವರಿ ಸ್ಯಾನಿಟೈಝರ್ ಗಳು, ಸೋಪುಗಳು, ಕಷಾಯಗಳು, ಮಾಸ್ಕ್ ಗಳು ಬಂದವು. N95 ಎಂಬ ಮಾಸ್ಕಂತೂ ಸಖತ್ ಡಿಮ್ಯಾಂಡ್ ಗಿಟ್ಟಿಸಿಕೊಂಡು ಬಿಟ್ಟಿತು. ಆರಂಭದ ಕೆಲವು ದಿನಗಳ ಕಾಲ ಅದಕ್ಕೆ ಕೃತಕ ಅಭಾವ ಹಾಗೂ ದುಬಾರಿ ಬೆಲೆಯೂ ಇತ್ತು. ಸರ್ಕಾರ ಸುರಕ್ಷತೆಯ ಅಗತ್ಯತೆಗಳಾದ ಇವುಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತಹ ಮಹತ್ವದ ಜವಾಬ್ದಾರಿ ನಿರ್ವಹಿಸ ಬೇಕಿತ್ತು ಆದರೆ ಆಗಲಿಲ್ಲ. ಅದೆಷ್ಟೋಲಕ್ಷ ಸಂಖ್ಯೆಯ ಮಾಸ್ಕ್, ಸ್ಯಾನಿಟೈಝರ್ ಗೆ , ಪಿಪಿಇ ಕಿಟ್ ಗಳಿಗೆ ಸರ್ಕಾರ ಕೋಟ್ಯಾಂತರ ರೂಪಾಯಿಗಳ ವೆಚ್ಚಮಾಡಲಾಗಿದೆ ಎನ್ನಲಾಯಿತು. ಅನೇಕ ಡಿಸ್ಟಿಲ್ಲರಿಗಳು, ಕಾರ್ಪೊರೇಟ್ ಕಂಪನಿಗಳು, ಎನ್‌ಜಿಓ ಗಳು ದಂಡಿ ದಂಡಿಯಾಗಿ ಸ್ತಾನಿಟೈಝರ್ ಹಾಗೂ ಮಾಸ್ಕ್ ಗಳನ್ನು ಸರ್ಕಾರಕ್ಕೆ, ಸರ್ಕಾರಿ ಕಚೇರಿಗಳಿಗೆ ನೀಡಿದವು. ಅವನ್ನೆಲ್ಲ ಯಾರಿಗೆ ವಿತರಿಸಲಾಯಿತು? ಎಷ್ಟೋ ಆಸ್ಪತ್ರೆ ಮತ್ತು ಸರ್ಕಾರಿ ಕಚೇರಿಗಳಲ್ಲೇ ತನ್ನ ನೌಕರ ಸಿಬ್ಬಂದಿಗಳಿಗೆ ದೇಣಿಗೆಯಾಗಿ ಬಂದ ಮಾಸ್ಕ್ ಮತ್ತು ಸ್ಯಾನಿಟೈಝರ್ ಕೊಟ್ಟಿಲ್ಲ ಎಂಬ ದೂರುಗಳಿವೆ.
ಹಾಗಿದ್ದರೆ ಅವೆಲ್ಲ ಎಲ್ಲಿ ಹೋಯ್ತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕೆಲವು ಎನ್‌ಜಿಓಗಳು, ಜನ ಪ್ರತಿನಿಧಿಗಳು ಎಲ್ಲೋ ಕೆಲವಡೆ ಉಚಿತವಾಗಿ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಝರ್ ವಿತರಿಸಿದರು. ಸ್ಥಳೀಯ ಸರ್ಕಾರಿ ಸಂಸ್ಥೆಗಳು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಣವನ್ನು ಲೂಟಿ ಮಾಡಿದರೆ ವಿನಹ ಪ್ರಯೋಜನ ವಾಗಿಲ್ಲ. ಉಚಿತವಾಗಿ ಕಾರ್ಪೊರೇಟ್ ಸಂಸ್ಥೆಗಳಿಂದ, ಕಂಪನಿಗಳಿಂದ, ಸಾರ್ವಜನಿಕ ನೆರವಿನಿಂದ ಪಡೆದ ಮಾಸ್ಕ್ ಗಳು, ಸ್ಯಾನಿಟೈಝರ್ ಏನಾದವು? ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.
ಹಗಲು ದರೋಡೆ:
ಇಂತಹದ್ದೊಂದು ಬೇಜವಾಬ್ದಾರಿ ಮೆರೆದ ಸರ್ಕಾರ, ಲಾಕ್ ಡೌನ್ ನಿಂದ ಮೊದಲೇ ತತ್ತರಿಸಿರುವ ಜನರನ್ನು ಹಗಲು ದರೋಡೆ ಮಾಡಲು ಪೊಲೀಸರನ್ನು, ನಗರಸಭೆ, ಪುರಸಭೆ, ಕಾರ್ಪೊರೇಷನ್ ಸಿಬ್ಬಂದಿಯನ್ನು ಬೀದಿ ಬೀದಿಯಲ್ಲಿ ನಿಲ್ಲಿಸಿದ್ದಾರೆ. ಬೆಂಗಳೂರು ಮಹಾನಗರದಲ್ಲಿಯಂತೂ ಪೊಲೀಸರ ಜೊತೆಗೆ ಬಿಬಿಎಂಪಿ ಸಿಬ್ಬಂದಿ ಗಳು ಮತ್ತು ಮಾರ್ಷಲ್ ಗಳು 'ರೌಡಿ'ಗಳಂತೆ ವರ್ತಿಸುತ್ತಾ ಸಾರ್ವಜನಿಕರಿಗೆ ಭೀತಿ ಹುಟ್ಡಿಸಿದ್ದಾರೆ. ಜಾಗೃತಿ ಮೂಡಿಸಿ ಮನವೊಲಿಸ ಬೇಕಾದ ಕಾರ್ಯ ಮಾಡಬೇಕಾದ ಪೋಲೀಸರು ಹಾಗೂ ಮಾರ್ಷಲ್ ಗಳಿಗೆ ಕಲೆಕ್ಷನ್ ಟಾರ್ಗೆಟ್ ನೀಡಿ ಹಿಂಸಿಸಲಾಗುತ್ತಿದೆ. ಬಹುಶಃ ಇಂತಹ ದರಿದ್ರಾವಸ್ಥೆ ಸರ್ಕಾರಕ್ಕೆ ಬಂದಿದ್ದು ವಿಷಾಧಕರ ಸಂಗತಿ.
ವಿದೇಶದಲ್ಲಿ ಹೇಗಿದೆ?
ವಿದೇಶದಲ್ಲಿ ಮಾಸ್ಕ್ ಸಮಸ್ಯೆ ಇದೆಯೇ ಎಂಬ ಪ್ರಶ್ನೆಯನ್ನು ಬೆಲ್ಜಿಯಂ ದೇಶದಲ್ಲಿರುವ ವಿಜ್ಞಾನಿ ಮಿತ್ರ ಹಾಗೂ ಯೂರೋಪ್ ನ ಕೋವಿಡ್ ಲಸಿಕಾ ಸಂಶೋಧನಾ ತಂಡದ ಹೆಮ್ಮೆಯ ಸದಸ್ಯರಾಗಿರುವ Mahadesh Prasad ಡಾ ಮಹದೇಶ ಪ್ರಸಾದ್ ರನ್ನು ಕೇಳಿದೆ. ಅವರು ಉತ್ತರಿಸಿದ್ದು ಹೀಗೆ. ಲಾಕ್ ಡೌನ್ ಆಗುತ್ತಿದ್ದಂತೆ ಬೆಲ್ಜಿಯಂ ದೇಶದ ಸರ್ಕಾರ ಒಂದು ಕರೆ ನೀಡಿ, ಹೊಲಿಗೆ ತಿಳಿದಿರುವ ನಾಗರಿಕರನ್ನು ಪಟ್ಟಿ ಮಾಡಿತು. ನೊಂದಾಯಿಸಿಕೊಂಡವರಿಗೆ ತಡ ಮಾಡದೇ ಎಲೆಕ್ಟ್ರಾನಿಕ್ ಹೊಲಿಗೆ ಮೆಷಿನ್ ಹಾಗೂ ಗುಣಮಟ್ಟದ, ಅನುಮೋದಿಸಲ್ಪಟ್ಟ ಬಟ್ಟೆ ಒದಗಿಸಲಾಯಿತು. ಕ್ಲುಪ್ತ ಅವಧಿಯಲ್ಲಿ ಅಗತ್ಯವಿರುವ ಮಾಸ್ಕ್ ಗಳು ತಯಾರಾದವು. ಕಾರ್ಪೊರೇಟ್ ಕಂಪನಿಗಳು ಸ್ತಾನಿಟೈಝರ್ ನೀಡಿದವು. ಇದೆಲ್ಲವನ್ನೂ ತುರ್ತಾಗಿ ನಿರ್ವಹಿಸಿದ ಸರ್ಕಾರ ವಿಳಂಬವಿಲ್ಲದಂತೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ ನಾಲ್ಕು ಜೊತೆ ಮಾಸ್ಕ್ ಹಾಗೂ ಸ್ಯಾನಿಟೈಝರ್ ಅನ್ನು ಪೋಸ್ಟ್ ನಲ್ಲಿ ಮನೆ ಬಾಗಿಲಿಗೆ ಕಳಿಸಿತು. ಆದ್ದರಿಂದ ಇಲ್ಲಿ ಮಾಸ್ಕ್ ಸಮಸ್ಯೆ ಇಲ್ಲ, ಜನರು ಜಾಗೃತರಾಗಿದ್ದಾರೆ.ನನ್ನ ಪತ್ನಿಯು ಕೂಡ ಸರ್ಕಾರದ ಕರೆಗೆ ಒಗೊಟ್ಟು ಮಾಸ್ಕ್ ಹೊಲಿದು ಕೊಟ್ಟರು ಎಂದರು.
ನಮ್ಮ ದೇಶದಲ್ಲಿಯೂ ಕೂಡ ಸ್ಥಳೀಯ ಸಂಸ್ಥೆಗಳ ಮೂಲಕ ಇಂತಹ ಪ್ರಯತ್ನ ಮಾಡಬಹುದಿತ್ತಲ್ಲವೇ? Chief Minister of Karnataka ಉಚಿತವಾಗಿ ಪಡೆದ ಮಾಸ್ಕ್ , ಸ್ಯಾನಿಟೈಝರ್ ಏನಾಯ್ತು? ಜಾಗೃತಿಗಾಗಿ ಮಾಡಿದ ವೆಚ್ಚ ಎಷ್ಟು? ಹಗಲು ದರೋಡೆ ಬೇಕಿತ್ತಾ? ಜನ ತಾಳ್ಮೆ ಕಳೆದುಕೊಳ್ಳುವವರೆಗೆ ಇದೆಲ್ಲ ಹೀಗೆ ಮುಂದುವರೆಯಲಿ ಬಿಡಿ.