Baikady Prathishtana | ಬೈಕಾಡಿ ಪ್ರತಿಷ್ಠಾನದ ಉದ್ಘಾಟನೆ, ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ ಸಮಾರಂಭ
ಮಂಗಳೂರು: ಶಿಕ್ಷಣ, ಕಲೆ, ಸಾಹಿತ್ಯ, ಸಮಾಜಸೇವೆ ಹಾಗೂ ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೈಕಾಡಿ ಪ್ರತಿಷ್ಠಾನದ ಉದ್ಘಾಟನೆ ದಿನಾಂಕ 05.01.2021ರಂದು ಬೈಕಾಡಿ ಜನಾರ್ದನ ಆಚಾರ್‍ರವರ ಸ್ವಗೃಹ “ಮಂಜೂಷಾ”, ಹೊೈಗೆಬೈಲು, ಉರ್ವ, ಮಂಗಳೂರು ಇಲ್ಲಿ ಜರಗಿತು.
ಪ್ರತಿಷ್ಠಾನದ ಉದ್ಘಾಟನೆ ಮಾಡಿದ ಕ್ಯಾ| ಗಣೇಶ್ ಕಾರ್ಣಿಕ್ ಇವರು ಬೈಕಾಡಿ ಜನಾರ್ದನ ಆಚಾರ್ ಇವರ ಸಾಮಾಜಿಕ ಕಳಕಳಿ, ಅಗಾಧ ಜ್ಞಾನ ಭಂಡಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಇವರ ಕೊಡುಗೆಯ ಬಗ್ಗೆ ಮಾತನಾಡಿ, ಬೈಕಾಡಿಯವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ಮೆಲುಕು ಹಾಕಿದರು. ಪ್ರತಿಷ್ಠಾನವು ಇನ್ನೂ ಅನೇಕ ಚಟುವಟಿಕೆಗಳಲ್ಲಿ ತೊಡಗಿ ಸಮಾಜಕ್ಕೆ ಸಹಕಾರಿ ಹಾಗೂ ಮಾದರಿಯಾಗಲಿ ಎಂದು ಹರಸಿ, ಹಾರೈಸಿದರು.
ಈ ಸಂದರ್ಭದಲ್ಲಿ 2020-21ನೇ ಸಾಲಿನ “ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ”ಯನ್ನು ಚಿತ್ರಕಲಾ ಕ್ಷೇತ್ರದಲ್ಲಿ ಗೈದ ಅಗಾಧ ಸೇವೆ, ಸಾಧನೆಗಾಗಿ ಹಿರಿಯ ಕಲಾವಿದ ಶ್ರೀ ಪಿ. ಎನ್. ಆಚಾರ್ಯ ಇವರಿಗೆ ನೀಡಲಾಯಿತು. ಪ್ರಶಸ್ತಿ ಪ್ರದಾನವನ್ನು ಮಾಡಿದ ಇನ್ನೋರ್ವ ಹಿರಿಯ ಕಲಾವಿದ ಶ್ರೀಯುತ ಗಣೇಶ್ ಸೋಮಯಾಜಿಯವರು, ಚಿತ್ರಕಲಾರಂಗದೊಂದಿಗೆ ಬೈಕಾಡಿ ಜನಾರ್ದನ ಆಚಾರ್‍ರವರ ನಂಟು ಹಾಗೂ ಕಲಾಚಟುವಟಿಕೆಗಳಿಗೆ ಬೈಕಾಡಿಯವರ ಕೊಡುಗೆಯನ್ನು ವಿವರಿಸಿದರು.
ಡಾ| ಪ್ರತಿಭಾ ರೈ ಇವರ ಭಾವಗೀತೆಗಳೊಂದಿಗೆ ಆರಂಭಗೊಂಡ ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀ ರವೀಂದ್ರನಾಥ ಶೆಟ್ಟಿ ಹಾಗೂ ಶ್ರೀಮತಿ ಮಾಧುರಿ ಶ್ರೀರಾಮ್ ನಿರ್ವಹಿಸಿದರು.
ಪ್ರತಿಷ್ಠಾನದ ಪದಾಧಿಕಾರಿಗಳಾದ ಶ್ರೀಮತಿ ರತ್ನಾವತಿ ಜೆ ಬೈಕಾಡಿ, ಶ್ರೀಮತಿ ಅಕ್ಷತಾ ಬೈಕಾಡಿ, ಭರತ್ ರಾಜ್ ಬೈಕಾಡಿ ಹಾಗೂ ಶ್ರೀಮತಿ ರೇಖಾ ಬಿ. ಬೈಕಾಡಿ ಉಪಸ್ಥಿತರಿದ್ದರು.