Bharath Bank | ಬಡ ಮಹಿಳೆಯ ಆಸ್ತಿ ಜಪ್ತಿಗೆ ನೋಟೀಸ್: ಭಾರತ್ ಬ್ಯಾಂಕ್ ಕ್ರಮಕ್ಕೆ ರೈತ ಸಂಘ ಆಕ್ರೋಶ
ಬಂಟ್ವಾಳ: ಬಡ ರೈತ ಮಹಿಳೆಯ ಆಸ್ತಿಯನ್ನು ಜಪ್ತಿ ಮಾಡಲು ಕೋರ್ಟ್ ಮೊರೆ ಹೊಕ್ಕ ಬ್ಯಾಂಕೊಂದು ಆಸ್ತಿಯನ್ನು ಮುಟ್ಟುಗೋಲು ಹಾಕಲು ಮುಂದಾಗಿರುವ ಕ್ರಮಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಭಾರತ್ ಕೋ ಆಪರೇಟಿವ್ ಬ್ಯಾಂಕ್ ಬಂಟ್ವಾಳ ನಗರ ವ್ಯಾಪ್ತಿಯ ಅಜ್ಜಿಬೆಟ್ಟು ಎಂಬಲ್ಲಿ ಮಹಿಳೆಯೊಬ್ಬರು ಆರ್ಥಿಕ ಸಂಕಷ್ಟದಿಂದ ಸಾಲ ತೀರಿಸಲು ಆಗಿರಲಿಲ್ಲ.
ಈ ಬಗ್ಗೆ ನೋಟೀಸ್ ನೀಡಿದ್ದ ಭಾರತ್ ಬ್ಯಾಂಕ್, ನ್ಯಾಯಾಲಯದ ಮೆಟ್ಟಿಲೇರಿತ್ತು. ಅಲ್ಲದೆ, ಸ್ವಾಧೀನಪಡಿಸುವ ಆದೇಶವನ್ನೂ ತಂದಿತ್ತು. ಆದರೆ, ಜಪ್ತಿಗೆ ಬ್ಯಾಂಕ್ ಅಧಿಕಾರಿಗಳು ಮುಂದಾದಾಗ, ರೈತ ಸಂಘ ಮಧ್ಯಪ್ರವೇಶಿಸಿ ಮಹಿಳೆಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದೆ.
ತನ್ನ ಸಾಲವನ್ನು ಏಕಗಂಟಿನಲ್ಲಿ ತೀರಿಸಲು ಮಹಿಳೆಗೆ ಬ್ಯಾಂಕ್ ಅಧಿಕಾರಿಗಳು ಅವಕಾಶ ನೀಡಬೇಕು ಮತ್ತು ಬಡ್ಡಿಯಲ್ಲಿ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮನವಿ ಮಾಡಿದೆ.
ರೈತ ಸಂಘದ ರಾಜ್ಯ ಕಾರ್ಯದರ್ಶಿಯಾಗಿರುವ ಮನೋಹರ ಶೆಟ್ಟಿ ನಡಿ ಕಂಬಳ ಗುತ್ತು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಕ್ಷಣ ಬ್ಯಾಂಕ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಮಹಿಳೆಗೆ ಮಾನವೀಯ ನೆಲೆಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿದ್ದಾರೆ.
ಬಾಕಿ ಇರುವ ಸಾಲಕ್ಕೆ ನಗರ ಪ್ರದೇಶದ ಬೆಲೆಬಾಳುವ ಅವರ ಜಮೀನು ಮತ್ತು ಮನೆಯನ್ನು ಬಲತ್ಕಾರವಾಗಿ ಸ್ವಾಧೀನಪಡಿಸಲು ನೋಟೀಸು ನೀಡಿದ್ದು ಇದು ರಿಯಲ್ ಎಸ್ಟೇಟ್ ದಂಧೆ ರೈತ ಸಂಘ ಜಿಲ್ಲಾ ಸಮಿತಿ ತುರ್ತು ಸಭೆಯಲ್ಲಿ ನಿರ್ಣಯಿಸಿದೆ. ಭಾರತ್ ಬ್ಯಾಂಕಿನ ಬಂಟ್ವಾಳ ಶಾಖೆಯಿಂದ ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿಸಲು ಮಹಿಳೆಗೆ ನಿರ್ದೇಶನ ಮಾಡಲಾಗಿದೆ. ಇದೇ ವೇಳೆ, ಅವರ ಮನವಿಯನ್ನು ಪರಿಗಣಿಸಿ ಹಣ ಮರುಪಾವತಿ ಮಾಡುವಾಗ ರಿಯಾಯಿತಿ ನೀಡಬೇಕೆಂದು ಬ್ಯಾಂಕಿನ ಅಧಿಕಾರಿಗಳಿಗೆ ಮನವಿ ಮಾಡಿದೆ.