child rescued in Mangaluru | ಮಂಗಳೂರು: ಭಿಕ್ಷಾಟನೆ ನಿರತ ಅಪ್ರಾಪ್ತ ಬಾಲಕನನ್ನು ರಕ್ಷಿಸಿದ ಚೈಲ್ಡ್ ಲೈನ್
ಮಂಗಳೂರು ಪಟ್ಟಣದ ಬೆಂದೂರ್ ಬಳಿ ಸ್ಟಿಕ್ಕರ್ ಮಾರಿಕೊಂಡು ಭಿಕ್ಷಾಟನೆಯಲ್ಲಿ ನಿರತರಾಗಿದ್ದ 10 ವರ್ಷ ಪ್ರಾಯದ ಬಾಲಕನನ್ನು ಜನವರಿ 15ರಂದು ಚೈಲ್ಡ್ ಲೈನ್-1098, ದ.ಕ.ಜಿಲ್ಲಾ ತಂಡವು ಸ್ಥಳದಿಂದ ರಕ್ಷಿಸಿದೆ. ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಬಾಲಕರ ಬಾಲಮಂದಿರದಲ್ಲಿ ಪುನರ್ವಸತಿಯನ್ನು ಕಲ್ಪಿಸಲಾಗಿದೆ.
ಬೆಂದೂರ್ವೆಲ್ ಬಳಿ ಅಪ್ರಾಪ್ತ ವಯಸ್ಸಿನ ಬಾಲಕರು ಭಿಕ್ಷಾಟನೆಯಲ್ಲಿ ನಿರತರಾಗಿದ್ದಾರೆ ಎಂಬುದಾಗಿ ಸಾವಜನಿಕರೊಬ್ಬರು ಚೈಲ್ಡ್ ಲೈನ್ ಸಂಸ್ಥೆಗೆ ದೂರು ನೀಡಿದ್ದರು.
ಖಚಿತ ಮಾಹಿತಿ ಪ್ರಕಾರ, ಚೈಲ್ಡ್ ಲೈನ್ 1098 ದ.ಕ.ಜಿಲ್ಲೆಗೆ ಬಂದಿರುವ ಹಿನ್ನಲೆಯಲ್ಲಿ ಚೈಲ್ಡ್ ಲೈನ್ ನ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ತಂಡದ ಸದಸ್ಯರಾದ ಅಸುಂತಾ ಡಿಸೋಜ, ಸ್ವಯಂ ಸೇವಕರಾದ ಕವನ್ ಹಾಗೂ ಪ್ರಶಾಂತ್ ಮೂಡಬಿದ್ರೆಯವರ ಜೊತೆ ಸ್ಥಳ ಭೇಟಿ ನೀಡಿ ಬಾಲಕನನ್ನು ರಕ್ಷಿಸಿದ್ದಾರೆ. ಅಲ್ಲದೆ, ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಪುನರ್ವಸತಿಯನ್ನು ಕಲ್ಪಿಸಲಾಗಿದೆ.
ಒಬ್ಬ ಬಾಲಕ ಮೂಲತಃ ಶಿವಮೊಗ್ಗ ಜಿಲ್ಲೆಯ ಹರಿಹರದವನಾಗಿದ್ದು ಮೂಲತಃ ಮುಡಿಪು ಎಂಬಲ್ಲಿ ವಾಸವಿರುವುದಾಗಿ ಹಾಗೂ ಬಾಲಕನ ಮಾವನಾದ ಮಂಜುನಾಥ್ ಎಂಬಾತನು ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸುತ್ತಿದ್ದು, ಇನ್ನೂ ಅನೇಕ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿಕೊಂಡಿರುವುದಾಗಿ ಮಾಹಿತಿ ಬಂದಿರುತ್ತದೆ.