more accused of Maya Gang arrested | ಗೋಲೀಬಾರ್ ಪ್ರತೀಕಾರಕ್ಕೆ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ: ಮಾಯಾ ಗ್ಯಾಂಗ್‌ನ ಇನ್ನಷ್ಟು ಮಂದಿಯ ಬಂಧನ
ಮಂಗಳೂರು: 2019ರ ಡಿಸೆಂಬರ್ 19ರಂದು ನಡೆದ ಗೋಲೀಬಾರ್‌ಗೆ ಪ್ರತೀಕಾರವಾಗಿ ನಡೆದ ಪೊಲೀಸ್ ಅಧಿಕಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಮಾಯಾ ಗ್ಯಾಂಗ್‌ನ ಮತ್ತಷ್ಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೋಳಾರದ ಇಬ್ರಾಹಿಂ ಶಾಕೀರ್ (19), ಕುದ್ರೋಳಿಯ ಅಕಬರ್ (30) ಮತ್ತು ಮೊಹಮ್ಮದ್ ಹನೀಫ್ (32) ಎಂದು ಗುರುತಿಸಲಾಗಿದೆ. ಈ ಬಂಧನದೊಂದಿಗೆ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 11ಕ್ಕೇರಿದೆ.
ಈಗಾಗಲೇ 8 ಮಂದಿಯನ್ನು ಬಂಧಿಸಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
2019ರ ಡಿಸೆಂಬರ್ 19ರಂದು ನಡೆದಿದ್ದ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಗೋಲೀಬಾರ್ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದರು.
ಈ ಘಟನೆಗೆ ಪ್ರತೀಕಾರವಾಗಿ 2020ರ ಡಿಸೆಂಬರ್ 16ರಂದು ಮಂಗಳೂರಿನ ನ್ಯೂ ಚಿತ್ರಾ ಟಾಕೀಸಿನ ಬಳಿಯಲ್ಲಿ ಕರ್ತವ್ಯದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಮಾಯಾ ಗ್ಯಾಂಗ್‌ನ ಸದಸ್ಯರಾಗಿದ್ದ ಅಪ್ರಾಪ್ತ ಬಾಲಕ ಮತ್ತು ಇನ್ನೊಬ್ಬನನ್ನು ವಶಕ್ಕೆ ಪಡೆದಿದ್ದರು.
ಹೆಚ್ಚಿನ ವಿಚಾರಣೆ ಬಳಿಕ ಆರು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮೂವರ ಬಂಧನದಿಂದ ಒಟ್ಟು 11 ಮಂದಿಯನ್ನು ಬಂಧಿಸಿದಂತಾಗಿದೆ.