Rape case against 30 youths | ಪಾಪಿ ಚಿಕ್ಕಮ್ಮನ ಸಹಕಾರ: 15ರ ಬಾಲೆ ಮೇಲೆ 30ಕ್ಕೂ ಅಧಿಕ ಮಂದಿಯಿಂದ ರೇಪ್!
ಚಿಕ್ಕಮಗಳೂರು: 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಕಳೆದ ಐದು ತಿಂಗಳಿನಿಂದ ಸತತ ಸುಮಾರು 30ಕ್ಕೂ ಹೆಚ್ಚು ಮಂದಿ ಯುವಕರು ಅತ್ಯಾಚಾರ ಎಸಗಿರುವ ಆಘಾತಕಾರಿ ಸುದ್ದಿಯೊಂದು ಶೃಂಗೇರಿ ತಾಲೂಕಿನಲ್ಲಿ ವರದಿಯಾಗಿದೆ.
ಬಾಲಕಿ ಮೂಲಕ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಗ್ರಾಮದವಳು. ಚಿಕ್ಕ ಪ್ರಾಯದಲ್ಲೇ ಅಮ್ಮ ತೀರಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಸಂಬಂಧಿಕರು ಶೃಂಗೇರಿಗೆ ಕರೆ ತಂದಿದ್ದರು. ಕಾರಣ, ತಾಯಿ ತೀರಿಕೊಂಡ ಬಳಿಕ ಬಾಲಕಿಯ ತಂದೆ ಮತ್ತೊಂದು ಮದುವೆಯಾಗಿ ಅಲ್ಲೇ ವಾಸವಾಗಿದ್ದ.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದು, ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ವಿವರ:
ಬಾಲಕಿಯ ತಾಯಿ ಮೃತಪಟ್ಟ ನಂತರ, ನೊಂದ ಬಾಲಕಿಯ ಓದು ಮುಂದುವರಿಸಲು ಆಕೆಯ ಚಿಕ್ಕಮ್ಮ ಶೃಂಗೇರಿಗೆ ಕರೆ ತಂದಿದ್ದರು. ಅಲ್ಲಿ ಆಕೆ ಚಿಕ್ಕಮ್ಮನ ಜೊತೆ ಕ್ರಷರ್ ಕೆಲಸಕ್ಕೆ ಹೋಗಿದ್ದಾಗ ಆಕೆಯ ಮೇಲೆ ಸ್ಥಳೀಯ ಯುವಕ ಅತ್ಯಾಚಾರ ಎಸಗಿದ್ದ.
ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೆ, ಮೊಬೈಲ್‌ನಲ್ಲಿ ಈ ಕೃತ್ಯವನ್ನು ಚಿತ್ರೀಕರಿಸಿದ್ದ. ಬಳಿಕ, ಈ ದೃಶ್ಯವನ್ನು ಇಟ್ಟುಕೊಂಡು ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದ. ಆತನ ಜೊತೆಗೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ಮೊಬೈಲ್ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದ.
ಅಷ್ಟು ಮಾತ್ರವಲ್ಲದೆ, ತನ್ನ ಸ್ನೇಹಿತರು ಮತ್ತು ಪರಿಚಿತರಿಂದಲೂ ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗುವಂತೆ ಪ್ರೇರೇಪಿಸಿದ್ದಾನೆ. ಕಳೆದ ಸೆಪ್ಟೆಂಬರ್‌ನಿಂದ ಈಚೆಗೆ ಆಕೆಯ ಮೇಲೆ ಸುಮಾರು 30 ಮಂದಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ನೀಡಿದ ದೂರಿನ ಅನ್ವಯ ಶೃಂಗೇರಿ ಠಾಣೆಯಲ್ಲಿ 17 ಜನರ ವಿರುದ್ಧ ದೂರು ದಾಖಲಾಗಿದ್ದು, ಎಲ್ಲರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸ್ಮಲ್ ಅಭಿ, ಗಿರೀಶ್, ವಿಕಾಸ್, ಮಣಿಕಂಠ, ರಾಜೇಶ್, ಸಂಪತ್, ಅಮಿತ್, ಆಶ್ವಥ್ ಗೌಡ, ದೀಕ್ಷಿತ್, ನಿರಂಜನ್, ನಯನ ಗೌಡ, ಸಂತೋಷ್, ಯೋಗೇಶ್, ಅಭಿ ಗೌಡ ಹಾಗೂ ಇತರರ ಮೇಲೆ ಎಫ್‌ಐಆರ್ ಹಾಕಲಾಗಿದೆ.
ಬಾಲಕಿಯ ಚಿಕ್ಕಮ್ಮ ಗೀತಾ ಎಂಬವರೂ ಈಕೆಯ ಮೇಲಿನ ಅತ್ಯಾಚಾರಕ್ಕೆ ಸಹಕಾರ ನೀಡಿದ್ದಾರೆ ಎನ್ನಲಾಗಿದ್ದು, ಆಕೆಯ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಕೆಲ ಆರೋಪಿಗಳು ನಾಪತ್ತೆಯಾಗಿದ್ದು, ಅವರ ಹುಡುಕಾಟಕ್ಕೆ ಪೊಲೀಸರು ಪ್ರಯತ್ನ ನಡೆಸಿದ್ದಾರೆ.