Sexual Harassment ? | ಪ್ಯಾಂಟ್ ಜಿಪ್ ತೆರೆದು ಅಸಭ್ಯ ವರ್ತನೆ ಮಾಡಿದ್ರೆ ಲೈಂಗಿಕ ದೌರ್ಜನ್ಯವೇ?: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು
ನಾಗ್ಪುರ: ಐದು ವರ್ಷದ ಬಾಲೆಯ ಕೈ ಹಿಡಿದು ಪ್ಯಾಂಟ್ ಜಿಪ್ ಓಪನ್ ಮಾಡಿ ಅಸಭ್ಯವಾಗಿ ವರ್ತಿಸಿದರೆ, ಅದನ್ನು ಲೈಂಗಿಕ ಅಪರಾಧಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೊಕ್ಸೊ) ಪ್ರಕಾರ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗದು. ಇಂತಹ ಮಹತ್ವದ ಆದೇಶ ಹೊರಡಿಸಿರುವುದು ಬಾಂಬೆ ಹೈಕೋರ್ಟ್‌ನ ನಾಗಪುರ ವಿಭಾಗೀಯ ಪೀಠ.
ಅಷ್ಟೇ ಅಲ್ಲದೆ, ಅಧೀನ ನ್ಯಾಯಾಲಯದಿಂದ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಿದೆ. ಆರೋಪಿ ಪರ ಮೇಲ್ಮನವಿಯನ್ನು ವಿಚಾರಣೆಗೊಳಪಡಿಸಿದ ಹೈಕೋರ್ಟ್ ಪೀಠ ಈ ತೀರ್ಪು ನೀಡಿದೆ.
ಲೈಂಗಿಕ ಅಪರಾಧಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೊಕ್ಸೊ) ಪ್ರಕಾರ ಇಂತಹ ಅಪರಾಧ ಶಿಕ್ಷಾರ್ಹ ಪ್ರಕರಣವಲ್ಲ ಎಂದು ನ್ಯಾ. ಪುಷ್ಪಾ ಗಣೇದಿವಾಲಾ ಅವರ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.
ಒಬ್ಬರ ಚರ್ಮ ಮತ್ತೊಬ್ಬರ ಚರ್ಮಕ್ಕೆ ಸ್ಪರ್ಶವಾಗದೆ ಇದ್ದರೆ ಅದು ಲೈಂಗಿಕ ಕಿರುಕುಳವಲ್ಲ ಎಂಬ ಬಾಂಬೆ ಹೈಕೋರ್ಟ್‌ನ ವಿಲಕ್ಷಣ ತೀರ್ಪಿಗೆ ಸುಪ್ರೀಂ ತಡೆ ತಂದ ಬೆನ್ನಲ್ಲೇ ಈ ತೀರ್ಪು ಹೊರಬಿದ್ದಿದೆ.
ಪ್ರಕರಣದ ವಿವರ
50 ವರ್ಷ ಪ್ರಾಯದ ಆರೋಪಿ ಕುಜೂರು ಎಂಬಾತ ಪುಟಾಣಿಯ ಕೈ ಹಿಡಿದು ಪ್ಯಾಂಟ್ ಜಿಪ್ ತೆರೆದು ಅಸಭ್ಯವಾಗಿ ವರ್ತಿಸಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಬಾಲಕಿಯ ಸಂಬಂಧಿಕರು ದಾಖಲಿಸಿದ್ದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ ಪೋಕ್ಸೊ ಕಾಯ್ದೆಯಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯ ಆರೋಪಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.