Thantre Thant | "ನೀ ತಾಂಟ್ರೆ ಬಾ ತಾಂಟ್": ಮಾತಿಗೆ ಮಾತು ಬೆಳೆದು ಸುರತ್ಕಲ್‌ನಲ್ಲಿ ಚೂರಿ ಇರಿತ- ಮೂವರ ಸೆರೆ
ಮಂಗಳೂರು: ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯೊಂದರಲ್ಲಿ ಸುರತ್ಕಲ್‌ನಲ್ಲಿ ನಡೆದಿದ್ದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದ ಮೂರು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕಾಟಿಪಳ್ಳದ ಜಾಬೀರ್ ಎಂಬವರನ್ನು ಚೂರಿಯಿಂದ ಇರಿದು ಹಲ್ಲೆ ಮಾಡಲಾಗಿತ್ತು. ಈ ಘಟನೆ ಕಳೆದ ಬುಧವಾರ ರಾತ್ರಿ ಗಣೇಶಪುರದಲ್ಲಿ ನಡೆದಿತ್ತು.
ಬಂಧಿತ ಆರೋಪಿಗಳನ್ನು ಕಾಟಿಪಳ್ಳದ ಒಂದನೇ ಬ್ಲಾಕ್ ನಿವಾಸಿಗಳಾದ ರಾಜು, ಶ್ರೀನಿವಾಸ ಮತ್ತು ಅಭಿಷೇಕ್ ಎಂದು ಗುರುತಿಸಲಾಗಿದೆ.
ರಾಜಕೀಯ ನಾಯಕರೊಬ್ಬರು ಬಳಸಿದ ಬ್ಯಾರಿ ಭಾಷೆಯ ಸವಾಲಿನ ಹೇಳಿಕೆ "ನೀ ತಾಂಟ್ರೆ ಬಾ ತಾಂಟ್" ತುಳುನಾಡಿನಲ್ಲಿ ಭಾರೀ ಟ್ರೋಲ್ ಆದ ವಾಕ್ಯ. ಈ ಮಾತು ಇಲ್ಲೂ ಬಳಕೆಯಾಗಿದೆ. ಅಭಿಷೇಕ್ ಮತ್ತು ಸ್ನೇಹಿತರು ರಾತ್ರಿ ನೂಡಲ್ಸ್ ತಿಂದು ಗಣೇಶಪುರದ ಕಡೆ ಹೋಗುತ್ತಿದ್ಧಾಗ ಜಾಬೀರ್ ಮತ್ತು ಸ್ನೇಹಿತರು ಎದುರಾಗಿದ್ದರು.
ಗುರುತು ಪರಿಚಯ ಇಲ್ಲದಿದ್ದರೂ "ನೀ ತಾಂಟ್ರೆ ಬಾ ತಾಂಟ್" ಎಂದು ಹೇಳಿದ್ದರು. ಈ ಮಾತು ಗಲಾಟೆಯಾಗಿ ಬೆಳೆದು ಕೊಲೆ ಯತ್ನದ ವರೆಗೂ ಹೋಗಿದೆ. ಚೂರಿ ಇರಿತವಾದಾಗ ಜಾಬೀರ್ ಸ್ನೇಹಿತರು ಭಯಭೀತರಾಗಿ ಓಡಿ ಹೋಗಿದ್ದಾರೆ.
ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸರು ತನಿಖೆ ನಡೆಸಿದ್ದು, ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಆರೊಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೊಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.