Weight Lifting Championship | ರಾಜ್ಯಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಮೊದಲ ದಿನದಂತ್ಯಕ್ಕೆ ಆಳ್ವಾಸ್ ಮುನ್ನಡೆ
ಮೂಡುಬಿದಿರೆ: ಕರ್ನಾಟಕ ರಾಜ್ಯ ವೇಟ್‌ಲಿಫ್ರ‍್ಸ್ ಅಸೋಸಿಯೇಶನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ರಾಜ್ಯಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಉದ್ಘಾಟನೆ ಆಳ್ವಾಸ್ ಕಾಲೇಜಿನ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಿತು.
ಮೊದಲನೇ ಯೂಥ್, ೪೭ನೇ ಪುರುಷ ಹಾಗೂ ೩೧ನೇ ಮಹಿಳಾ ರಾಜ್ಯಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಇದಾಗಿದ್ದು, ಯೂಥ್, ಜೂನಿಯರ್, ಸೀನಿಯರ್ ಮಟ್ಟದ ವಿವಿಧ ಕೆಟಗರಿಗಳಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಇದರಲ್ಲಿ ಚಾಂಪಿಯನ್ ಆದ ಕ್ರೀಡಾಪಟುಗಳು ನಾಗರಕೊಯಿಲ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆಯಲಿದ್ದಾರೆ.
ಚಾಂಪಿಯನ್‌ಶಿಪ್‌ನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್‌ನ ಮಾಜಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಕುಂಭಾಶಿ, `ವೇಟ್‌ಲಿಫ್ಟಿಂಗ್ ಸದವಕಾಶಗಳನ್ನು ದೊರಕಿಸಿಕೊಡುವ ಕ್ರೀಡಾಕ್ಷೇತ್ರವಾಗಿದೆ. ಕ್ರೀಡಾಪಟುಗಳು ಬೆಳೆಯಲು ಒಂದು ಒಳ್ಳೆಯ ವೇದಿಕೆ ಬೇಕು. ಅವರ ಬೆಳವಣಿಗೆಗೆ ಈ ಬಗೆಯ ಚಾಂಪಿಯನ್‌ಶಿಪ್ ಸ್ಪರ್ಧೆಗಳ ಅವಶ್ಯಕತೆಯಿದೆ. ಸುಸಜ್ಜಿತ ಆಯೋಜನೆಗಳು ಕ್ರೀಡಾಪಟುಗಳ ಪ್ರಗತಿಗೆ ಪೂರಕವಾಗುತ್ತವೆ' ಎಂದರು.
ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದ ಅಂತರಾಷ್ಟ್ರೀಯ ಮಾಜಿ ವೇಟ್‌ಲಿಫ್ಟರ್ ಆರ್ಥರ್ ಡಿಸೋಜಾ಼ `ಪ್ರಸ್ತುತ ದಿನಗಳಲ್ಲಿ ಕ್ರೀಡೆ ಹಾಗೂ ಕ್ರೀಡೆಗೆ ಸಂಬಂಧಿಸಿದ ಕ್ಷೇತ್ರಗಳು ಉತ್ತಮವಾಗಿ ಬೆಳೆದಿದ್ದು, ಕ್ರೀಡಾಪಟುಗಳಿಗೆ ವಿಪುಲ ಅವಕಾಶಗಳಿವೆ. ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಚಾಂಪಿಯನ್‌ಶಿಪ್ ಸ್ಪರ್ಧೆಗಳ ಸಂದರ್ಭದಲ್ಲಿ ಎದುರಾಗುತ್ತಿದ್ದ ಎಷ್ಟೋ ಸವಾಲುಗಳು ಈಗಿಲ್ಲ' ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ಸ್ ಅಸೋಸಿಯೇಶನ್‌ನ ಕಾರ್ಯಾಧ್ಯಕ್ಷ ಡಿ.ಚಂದ್ರಹಾಸ್ ರೈ, `ಕ್ರೀಡಾ ಚಾಂಪಿಯನ್‌ಶಿಪ್‌ಗಳ ಆಯೋಜನೆ ತುಂಬಾ ಕಷ್ಟದ ಕೆಲಸ. ಆ ಸಂಘಟನಾ ಜವಾಬ್ದಾರಿಯಲ್ಲಿ ಬಹಳಷ್ಟು ಸವಾಲುಗಳು ಎದುರಾಗುತ್ತವೆ. ಅದನ್ನು ಸರಿಪಡಿಸಿ ಮುನ್ನಡೆಯುವುದು ತುಂಬಾ ಅಗತ್ಯ. ಇಂತಹ ಆಯೋಜನೆಗಳಲ್ಲಿ ಸಮಾಜದ ದೊಡ್ಡ ವ್ಯಕ್ತಿಗಳು ಸಹಕರಿಸಬೇಕು' ಎಂದರು.
ಡೋಪಿಂಗ್ ಬಗ್ಗೆ ಕಿವಿಮಾತು ಹೇಳಿದ ಚಂದ್ರಹಾಸ್ ಪೈ, ಕ್ರೀಡಾಪಟುಗಳು ಡೋಪಿಂಗ್ ಬಗ್ಗೆ ಬಹಳ ಎಚ್ಚರದಿಂದಿರಬೇಕು. ಉದ್ದೀಪನ ಮದ್ದುಗಳು ಕ್ರೀಡಾಪಟುಗಳ ಜೀವನಕ್ಕೆ ದೊಡ್ಡ ಕಂಟಕ ತರಬಲ್ಲವು. ಅವುಗಳಿಂದ ದೂರವಿರುವುದು ತುಂಬಾ ಮುಖ್ಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ವೇಟ್‌ಲಿಫ್ರ‍್ಸ್ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಎಸ್.ಎಚ್. ಆನಂದೇ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಈ ಚಾಂಪಿಯನ್‌ಶಿಪ್ ಆಯೋಜನೆ ಹಾಗೂ ಅದನ್ನು ಕಾರ್ಯಗತಗೊಳಿಸಿದುದರ ಕುರಿತು ಹೆಚ್ಚಿನ ಮಾಹಿತಿ ನೀಡಿದರು.
ಆಳ್ವಾಸ್ ವೇಟ್‌ಲಿಫ್ಟಿಂಗ್ ತಂಡದ ಕೋಚ್ ಪ್ರಮೋದ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ ಕಾರ್ಯಮ್ರಮ ನಿರೂಪಿಸಿದರು.
ಇದೇ ಮೊದಲ ಬಾರಿಗೆ ಯೂಥ್ ಮಟ್ಟವನ್ನು ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಸೇರಿಸಲಾಗಿದೆ. ಯೂಥ್, ಜೂನಿಯರ್, ಸೀನಿಯರ್ ಮಟ್ಟದ ಮಹಿಳಾ ಹಾಗೂ ಪುರುಷರ ವಿಭಾಗದಲ್ಲಿ 10 ಕೆಟಗರಿಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 250ಕ್ಕೂ ಹೆಚ್ಚು ವೇಟ್‌ಲಿಫ್ಟರ್‌ಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ಅಸೋಸಿಯೇಶನ್‌ನ ಆಫೀಶಿಯಲ್‌ಗಳು ರೆಫರಿಗಳಾಗಿ ಪಾಲ್ಗೊಂಡಿದ್ದಾರೆ.
ಚಾಂಪಿಯನ್‌ಶಿಪ್‌ನ ಮೊದಲ ದಿನದಂತ್ಯಕ್ಕೆ ಆಳ್ವಾಸ್ ಕಾಲೇಜು ವಿವಿಧ ವಿಭಾಗಗಳಲ್ಲಿ ಮುನ್ನಡೆ ಸಾಧಿಸಿದೆ.