Youth attacked for Shivaji Sticker in his bike | ಬೈಕ್‌ನಲ್ಲಿ ಶಿವಾಜಿ ಸ್ಟಿಕರ್: ಯುವಕನಿಗೆ ದುಷ್ಕರ್ಮಿಗಳಿಂದ ಹಲ್ಲೆ
ಮಂಗಳೂರಿನ ಹೃದಯಭಾಗದ ಲಾಲ್‌ಬಾಗ್‌ನಲ್ಲಿ ಯುವಕನ ಮೇಲೆ ದುಷ್ಕರ್ಮಿಳಿಂದ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಬೈಕ್‌ನಲ್ಲಿ ಶಿವಾಜಿ ಸ್ಟಿಕ್ಕರ್ ಹಾಕಿರುವುದೇ ಈ ಹಲ್ಲೆಗೆ ಕಾರಣ ಎನ್ನಲಾಗಿದೆ.
ಘಟನೆ ಭಾನುವಾರ ರಾತ್ರಿ 9-45ರ ಹೊತ್ತಿಗೆ ನಡೆದಿದ್ದು, ಉರ್ವ ಪೊಲೀಸರು ಸ್ಥಳಕ್ಕೆ ದಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾಗಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಲ್ಲೆ ಮಾಡಿರುವ ಆರು ಮಂದಿ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭರವಸೆ ನೀಡಿದ್ದಾರೆ.
ಘಟನೆಯ ವಿವರ
ಹಿಂದೂ ಸಂಘಟನೆಯೊಂದರ ಕಾರ್ಯಕರ್ತನಾಗಿರುವ ದೀಪಕ್, ಶಿವಾಜಿ ಸ್ಟಿಕರ್ ಹಾಕಿರುವ ತಮ್ಮ ಬೈಕ್‌ನಲ್ಲಿ ಲಾಲ್‌ಭಾಗ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಬೈಕ್‌ನಲ್ಲಿ ಆಗಮಿಸಿದ ಆರು ಮಂದಿ ಆಗಂತುಕರು ಶಿವಾಜಿ ಸ್ಟಿಕ್ಕರ್‌ಗೆ ತಗಾದೆ ತೆಗೆದರು. ಅಲ್ಲದೆ, ಯುವಕನನ್ನು ಅಮಾನುಷವಾಗಿ ಬ್ಲೇಡ್, ರೇಸರ್ ಮತ್ತಿತರ ಮಾರಕಾಸ್ತ್ರಗಳಿಂದ ಗೀರಿ ಗಂಭೀರವಾಗಿ ಗಾಯಗೊಳಿಸಿ ಪರಾರಿಯಾದರು.
ಉರ್ವ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯಲ್ಲಿ ಗಾಯಗೊಂಡ ಯುವಕನ ಆರೋಗ್ಯ ವಿಚಾರಿಸಿದ್ದಾರೆ.
ಮಂಗಳೂರಿನಲ್ಲಿ ಶಾಂತಿ ಕದಡಲು ಯತ್ನಿಸುವ ಇಂತಹ ಘಟನೆ ಖಂಡನೀಯ, ಈ ಘಟನೆಯ ಹಿಂದೆ ಇರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಶಿಕ್ಷೆಗೊಳಪಡಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿರುವುದಾಗಿ ವೇದವ್ಯಾಸ್ ಕಾಮತ್ ಹೇಳಿದ್ದಾರೆ.