Dam takes away life of farmers | ಪಶ್ಚಿಮ ವಾಹಿನಿ ಯೋಜನೆಯಡಿ ಅಣೆಕಟ್ಟು: ಬಂಟ್ವಾಳದ ಕೃಷಿ ಭೂಮಿಗೆ ಅಪಾರ ಹಾನಿ
ಬಂಟ್ವಾಳ: ರಾಷ್ಟ್ರಾದ್ಯಂತ ರೈತರ ಹೋರಾಟ ಕಾವೇರಿರುವ ಹೊತ್ತಲ್ಲಿ ಕರಾವಳಿಯಲ್ಲೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಟ್ವಾಳದ ಕರ್ಪೆ ಗ್ರಾಮದ ದೋಟ ಎಂಬಲ್ಲಿ ಅಪಾರ ಕೃಷಿ ಭೂಮಿ ಹಾನಿಯಾಗಿದೆ.
ಇದಕ್ಕೆ ಕಾರಣ ಪಶ್ಚಿಮ ವಾಹಿನಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಅಣೆಕಟ್ಟು.
ಇದಕ್ಕೆ ನಷ್ಟ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ರೈತ ಕುಟುಂಬಗಳು ಮನವಿ ಮಾಡಿದೆ. ರೈತರ ಕುಟುಂಬಗಳ ಪರವಾಗಿ ರೈತ ಸಂಘ ಹಾಗೂ ಹಸಿರು ಸೇನೆ ರಂಗಕ್ಕಿಳಿದಿದೆ.
ಕರ್ಪೆ ಗ್ರಾಮದಲ್ಲಿ ಹರಿಯುತ್ತಿರುವ ಫಲ್ಗುಣಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟು ಕಟ್ಟಲಾಗುತ್ತಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ಬೆಳ್ತಂಗಡಿ ಮತ್ತು ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಅಣೆಕಟ್ಟಿನ ಮೇಲೆ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.
ಆದರೆ, ಈ ಅಣೆಕಟ್ಟು ಮತ್ತು ಸೇತುವೆ ನಿರ್ಮಾಣ ಅನೇಕ ಕೃಷಿ ಕುಟುಂಬಗಳ ಭೂಮಿಯನ್ನು ನುಂಗಿ ಹಾಕಿದೆ. ಅಭಿವೃದ್ಧಿಗೆ ಭೂಮಿ ನೀಡಿರುವ ಕೃಷಿ ಕುಟುಂಬಗಳು ಈಗ ಬಾಯಿ ಬಾಯಿ ಬಿಡುವಂತೆ ಮಾಡಿದೆ.
ಅಧಿಕಾರಿಗಳು ರೈತ ಕುಟುಂಬಗಳ ಬಗ್ಗೆ ಕನಿಷ್ಟ ಕಾಳಜಿಯನ್ನೂ ತೋರಿಸುತ್ತಿಲ್ಲ. ಹೀಗೆ ಮುಂದುವರಿದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರೈತ ಸಂಘ ಮತ್ತು ಹಸಿರು ಸೇನೆ ಎಚ್ಚರಿಕೆ ನೀಡಿದೆ.