High Court CJ AS Oka | ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ನ್ಯಾಯಾಲಯ ಕಾರ್ಯಕಲಾಪ: ನ್ಯಾ. ಎ.ಎಸ್. ಓಕಾ
ಕೆಳ ಹಂತದ ನ್ಯಾಯಾಲಯಗಳು ವಕೀಲರಿಗೆ ಸವಾಲು
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಓ.ಎಸ್. ಓಕಾ
ಮಂಗಳೂರಿನಲ್ಲಿ ವಕೀಲರ ಸಂಘದ ಕಾರ್ಯಕ್ರಮ
ಕೋವಿಡ್ ನಿರ್ಬಂಧದ ಬಳಿಕ ಇದೇ ಮೊದಲ ಬಾರಿ ಮುಂದಿನ ಸೋಮವಾರದಿಂದ ರಾಜ್ಯದ ಎಲ್ಲ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಂಗಳೂರು ವಕೀಲರ ಸಂಘದ ಸಭೆಯಲ್ಲಿ ಭಾಗವಹಿಸಿದ ಅವರು ಈ ವಿಷಯ ತಿಳಿಸಿದ್ದಾರೆ. ರಾಜ್ಯದ ನ್ಯಾಯಾಲಯಗಳಲ್ಲಿ ಕಕ್ಷಿದಾರರ ಅಗತ್ಯವಿದ್ದರೆ ಮಾತ್ರ ಅವರ ಹಾಜರಾತಿಯನ್ನು ಖಾತ್ರಿಗೊಳಿಸುವಂತೆ ವಕೀಲರಿಗೆ ಕರೆ ನೀಡಿದ ಅವರು, ಕೋವಿಡ್ ನಂತರದ ಕಾಲಾವಧಿ ಎಲ್ಲ ವಕೀಲರ ವೃತ್ತಿ ಬದುಕಿನಲ್ಲಿ ಒಳಿತನ್ನು ತರಲಿ ಎಂದು ಹಾರೈಸಿ ನ್ಯಾಯದಾನ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕಿವಿಮಾತು ಹೇಳಿದರು.
ವೃತ್ತಿಬದುಕಿನಲ್ಲಿ ತಾನೂ ಕೆಲ ಹಂತದ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಿದ್ದೆ. ಅದೊಂದು ಉತ್ತಮ ಅನುಭವ. ಕೆಳ ಹಂತದ ನ್ಯಾಯಾಲಯಗಳನ್ನು ವಕೀಲ ವೃತ್ತಿ ನಿರ್ವಹಿಸುವುದು ಒಂದು ಸವಾಲು. ಹೈಕೋರ್ಟ್‌ಗಳಲ್ಲಿ ವೃತ್ತಿ ನಿರ್ವಹಿಸುವುದು ಅಷ್ಟೇನೂ ದೊಡ್ಡ ವಿಷಯವಲ್ಲ. ಆದರೆ, ಸಿವಿಲ್ ಪ್ರಕರಣಗಳನ್ನು ಅಧೀನ ನ್ಯಾಯಾಲಯದಲ್ಲಿ ನಡೆಸುವುದು ವಕೀಲರ ಬಹು ದೊಡ್ಡ ಸವಾಲಿನ ವಿಷಯವಾಗಿದೆ. ಈ ಸವಾಲನ್ನು ನಿಭಾಯಿಸಲು ವಕೀಲರು ಮುಂದಾಗಬೇಕು. ಈ ಮೂಲಕ ನ್ಯಾಯದಾನ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಅವರು ಹೇಳಿದರು.
ಮಂಗಳೂರಿನ ವಕೀಲರ ಸಂಘ ಹೊಸ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿದೆ. ಇದೊಂದು ಉತ್ತಮ ಕಾರ್ಯವಾಗಿದ್ದು, ಇದಕ್ಕೆ ನಾವೂ ಸರ್ವ ರೀತಿಯಲ್ಲಿ ಸಹಕಾರ ನೀಡಲಿದ್ದೇವೆ ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಲಯಗಳ ಆಡಳಿತಾತ್ಮಕ ನ್ಯಾಯಮೂರ್ತಿ ದಿನೇಶ್ ಕುಮಾರ್ ಭಾಗವಹಿಸಿದ್ದರು. ಸಭೆಯಲ್ಲಿ ನ್ಯಾಯಾಲಯಗಳ ಕುಂದುಕೊರತೆಗಳು ಮತ್ತು ವಕೀಲರ ಅಹವಾಲುಗಳನ್ನು ಅವರು ಸ್ವೀಕರಿಸಿದರು.
ನ್ಯಾಯಾಲಯ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಕೀಲರ ಸಂಘದ ಕಟ್ಟಡದ ನಿವೇಶನ ಪರಿಶೀಲಿಸಿದ ನ್ಯಾಯಮೂರ್ತಿಗಳು, ಪಾಳು ಬಿದ್ದಿರುವ ಸರ್ಕಾರಿ ಅಭಿಯೋಜಕರ ಕಟ್ಟಡದ ಬಗ್ಗೆ ವರದಿ ನೀಡುವಂತೆ ನ್ಯಾಯಾಂಗ ಅಧಿಕಾರಿಗಳಗಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಸ್ವಾಗತಿಸಿ ಖಜಾಂಚಿ ಅರುಣಾ ಬಿ.ಪಿ. ಪ್ರಸ್ತಾವನೆ ಮಾಡಿ ಧನ್ಯವಾದ ಸಮರ್ಪಿಸಿದರು.