Jagadish Adhikari regrets on his statement | ವಿವಾದಿತ ಹೇಳಿಕೆ: ಕೋಟಿ ಚೆನ್ನಯರ ಗರಡಿಯಲ್ಲಿ ಜಗದೀಶ್ ಅಧಿಕಾರಿ ಕ್ಷಮೆ, ತಪ್ಪು ಕಾಣಿಕೆ
ಮೂಡಬಿದ್ರೆ: ಬಿಲ್ಲವ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಾಗೂ ಕೋಟಿ ಚೆನ್ನಯರ ಕುರಿತ ತಮ್ಮ ಹೇಳಿಕೆ ಬಗ್ಗೆ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಪಶ್ಚತ್ತಾಪ ಪಟ್ಟಿದ್ದಾರೆ. ಅಲ್ಲದೆ, ವಿವಾದಕ್ಕೆ ಕಾರಣವಾಗಿದ್ದ ಹೇಳಿಕೆ ಬಗ್ಗೆ ಅವರು ಕ್ಷಮೆಯಾಚನೆ ಮಾಡಿದ್ದಾರೆ.
ಮೂಡುಬಿದಿರೆ ಸಮೀಪದ ಕೆಲ್ಲಪುತ್ತಿಗೆಯ ಪುರಾತನ ಶ್ರೀ ಕ್ಷೇತ್ರ ಭೂತರಾಜಗುಡ್ಡೆಯ ಶ್ರೀ ಧರ್ಮರಸು ದೈವ , ಕುಕ್ಕಿನಂತಾಯ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗರಡಿಗೆ ಭೇಟಿ ನೀಡಿ, ತಪ್ಪು ಕಾಣಿಕೆ ಸಲ್ಲಿಸಿ, ದೈವದೇವರ ಮುಂದೆ ಕ್ಷಮೆಯಾಚನೆ ಮಾಡಿ ತಪ್ಪು ಕಾಣಿಕೆ ಹಾಕಿದರು.
ತಮ್ಮ ಹೇಳಿಕೆಯಿಂದ ಬಿಲ್ಲವ ಸಮುದಾಯಕ್ಕೆ ನೋವಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರು ಕೂಡ ಇದರಿಂದ ನೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಕ್ಷಮೆಯಾಚನೆ ಮಾಡುತ್ತಿದ್ದೇನೆ. ತನ್ನ ಮಾತಿನಿಂದ ಉಂಟಾದ ವಿವಾದಕ್ಕೆ ಕೋಟಿ ಚೆನ್ನಯರ ಗರಡಿಯಲ್ಲಿಯೇ ಬಂದು ನಿಂತು ಕ್ಷಮೆಯಾಚಿಸಿ, ತಪ್ಪು ಕಾಣಿಕೆ ಸಲ್ಲಿಸುವ ಮೂಲಕ ಎಲ್ಲಾ ವಿವಾದಗಳಿಗೆ ತಾನು ಇತಿಶ್ರೀ ನೀಡಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ಧಾರೆ.
ಶೀಘ್ರದಲ್ಲೇ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ತೆರಳಿ ಅವರಲ್ಲೂ ಕ್ಷಮೆಯಾಚಿಸುತ್ತೇನೆ ಜೊತೆಗೆ ಕುದ್ರೋಳಿ ಹಾಗೂ ಗೆಜ್ಜೆಗಿರಿ ಕ್ಷೇತ್ರಕ್ಕೆ ತೆರಳಿ ತಪ್ಪು ಕಾಣಿಕೆ ಸಲ್ಲಿಸಿ, ಕ್ಷಮೆಯಾಚನೆ ಮಾಡುವುದಾಗಿಯೂ ಜಗದೀಶ್ ಅಧಿಕಾರಿ ಅವರು ಹೇಳಿದರು.