Kodiyal Theru at Mangaluru Carstreet | 200ನೇ ವರ್ಷದ ಮಂಗಳೂರು ರಥೋತ್ಸವ ಸಂಪನ್ನ: ರಥಬೀದಿಯಲ್ಲಿ ಸಂಭ್ರಮ
ಮಂಗಳೂರು: ಇಲ್ಲಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ 200ನೇ ವರ್ಷದ ಮಂಗಳೂರು ರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜ್ರಂಭಣೆಯಿಂದ ನಡೆಯಿತು. ಕಾಶೀ ಮಠಾಧೀಶರಾದ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ರಥೋತ್ಸವ ನಡೆಯಿತು.
ರಥ ಸಪ್ತಮಿಯ ಪರ್ವ ದಿನದಂದು ಬೆಳಿಗ್ಗೆ ಶ್ರೀ ದೇವರ ಸನ್ನಿಧಾನದಲ್ಲಿ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಪ್ರಾರ್ಥನೆ ನಡೆದು ಬಳಿಕ ಪಂಚಾಮೃತ ಅಭಿಷೇಕ ನಡೆದು ತದನಂತರ ಶ್ರೀಗಳವರಿಂದ ಶ್ರೀ ವೀರ ವೆಂಕಟೇಶ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ ನಂತರ ಮಹಾ ಮಂಗಳಾರತಿ ಜರಗಿತು.
ಯಜ್ಞ ಮಂಟಪದಲ್ಲಿ ಮಹಾ ಯಜ್ಞದ ಪೂರ್ಣಾಹುತಿ ಬಳಿಕ ಸರ್ವಾಲಂಕಾರ ಭೂಷಿತ ಶ್ರೀ ವೀರ ವೆಂಕಟೇಶ್ ಹಾಗೂ ಶ್ರೀನಿವಾಸ ದೇವರು ಪುಷ್ಪಾಲಂಕೃತ ಸ್ವರ್ಣ ಪಲ್ಲಕಿಯಲ್ಲಿ ವಿರಾಜಮಾನರಾಗಿ ಭವ್ಯ ಬ್ರಹ್ಮ ರಥದಲ್ಲಿ ರಥಾರೂಢರಾಗಿ ನೆರೆದ ಸಾವಿರಾರು ಭಜಕರ ಸಮ್ಮುಖದಲ್ಲಿ ಮಂಗಳೂರು ರಥೋತ್ಸವ ಸಮಾಪನ ಗೊಂಡಿತು.
ರಾತ್ರಿ ಭಜಕರೆಲ್ಲರು ಸೇರಿ ರಥವನ್ನು ಎಳೆಯುವುದರ ಮೂಲಕ ಸೇವೆ ಸಲ್ಲಿಸಿದರು . ನೆರೆದ ಸಹಸ್ರಾರು ಸಮಾಜ ಬಾಂಧವರಿಗೆ ಸಮಾರಾಧನೆ ನಡೆಯಿತು.