Angara effort in releasing kerosin for D.K. | ಸಚಿವ ಅಂಗಾರ ಮನವಿಗೆ ಸ್ಪಂದಿಸಿದ ಕೇಂದ್ರ: 8822 ಕಿ.ಲೀ. ಸೀಮೆಎಣ್ಣೆ ಬಿಡುಗಡೆ
ಮಂಗಳೂರು : ಸೀಮೆಎಣ್ಣೆ ಕೊರತೆಯಿಂದ ಕರಾವಳಿಯ ಮೀನುಗಾರಿಕಾ ಬೋಟ್‌ಗಳು ಸಂಕಷ್ಟ ಎದುರಿಸುತ್ತಿದ್ದು, ಈಗ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ಮನವಿಗೆ ಸ್ಪಂದಿಸಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕರ್ನಾಟಕಕ್ಕೆ ಒಟ್ಟು 8822 ಕೆಎಲ್ (ಕೆಎಲ್ =1 ಸಾವಿರ ಲೀ.) ಸೀಮೆಎಣ್ಣೆ ಬಿಡುಗಡೆ ಮಾಡಿದೆ.
ಸೀಮೆ ಎಣ್ಣೆ ಪೂರೈಕೆಯಾಗದೆ ಮೀನುಗಾರರು ತೊಂದರೆ ಅನುಭವಿಸುತ್ತಿದ್ದರು. ಹೆಚ್ಚುವರಿ ಸೀಮೆಎಣ್ಣೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವಂತೆ ಮೀನುಗಾರ ಮುಖಂಡರು ಸಚಿವ ಎಸ್.ಅಂಗಾರ ಅವರನ್ನು ವಿನಂತಿಸಿದ್ದರು.
ಈ ಹಿನ್ನೆಲೆಯಲ್ಲಿ ಸಚಿವರು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಜತೆಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯವನ್ನು ಸಂಪರ್ಕಿಸುವಂತೆ ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ , ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್‌ಕುಮಾರ್ ಕಟೀಲ್‌ಸಹಿತ ಕರಾವಳಿ ಭಾಗದ ಸಂಸದರ ಸಹಕಾರದಿಂದ ಸೀಮೆಎಣ್ಣೆ ಬಿಡುಗಡೆ ಮಾಡಲು ಸಚಿವ ಎಸ್.ಅಂಗಾರ ಯಶಸ್ವಿಯಾಗಿದ್ದಾರೆ.
2021ನೇ ಸಾಲಿನಲ್ಲಿ ಕೇಂದ್ರದಿಂದ ಬರಲು ಬಾಕಿ ಇದ್ದ 7020 ಕೆಎಲ್ ಸೀಮೆಎಣ್ಣೆ ಮತ್ತು ಸಚಿವರ ಮನವಿ ಮೇರೆಗೆ ಹೆಚ್ಚುವರಿ 1802 ಕೆಎಲ್ ಸಬ್ಸಿಡಿ ರಹಿತ ಸೀಮೆಎಣ್ಣೆ ಬಿಡುಗಡೆ ಮಾಡಲಾಗುವುದೆಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರಿಗೆ ಪತ್ರ ಮುಖೇನ ತಿಳಿಸಿದೆ.