PhonePe customer filed case in consumer court | ಫೋನ್ ಪೇ ಕಿರಿಕಿರಿ; ಹಣ ಕಟ್ ಆದರೂ ಜಮೆ ಆಗಿಲ್ಲ; ನ್ಯಾಯಾಲಯ ಮೊರೆ ಹೋದ ಗ್ರಾಹಕ
Friday, February 5, 2021
ಗ್ರಾಹಕರಿಗೆ ಸೂಕ್ತ ಸೇವೆ ನೀಡದ ಹಾಗೂ ವಂಚನೆ ಎಸಗಿದ ಆರೋಪದ ಮೇಲೆ ಗ್ರಾಹಕರೊಬ್ಬರು ಫೋನ್ ಪೇ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆದರೆ, ಹಣದ ಮೊತ್ತ ಬರೀ ರೂ. 579/- ಮಾತ್ರ. ಫೋನ್ ಪೇ ವಿರುದ್ಧ ಒಂದು ಲಕ್ಷ ರೂ. ಪರಿಹಾರ ಕೋರಿ ದಾವೆ ಹೂಡಲಾಗಿದೆ.
ಘಟನೆಯ ವಿವರ:
ಮಂಗಳೂರಿನ ಗ್ರಾಹಕ ರಾಜೇಶ್ ಎಂಬವರು ದೈನಂದಿನ ಸಾಮಾಗ್ರಿ ಖರೀದಿಸಿ ತಮ್ಮ ಮೊಬೈಲ್ ಆಪ್ ಫೋನ್ ಪೇ ಮೂಲಕ ವ್ಯಾಪಾರಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ತಮ್ಮ ಖಾತೆಯಿಂದ ಹಣ ಕಡಿತಗೊಂಡು, ವ್ಯಾಪಾರಿ ಖಾತೆಗೆ ಹಣ ಜಮೆ ಆಗಬೇಕಿತ್ತು.
ಗ್ರಾಹಕ ರಾಜೇಶ್ ಅವರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದ್ದು, ವ್ಯಾಪಾರಿ ಖಾತೆಗೆ ಹಣ ಜಮೆ ಆಗಿರಲಿಲ್ಲ. ಈ ಬಗ್ಗೆ ತಕ್ಷಣ ರಾಜೇಶ್ ಫೋನ್ ಪೇಗೆ ದೂರು ದಾಖಲಿಸಿದ್ದರು. ಇದಕ್ಕೆ ಫೋನ್ ಪೇ ಕಡೆಯಿಂದ "ಹಣ ವರ್ಗಾವಣೆ ಯಶಸ್ವಿಯಾಗಿದೆ. ಮರ್ಚಂಟ್ ಖಾತೆಯನ್ನು ಪರಿಶೀಲಿಸಿ" ಎಂದು ಪ್ರತ್ಯುತ್ತರ ಬಂದಿತ್ತು.
ಒಂದು ವಾರ ಕಾದರೂ ಹಣ ವರ್ಗಾವಣೆಯಾಗಿರಲಿಲ್ಲ. ಈ ಬಗ್ಗೆ ಬ್ಯಾಂಕ್‌ಗೆ ಲಿಖಿತ ದೂರು ದಾಖಲಿಸಿದ್ದು, ಬ್ಯಾಂಕ್ ತಮ್ಮ ಖಾತೆಯಿಂದ ಹಣ ಕಡಿತಗೊಂಡಿರುವ ಬಗ್ಗೆ ದಾಖಲೆಯನ್ನು ನೀಡಿ ದೂರನ್ನು ಮುಕ್ತಾಯಗೊಳಿಸಿತ್ತು.
ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ರಾಜೇಶ್, ಫೋನ್ ಪೇ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದು, ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ತಾವು ಅನುಭವಿಸಿರುವ ಮಾನಸಿಕ ಹಿಂಸೆ ಹಾಗೂ ನೋವಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಅವರು ತಮ್ಮ ದೂರಿನಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ.