Police officer suspended | ಜಡ್ಜ್ ಕಾರನ್ನು ಸ್ಫೋಟಿಸುವ ಬೆದರಿಕೆ: ನಿರ್ಲಕ್ಷ್ಯ ವಹಿಸಿದ ಪೊಲೀಸ್ ಅಧಿಕಾರಿ ಸಸ್ಪೆಂಡ್
ನ್ಯಾಯಾಧೀಶರ ಕಾರಿಗೆ ಬಾಂಬ್ ಇಟ್ಟು ಸ್ಪೋಟ ಮಾಡುವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರ್ಲಕ್ಷ್ಯ ತಾಳಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಈ ಘಟನೆ ನಡೆದಿರುವುದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ.
ಇದರೊಂದಿಗೆ, ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಿಗೆ ಬಾಂಬ್ ಬಾಂಬ್ ಇಡುವ ಬೆದರಿಕೆ ಹಾಕಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಪಟ್ಟಿ ಸಲ್ಲಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಹಲಸೂರು ಗೇಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ರಾಜಶೇಖರ್ ಅಮಾನತು ಆಗಿರುವ ಅಧಿಕಾರಿ. ಕೇಂದ್ರ ವಿಭಾಗದ ಡಿಸಿಪಿ ಅಮಾನತು ಆದೇಶಕ್ಕೆ ಸಹಿಹಾಕಿದ್ದಾರೆ.
ಕೆಲ ವಾರಗಳ ಹಿಂದೆ ಕನ್ನಡದಲ್ಲಿ ಬರೆದಿದ್ದ ಅನಾಮಧೇಯ ಬೆದರಿಕೆ ಪತ್ರವೊಂದು 33ನೇ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸೀನಪ್ಪ ಅವರಿಗೆ ಬಂದಿತ್ತು. ಇದರಲ್ಲಿ, "ನಿಮಗೆ ಹಣ ಬೇಕಿದ್ದರೆ ಕೇಳಿ ಇಲ್ಲದಿದ್ದರೆ ನಿಮ್ಮ ಕಾರನ್ನು ಸ್ಫೋಟ ಮಾಡುತ್ತೇವೆ" ಎಂದು ಬೆದರಿಕೆ ಹಾಕಲಾಗಿತ್ತು.
ನ್ಯಾಯಾಧೀಶರಾದ ಸೀನಪ್ಪ ಅವರು ಸ್ಯಾಂಡಲ್ ವುಡ್‌ನ ಮಾದಕದ್ರವ್ಯ ಜಾಲಕ್ಕೆ ಸಂಬಂಧಪಟ್ಟ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ವರ್ಷದ ಅಕ್ಟೋಬರ್ 19ರಂದು ಪ್ರಕರಣ ದಾಖಲಿಸಿದ ಪೊಲೀಸರು ನ್ಯಾಯಾಲಯದ ಆವರಣದಲ್ಲಿ ಡಿಟೋನೇಟರ್ ವಶಪಡಿಸಿಕೊಂಡಿದ್ದರು.