-->
Surathkal Toll gate | ಟೋಲ್ ಕೇಂದ್ರ ತೆರವು ಮಾಡಿ, ಇಲ್ಲವೇ ಟೋಲ್ ಸಂಗ್ರಹಕ್ಕೆ ತಡೆ: ಹೋರಾಟ ಸಮಿತಿ ಎಚ್ಚರಿಕೆ

Surathkal Toll gate | ಟೋಲ್ ಕೇಂದ್ರ ತೆರವು ಮಾಡಿ, ಇಲ್ಲವೇ ಟೋಲ್ ಸಂಗ್ರಹಕ್ಕೆ ತಡೆ: ಹೋರಾಟ ಸಮಿತಿ ಎಚ್ಚರಿಕೆ





ಸುರತ್ಕಲ್ ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಬೇಡ, ಯಥಾಸ್ಥಿತಿ ಕಾಪಾಡಿ


ಹೆಜಮಾಡಿ ಟೋಲ್ ಕೇಂದ್ರ ಕಾರ್ಯಾರಂಭದ ನಂತರ ತೆರವುಗೊಳಿಸುವ ಶರತ್ತಿನೊಂದಿಗೆ ಆರು ವರ್ಷಗಳ ಹಿಂದೆ, ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಅನುಮತಿ ಪಡೆದು ಕಾರ್ಯಾರಂಭ ಮಾಡಲಾದ ಸುರತ್ಕಲ್ (NITK) ಟೋಲ್ ಕೇಂದ್ರ, ಆ ಮೇಲೆ ಸುರತ್ಕಲ್ ಟೋಲ್ ಕೇಂದ್ರದಿಂದ ಕೇವಲ ಒಂಬತ್ತು ಕಿ.ಮೀ ದೂರದಲ್ಲಿ ಹೆಜಮಾಡಿ ಟೋಲ್ ಕೇಂದ್ರ ಕಾರ್ಯಾಚರಣೆ ಆರಂಭಿಸಿದರೂ ಸುರತ್ಕಲ್ ಟೋಲ್ ಕೇಂದ್ರದಲ್ಲಿ ಟೋಲ್ ಸಂಗ್ರಹವನ್ನು ತಾತ್ಕಾಲಿಕ ನೆಲೆಯಲ್ಲಿ ಈಗಲೂ ಮುಂದುವರಿಸುತ್ತಿರುವುದು ಅಕ್ರಮ ಎಂದು ಟೋಲ್ ಗೇಟ್ ಹೋರಾಟ ಸಮಿತಿ ಅಭಿಪ್ರಾಯಪಟ್ಟಿದೆ.



ಈ ನಡುವೆ ಸಾರ್ವಜನಿಕರ ತೀವ್ರ ಪ್ರತಿಭಟನೆಯ ನಂತರ 2018 ರಲ್ಲಿ ಹೆದ್ದಾರಿ ಪ್ರಾಧಿಕಾರ ಸುರತ್ಕಲ್ ಟೋಲ್ ಕೇಂದ್ರವನ್ನು ಮುಚ್ಚಿ ಹೆಜಮಾಡಿ ಟೋಲ್ ಕೇಂದ್ರದಲ್ಲಿ ವಿಲೀನಗೊಳಿಸುವ ನಿರ್ಧಾರವನ್ನು ಕೈಗೊಂಡು ರಾಜ್ಯ ಸರಕಾರದ ಅನುಮೋದನೆಯನ್ನು ಪಡೆದಿದೆ. ಆದರೂ ಈವರೆಗೆ ವಿಲೀನ ನಿರ್ಧಾರವನ್ನು ಜಾರಿಗೊಳಿಸದೆ ಬಲವಂತದ ಟೋಲ್ ಸಂಗ್ರಹ ಮುಂದುವರಿಸಲಾಗಿದೆ ಎಂದು ಸಮಿತಿ ದೂರಿದೆ.

ವಿಲೀನದ ತೀರ್ಮಾನ ಜಾರಿಗೊಳಿಸದೆ ಇದ್ದಾಗ 2018 ರಲ್ಲಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ತಿಂಗಳುಗಳ ಕಾಲ ಹಲವು ರೀತಿಯ ತೀವ್ರ ಪ್ರತಿಭಟನೆಗಳು ನಡೆದ ಹಿನ್ನಲೆಯಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆ ನಡೆದು ವಿಲೀನದ ಪ್ರಕ್ರಿಯೆಗೆ ಇರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸುವುದು, ಅಲ್ಲಿಯವರಗೆ ಸ್ಥಳೀಯ ವಾಹನಗಳಿಗೆ ಇರುವ ರಿಯಾಯಿತಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವುದು ಎಂದು ನಿರ್ಧರಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಂತರವೂ ಹೆದ್ದಾರಿ ಪ್ರಾಧಿಕಾರವು ಮೂರು ತಿಂಗಳು, ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಸುರತ್ಕಲ್ ಟೋಲ್ ಕೇಂದ್ರದ ಗುತ್ತಿಗೆಯನ್ನು ನವೀಕರಿಸುತ್ತಾ ಅಕ್ರಮವಾಗಿ ಟೋಲ್ ಸಂಗ್ರಹವನ್ನು ಮುಂದುವರಿಸುತ್ತಿದೆ ಎಂದು ಸಮಿತಿಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.


ಇದೀಗ ಫಾಸ್ಟ್ ಟ್ಯಾಗ್ ಕಡ್ಡಾಯದ ನೆಪ ಮುಂದಿಟ್ಟು ಪೆಬ್ರವರಿ 15 ರಿಂದ ಸ್ಥಳೀಯ ವಾಹನಗಳ ಉಚಿತ ಪ್ರಯಾಣ ಸಹಿತ ಎಲ್ಲಾ ರಿಯಾಯತಿಗಳನ್ನು ಕಿತ್ತುಕೊಳ್ಳಲು ಹೊರಟಿದೆ. ಈಗಾಗಲೆ ಸ್ಥಳೀಯ ಖಾಸಗಿ ಸಿಟಿ, ಸರ್ವೀಸ್ ಬಸ್‌ಗಳು, ಗೂಡ್ಸ್, ಟೂರಿಸ್ಟ್ ವಾಹನಗಳ ರಿಯಾಯತಿ ಪಾಸ್ ಗಳನ್ನು ಕಿತ್ತುಕೊಂಡು ಹಂತಹಂತವಾಗಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಈ ಅಕ್ರಮ ಸುಲಿಗೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲಾಗದು. ಸುರತ್ಕಲ್ ಟೋಲ್ ಕೇಂದ್ರ ತಾತ್ಕಾಲಿಕ ನೆಲೆಯಲ್ಲಿ ನಡೆಯುತ್ತಿರುವುದರಿಂದ ಬೇರೆ ಟೋಲ್‌ಗೇಟ್‌ಗಳಂತೆ ಸುರತ್ಕಲ್ ಟೋಲ್ ಕೇಂದ್ರವನ್ನು ಪರಿಗಣಿಸುವುದು, ಅಲ್ಲಿನ ನಿಯಮಗಳನ್ನು ಅನ್ವಯಿಸುವುದು ಸರಿಯಲ್ಲ. 



ತಾತ್ಕಾಲಿಕ ನೆಲೆಯಲ್ಲಿರುವ ಸುರತ್ಕಲ್ ಅಕ್ರಮ ಟೋಲ್ ಕೇಂದ್ರವನ್ನು ಈಗಾಗಲೆ ಆಗಿರುವ ತೀರ್ಮಾನದಂತೆ ಅಲ್ಲಿಂದ ತಕ್ಷಣ ತೆರವುಗೊಳಿಸಿ, ಹೆಜಮಾಡಿ ಟೋಲ್ ಕೇಂದ್ರದ ಜೊತೆಗೆ ವಿಲೀನಗೊಳಿಸಬೇಕು, ಅಲ್ಲಿಯವರಗೆ ಸ್ಥಳೀಯ ಸಾರ್ವಜನಿಕ ಸಾರಿಗೆಯ ಬಸ್ಸು, ಟ್ಯಾಕ್ಸಿ, ಗೂಡ್ಸ್ ವಾಹನಗಳ ರಿಯಾಯತಿ, ಖಾಸಗಿ ವಾಹನಗಳ ಉಚಿತ ಪ್ರಯಾಣ ವ್ಯವಸ್ಥೆಯನ್ನು ಈಗಿರುವಂತೆ ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೋರಾಟ ಸಮಿತಿ ಬಲವಾಗಿ ಆಗ್ರಹಿಸುತ್ತದೆ. ಇದರ ಹೊರತಾಗಿ ಬಲವಂತದಿಂದ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿ ಅಕ್ರಮವಾಗಿ ಟೋಲ್ ಸಂಗ್ರಹಿಸಿದರೆ ಜನತೆಯಿಂದ ಟೋಲ್ ಸಂಗ್ರಹಕ್ಕೆ ತಡೆ ಒಡ್ಡುವುದು ಸಹಿತ ವ್ಯಾಪಕ ಪ್ರತಿಭಟನೆಗಳು ನಡೆಯಲಿದೆ ಎಂಬುವುದನ್ನು ಜಿಲ್ಲಾಡಳಿತದ ಗಮನಕ್ಕೆ ತರುತ್ತಿದ್ದೇವೆ. ಹಾಗೆಯೆ ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ತಲಪಾಡಿ, ಬ್ರಹ್ಮರಕೂಟ್ಲು ಟೋಲ್ ಕೇಂದ್ರದಲ್ಲಿ ಸ್ಥಳೀಯರ ರಿಯಾಯಿತಿಗಳನ್ನು ಈಗಿರುವಂತೆಯೆ ಮುಂದುವರಿಸಬೇಕು ಎಂದು ಸಮಿತಿ ವಿನಂತಿಸಿದೆ.


ಹೆಜಮಾಡಿ ಟೋಲ್ ಕೇಂದ್ರದಿಂದ ಐದು ಕಿ.ಮೀ. ದೂರದವರಗೆ ಹರಡಿಕೊಂಡಿರುವ ಸ್ಥಳೀಯ ಪಡುಬಿದ್ರೆ ಗ್ರಾಮಸ್ಥರ ವಾಹನಗಳಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಲಿಸಲಾಗಿದೆ. ಈ ಶುಲ್ಕ ವಿನಾಯತಿಯನ್ನು ಫಾಸ್ಟ್ ಟ್ಯಾಗ್ ಕಡ್ಡಾಯದ ನಂತರವೂ ಮುಂದುವರಿಸಬೇಕು, ಅದೇ ಸಂದರ್ಭ ಹೆಜಮಾಡಿ ಟೋಲ್ ಕೇಂದ್ರದಿಂದ ಕೇವಲ ಅರ್ಧ ಕಿ ಮೀ ಅಂತರದಲ್ಲಿರುವ ಮೂಲ್ಕಿ ಗ್ರಾಮಸ್ಥರ ವಾಹನಗಳಿಗೆ ಉಚಿತ ಪ್ರಯಾಣ ಕಲ್ಪಿಸದಿರುವುದು ಸರಿಯಲ್ಲ. ಮೂಲ್ಕಿ ಭಾಗದಲ್ಲಿಯೂ ಟೋಲ್ ಕೇಂದ್ರದಿಂದ ಐದು ಕಿ.ಮಿ. ವ್ಯಾಪ್ತಿಯ ವರೆಗೆ ವಾಸ ಇರುವವರಿಗೆ ಸುಂಕ ರಹಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ ಜನವಿರೋಧಿ ತೀರ್ಮಾನಗಳನ್ನು ಮುಂದುವರಿಸಿದಲ್ಲಿ ಸಮಾನ ಮನಸ್ಕ ಸಂಘಟನೆಗಳನ್ನು ಜೊತೆ ಸೇರಿಸಿ ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸಮಿತಿಯ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.



ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರಾದ ಮುನೀರ್ ಕಾಟಿಪಳ್ಳ, ಹರೀಶ್ ಪುತ್ರನ್, (ಅಧ್ಯಕ್ಷರು, ಮುಲ್ಕಿ ಅಭಿವೃದ್ದಿ ನಾಗರಿಕ ಸಮಿತಿ) ಎಂ.ದೇವದಾಸ್, (ವಿಭಾಗೀಯ ಸಂಚಾಲಕರು, ಡಿಎಸ್ ಎಸ್ ಕೃಷ್ಣಪ್ಪ ಸ್ಥಾಪಿತ) ಶೇಖರ್ ಹೆಜಮಾಡಿ, (ಸಂಚಾಲಕರು, ಟೋಲ್ ಗೇಟ್ ವಿರೋಧಿ ನಾಗರಿಕ ಸಮಿತಿ, ಹೆಜಮಾಡಿ) ದಿನೇಶ್ ಕುಂಪಲ ( ಅಧ್ಯಕ್ಷರು,ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿ ಮೆನ್, ಮ್ಯಾಕ್ಸಿಕ್ಯಾಬ್ ಮಾಲಕರ ಸಂಘ) ಪುರುಷೋತ್ತಮ ಚಿತ್ರಾಪುರ, (ಮಾಜಿ ಉಪ ಮಹಾಪೌರರು) ದಯಾನಂದ ಶೆಟ್ಟಿ (ಮಾಜಿ ಕಾರ್ಪೊರೇಟರ್), ರಮೇಶ್ ಟಿ.ಎನ್ (ಸಾಮಾಜಿಕ ಕಾರ್ಯಕರ್ತರು, ಸುರತ್ಕಲ್) ಕನಕದಾಸ್ ಕೂಳೂರು, ಜೆಡಿಎಸ್ ಮುಖಂಡರು) ವಿನ್ಸೆಂಟ್ ಪಿರೇರಾ,(ಸಾಮಾಜಿಕ ಕಾರ್ಯಕರ್ತರು) ವಸಂತ ಬರ್ನಾಡ್ (ಕೆಪಿಸಿಸಿ ಸಂಯೋಜಕರು) ಅಬೂಬಕರ್ ಬಾವಾ, (ಸಹ ಸಂಚಾಲಕರು, ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ) ರಶೀದ್ ಮುಕ್ಕ, ಧನ್ ರಾಜ್ ಸಸಿಹಿತ್ಲು (ಗ್ರಾಮ ಪಂಚಾಯತ್ ಸದಸ್ಯರು), ಶಶಿ ಅಮೀನ್, ಮಧು ಆಚಾರ್ಯ, ಸದಾಶಿವ ಹೊಸದುರ್ಗ, (ಉಪಾಧ್ಯಕ್ಷರುಗಳು, ಮೂಲ್ಕಿ ನ ಅಭಿವೃದ್ದಿ ನಾಗರಿಕ ಸಮಿತಿ) ಇಕ್ಬಾಲ್ ಅಹಮದ್ ಮುಲ್ಕಿ, (ಜೆಡಿಎಸ್ ರಾಜ್ಯ ಕಾರ್ಯದರ್ಶಿ) ಸಂತೋಷ್ ಬಜಾಲ್.(ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ) ಹುಸೈನ್ ಕಾಟಿಪಳ್ಳ (ಸಾಮಾಜಿಕ ಕಾರ್ಯಕರ್ತರು) ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article