-->
Aravinda Chokkadi on Poet NSL | ಎನ್. ಎಸ್. ಲಕ್ಷ್ಮೀನಾರಾಯಣ ಭಟ್ ಅಂತ್ಯಕ್ರಿಯೆ: ಸಾಮಾಜಿಕ ಜಾಲತಾಣದ ಚರ್ಚೆಗೆ ಅರವಿಂದ ಚೊಕ್ಕಾಡಿ ಉತ್ತರ

Aravinda Chokkadi on Poet NSL | ಎನ್. ಎಸ್. ಲಕ್ಷ್ಮೀನಾರಾಯಣ ಭಟ್ ಅಂತ್ಯಕ್ರಿಯೆ: ಸಾಮಾಜಿಕ ಜಾಲತಾಣದ ಚರ್ಚೆಗೆ ಅರವಿಂದ ಚೊಕ್ಕಾಡಿ ಉತ್ತರ




ಎನ್. ಎಸ್. ಲಕ್ಷ್ಮೀನಾರಾಯಣ ಭಟ್ ಅವರ ಪಾರ್ಥೀವ ಶರೀರದ ದಹನ ಕ್ರಿಯೆಯ ವೇಳೆಯಲ್ಲಿ ಜನ ಕಮ್ಮಿ ಇತ್ತು ಎಂಬ ನೆಲೆಯಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ.


ಮೊದಲ ವ್ಯೂ ಅವರು ಬ್ರಾಹ್ಮಣ ಎಂದು ನಿರ್ಲಕ್ಷಿಸಲಾಗಿದೆ ಎಂಬ ಧೋರಣೆಯದು. ತಪ್ಪದು. ಸಮುದಾಯವಾಗಿ ಬ್ರಾಹ್ಮಣರ ಮೇಲೆ ವಾಗ್ದಾಳಿ ಇರುವುದು ನಿಜ. ಹಾಗೆಂದು ವ್ಯಕ್ತಿಗತವಾಗಿ ಬ್ರಾಹ್ಮಣನಾದುದರಿಂದ ನಿರಾಕರಿಸಲಾಗಿದೆ ಎನ್ನುವುದು ತಪ್ಪು. ಆ ರೀತಿ ಯಾರೂ ವರ್ತಿಸಿಲ್ಲ. ಬ್ರಾಹ್ಮಣರೇ ಒಂದು ಅಕ್ಷೋಹಿಣಿ ಸಾಹಿತಿಗಳು ಇದ್ದಾರೆ. ಇಷ್ಟೇ ಜನ ಹೋಗಿದ್ದರೂ ಅದು ದೊಡ್ಡ ಜನ ಜಂಗುಳಿಯಾಗುತ್ತಿತ್ತು. 


ಹಾಗೆಂದು ಬ್ರಾಹ್ಮಣ ಸಾಹಿತಿಗಳೆಲ್ಲ ಅವರನ್ನು‌ ನಿರ್ಲಕ್ಷಿಸಿದ್ದಾರೆ ಎನ್ನಲು ಬರುತ್ತದೆಯೇ? ಬ್ರಾಹ್ಮಣ ಸಾಹಿತಿಗಳಿಗೆ ಯಾವ ಕಾರಣಕ್ಕಾಗಿ ಭಾಗವಹಿಸದೆ ಇದ್ದುದಕ್ಕೆ ರಿಯಾಯಿತಿ ಇದೆಯೋ ಅದೇ ರಿಯಾಯಿತಿ ಅಬ್ರಾಹ್ಮಣ ಸಾಹಿತಿಗಳಿಗೂ ಸಿಗಲೇ ಬೇಕು. ನಾನು ಬ್ರಾಹ್ಮಣ. ನನಗೆ ಬೆಂಗಳೂರಿಗೆ ಹೋಗಲು ಸಾಧ್ಯ ಆಗಲಿಲ್ಲ. ಇದರರ್ಥ ಅವರನ್ನು ನಾನು ನಿರ್ಲಕ್ಷಿಸಿದೆ ಎಂದಾ? ಹೋಗದಿರುವುದು ನನ್ನದು ತಪ್ಪಲ್ಲ ಎಂದರೆ ಇನ್ನೊಬ್ಬ ಅಬ್ರಾಹ್ಮಣನದು ಹೇಗೆ ತಪ್ಪಾಗ್ತದೆ?



ಎರಡನೆಯದು ಸರಕಾರ ಹಾಗೆ ಮಾಡಬೇಕಿತ್ತು ಹೀಗೆ ಮಾಡಬೇಕಿತ್ತು ಎಂಬ ವ್ಯೂ. ಇದು ವ್ಯಕ್ತಿಗೆ ಇರುವ ರಾಜಕೀಯ ಬೆಂಬಲವನ್ನು ಅವಲಂಬಿಸಿರುತ್ತದೆ. ರಾಜಕೀಯಾತ್ಮಕವಾಗಿ ತಮ್ಮನ್ನು ಗುರುತಿಸಿಕೊಂಡಿದ್ದ ಅನಂತಮೂರ್ತಿಯವರಿಗೆ ಆ ಗೌರವ ಸಿಕ್ಕಿತ್ತು. ಲಕ್ಷ್ಮೀನಾರಾಯಣ ಭಟ್ಟರು ರಾಜಕೀಯಾತ್ಮಕವಾಗಿ ಗುರುತಿಸಿಕೊಂಡವರಲ್ಲ. ಆದರೆ ರಾಜಕೀಯಾತ್ಮಕವಾಗಿ ಗುರುತಿಸಿಕೊಂಡವರಿಗೆ ಪರ ಇರುವ ಹಾಗೆಯೇ ವಿರೋಧವೂ ಇರುತ್ತದೆ.



 ಅನಂತಮೂರ್ತಿಯವರು ಗತಿಸಿದಾಗ ಅಹಿತಕಾರಿ ಪ್ರತಿಕ್ರಿಯೆಯೂ ಬಂದಿತ್ತು. ಅದಕ್ಕೂ ಅವರು ರಾಜಕೀಯಾತ್ಮಕವಾಗಿ ಗುರುತಿಸಿಕೊಂಡದ್ದೆ ಕಾರಣ. ಭಟ್ಟರ ವಿಚಾರದಲ್ಲಿ ಅಂತಹ ಅಹಿತಕಾರಿ ಪ್ರತಿಕ್ರಿಯೆಯೂ ಬಂದಿಲ್ಲ.



ಮೂರನೆಯದು ಮಾಧ್ಯಮ ಕೇಂದ್ರಿತ ವ್ಯೂ. ಖಾಸಗಿ ಟಿವಿ ಚಾನೆಲ್‌ನವರು ಮಹತ್ವ ಕೊಡದಿದ್ದ ಮಾತ್ರಕ್ಕೆ ಮಾಧ್ಯಮಗಳು ನಿರ್ಲಕ್ಷಿಸಿವೆ ಎಂದಲ್ಲ. ರೇಡಿಯೋದಲ್ಲಿ ಬಂದಿದೆ. ಪತ್ರಿಕೆಗಳಲ್ಲೂ ಬಂದಿದೆ. ಅವೂ ಮಾಧ್ಯಮಗಳೇ. ಟಿವಿ ನ್ಯೂಸ್ ಚಾನಲ್‌ಗಳಿಗೆ ಸಂವೇದನಾಶೀಲತೆ ಇದೆ ಎಂದು ಈಗ ಭಾವಿಸುವುದು ತುಸು ಕಷ್ಟ.



ನಾಲ್ಕನೆಯದು ಒಟ್ಟೂ ಸಮಾಜದ ಸ್ಪಂದನೆಯ ವಿಚಾರ. ಸಮಾಜದ ಸ್ಪಂದನೆ ಕಾವ್ಯಕ್ಕೆ ಇರುವುದು. ಕವಿಗೆ ಅಲ್ಲ. ಭಟ್ಟರ ಕಾವ್ಯ ಗತಿಸಿಲ್ಲ. ಕವಿಗೇ ಆ ಸ್ಪಂದನೆಯನ್ನು‌ ನಿರೀಕ್ಷಿಸಬೇಕಾದರೆ ಕವಿಗೇ ಸಮಾಜದೊಂದಿಗೆ ಆ ರೀತಿಯ ಒಡನಾಟ ಬೇಕು. ಕವಿ ಹೋರಾಟಗಾರನೂ ಆಗಿದ್ದಾಗ ಇದು ಆಗುತ್ತದೆ. ಹೋರಾಟಗಾರ ಅಲ್ಲದೆ ಇದ್ದರೂ ಸಮಾಜದ ಅನೇಕರಿಗೆ ನಾನಾ ಕಾರಣಗಳಿಗಾಗಿ ಸಹಾಯಕ್ಕೆ, ಮಾರ್ಗದರ್ಶನಕ್ಕೆ ಹೋಗುತ್ತಾ ಇದ್ದವರಿಗೆ ಈ ರೀತಿಯ ಸ್ಪಂದಿಸುವಿಕೆ ಇರುತ್ತದೆ. ನನ್ನ ತಿಳಿವಳಿಕೆಯ ಮಟ್ಟಿಗೆ ಭಟ್ಟರು ಈ ರೂಪದಲ್ಲಿ ಸಮಾಜವನ್ನು ಒಳಗೊಂಡವರಲ್ಲ. ಆಗ ಅವರ ಕಾವ್ಯಕ್ಕೆ ಜಾಸ್ತಿ ಸ್ಪಂದನೆ ಇರುವುದು. ಅವರಿಗೇ ಅಲ್ಲ.

ಸಾಹಿತ್ಯಕವಾಗಿ ಸಾಕಷ್ಟು ಮಂದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕೆಲವೊಮ್ಮೆ ಒಡನಾಟದ ಪ್ರಶ್ನೆ ಬರುತ್ತದೆ. ನನ್ನ ತಂದೆ ಮೃತರಾದಾಗ ಒಂದು ಗಂಟೆಯ ಒಳಗೆ ಅವರು ಇವರು ಎಲ್ಲ ಬಂದರು. ಏಕೆಂದರೆ ನನಗೆ ಸಾರ್ವಜನಿಕ ಸಂಪರ್ಕ ಇತ್ತು. ಜನ ಬಂದದ್ದು ನನಗೆ ಸ್ಪಂದಿಸಿ. ತಂದೆಗೆ ಸ್ಪಂದಿಸಿ ಅಲ್ಲ. ಏಕೆಂದರೆ ಅವರಿಗೆ ಸಾರ್ವಜನಿಕ ಸಂಪರ್ಕ ಇರಲಿಲ್ಲ. ಅದೇ, ನಾನು ಸತ್ತಾಗ ಸ್ಪಂದನೆ ಸಿಗಬೇಕಾದರೆ ನನಗಿರುವಷ್ಟೆ ಸಾರ್ವಜನಿಕ ಸಂಪರ್ಕ ನನ್ನ ಮಕ್ಕಳು ಮತ್ತು ಹೆಂಡತಿಗೆ ಇರಬೇಕಾಗುತ್ತದೆ. ಇಲ್ಲದಿದ್ದರೆ ಹೋಗಿ‌ಮಾಡುವುದೇನು? ಕುಟುಂಬದವರ ಮನಸ್ಥಿತಿ ಏನೊ? ಅವರಿಗೆ ಹೇಳುವುದಾದರೂ ಏನು? ಎಂಬೆಲ್ಲ ಪ್ರಶ್ನೆಗಳು ಬರುತ್ತವೆ. ಅಂತಾದ್ದರಲ್ಲಿ ಭಟ್ಟರೂ ಕೂಡ ವ್ಯಾಪಕ ಸಾರ್ವಜನಿಕ ಒಡನಾಟದವರಲ್ಲ. ನಾನು ಶ್ರದ್ಧಾಂಜಲಿ ಮಾತ್ರ ಹಾಕಿದ್ದೆ. ಅದಕ್ಕಿಂತ ಹೆಚ್ಚು ನನಗೆ ಅವರ ಬಗ್ಗೆ ಗೊತ್ತಿಲ್ಲ. ಅವರ ಒಡನಾಟವೂ ಇರಲಿಲ್ಲ. ಬಹಳ ಹಿಂದೆ ನಾವು ಬಾಡಿಗೆ ಮನೆಯಲ್ಲಿದ್ದಾಗ ಎಚ್ ಎಸ್ ವಿ ಮತ್ತು ಸುಬ್ರಾಯ ಚೊಕ್ಕಾಡಿಯವರೊಂದಿಗೆ ಭಟ್ಟರು ನಮ್ಮ‌ ಮನೆಗೆ ಬಂದಿದ್ದರು. ಬಂದು ಮಾತಾಡಿ ಇಡ್ಲಿ ತಿಂದು ಹೋಗಿದ್ದರು. ಆಮೇಲೆ ಒಡನಾಟ ಬೆಳೆಯಲಿಲ್ಲ. ಹಾಗಿರುವಾಗ ಏನು ಹೇಳಲಿ? ಮಾಧ್ಯಮದವರು ನನ್ನ ಬಳಿ ಒಂದು ಲೇಖನ ಕೇಳಿದರು. ಲೇಖನ ಬರೆಯಬೇಕಾದರೆ ಈಗ ಅವರ ಕಾವ್ಯವವನ್ನು ಅಭ್ಯಾಸ ಮಾಡಿ ಬರೆಯಬೇಕು. ಶ್ರದ್ಧಾಂಜಲಿಗಾಗಿ ಕಾವ್ಯಾಭ್ಯಾಸ ಮಾಡಿ ಬರೆಯುವುದು ಕೃತಕ ಎನಿಸಿತು. ಬರೆಯಲಿಲ್ಲ. ಅದರರ್ಥ ಗೌರವ ಇಲ್ಲ ಎಂದಲ್ಲ.


ಐದನೆಯದು ಕುಟುಂಬದವರು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಬೇಕಿತ್ತು ಇತ್ಯಾದಿ ಇತ್ಯಾದಿ. ಕುಟುಂಬದ ವಿಚಾರಕ್ಕೆ ಬಂದಾಗ ಸ್ವಲ್ಪ ಸೆನ್ಸಿಬಲ್ ಇರಬೇಕಾಗುತ್ತದೆ. ಸಾರ್ವಜನಿಕರಿಗೆ ಗೊತ್ತಿರುವುದು ಭಟ್ಟರೆ ಹೊರತು ಭಟ್ಟರ ಕುಟುಂಬದವರಲ್ಲ. ಕುಟುಂಬದ ಅಪೇಕ್ಷೆ ಅದಲ್ಲದೆ ಇರಬಹುದು. ಒಂದು ವೇಳೆ ಕುಟುಂಬವೆ ಹಾಗೆ ಅಪೇಕ್ಷಿಸಿದ್ದು ಆಗ ಅದಕ್ಕೆ ಯಾರಾದರೂ ಸ್ಪಂದಿಸಿರದಿದ್ದರೆ ಆಗ ಕುಟುಂಬದ ಪರವಾಗಿ ನಿಲ್ಲಬೇಕಾದ್ದು ಸಾರ್ವಜನಿಕ ಜವಾಬ್ದಾರಿ. ಅದನ್ನು ತಿಳಿಯಲಾಗಿದೆಯೇ?



ಇತ್ತೀಚಿನ ಸಾರ್ವಜನಿಕ ಧೋರಣೆಗಳು ಕುಟುಂಬದ ಮತ್ತು ವ್ಯಕ್ತಿಯ ಹಕ್ಕುಗಳನ್ನು ವಿಪರೀತ ನಿರಾಕರಿಸುತ್ತವೆ. ಧಾರ್ಮಿಕವಿರಲಿ ಶಾಸನಾತ್ಮಕವಿರಲಿ ವ್ಯಕ್ತಿಯ ಪಾರ್ಥೀವ ಶರೀರದ ಉತ್ತರಾಧಿಕಾರತ್ವ ಆತನ ಕುಟುಂಬದ್ದೆ. ಅನಂತಮೂರ್ತಿಯವರು ಮೃತರಾದಾಗ ಒಂದು ವರ್ಗ ಅವರು ದೇಹವನ್ನು ದಾನ ಮಾಡಬೇಕಿತ್ತು ಎಂದು ಶುರು ಹಚ್ಚಿಕೊಂಡಿತು. ದೇಹ ದಾನ ವ್ಯಕ್ತಿಯ ಮಕ್ಕಳು ಮೆಜಾರಿಟಿಗೆ ಬಂದಾಗ ಮಕ್ಕಳು ಮತ್ತು ಪತ್ನಿ ಒಪ್ಪಿಕೊಂಡಾಗ ಸರಿ. ಅದಲ್ಲದ ಒಂದು ಆಯ್ಕೆಯನ್ನು ಮಾಡಿಕೊಳ್ಳುವುದು ವ್ಯಕ್ತಿಯೇ ಮಾಡಿದರೂ, ಕುಟುಂಬವೆ ಮಾಡಿದರೂ ಅದು ಸಾರ್ವಜನಿಕರಿಗೆ ಪ್ರಶ್ನಾರ್ಹ ಸಂಗತಿಯಲ್ಲ. 


ಅನಂತಮೂರ್ತಿ ಸಮಾಜವಾದಿ ಹೌದು. ಸಮಾಜ ವಾದ ವ್ಯಕ್ತಿಯ ವೈಯಕ್ತಿಕ ಐಡೆಂಟಿಟಿಗಳೆಲ್ಲವನ್ನೂ ರದ್ದು ಪಡಿಸುತ್ತದೆಯೇ? ಅನಂತಮೂರ್ತಿ ಬ್ರಾಹ್ಮಣ ಎಂದೂ ಅವರಿಗೆ ಟಾರ್ಚರ್ ಮಾಡಲಾಗಿತ್ತು. ಬ್ರಾಹ್ಮಣ ಎನ್ನುವುದನ್ನು ಒಪ್ಪಿಯೇ ಟಾರ್ಚರ್ ಮಾಡಿದ ಮೇಲೆ ಅವರು ವೈದಿಕ ವಿಧಾನದಲ್ಲಿ ಉತ್ತರ ಕ್ರಿಯೆ ಮಾಡಿದ್ದೇಕೆ ಎಂದರೆ? ಅವರೂ ಕೂಡ ತಾನು ಬ್ರಾಹ್ಮಣ ಅಲ್ಲ ಎಂದು ಹೇಳಿಲ್ಲ.


 ಪೇಜಾವರ ಮಠದ ಕೃಷ್ಣೈಕ್ಯ ವಿಶ್ವೇಶ್ವರ ತೀರ್ಥ ಶ್ರೀಪಾದರು ಅವರನ್ನು ಕರೆದು ಸಮ್ಮಾನ ಮಾಡಿದ್ದೂ ಆಯಿತು. ಸಮ್ಮಾನ ತೆಗೆದುಕೊಂಡು ಹೋದ ಮೇಲೆ ಜಗಳವಾಡಿದ್ದೂ ಆಯಿತು. ಅದು ಗುರು-ಶಿಷ್ಯರ ಜಗಳ. ಆದರೆ ಅವರೇ ತಾನು ಬ್ರಾಹ್ಮಣ ಎನ್ನುವುದನ್ನು ನಿರಾಕರಿಸದೆ ಇದ್ದ ಮೇಲೆ ವೈದಿಕ ವಿಧಾನದಲ್ಲಿ ಸಂಸ್ಕಾರ‌ ಮಾಡಿದ್ದೇಕೆ ಎಂದರೆ ಏನನ್ನಬೇಕು?


 ಅನಂತಮೂರ್ತಿಯವರ ವಿರೋಧಿ ಬಣದ್ದೂ ಇದೇ. ಅವರು ಸಮಾಜವಾದವನ್ನು ಹೇಳಿದರು. ಆದರೆ ವೈದಿಕ ವಿಧಾನದಲ್ಲಿ ಸಂಸ್ಕಾರ ಮಾಡಿದರು. ದೇಹ ದಾನ ಮಾಡಲಿಲ್ಲ ಎಂದು. ಅವರಿಗೆ ಮೃತರಾದ ನಂತರವೂ ಅನಂತಮೂರ್ತಿಯವರ ಸಮುದಾಯದ ಮೇಲಿನ ಅಸಹನೆ ಪ್ರಚಾರದ ಉದ್ದೇಶವಾದರೆ, ಇವರಿಗೆ ಅನಂತಮೂರ್ತಿಯವರನ್ನು‌ ನಿರಾಕರಿಸುವ ಮೂಲಕ ತಮ್ಮ‌ ಸಿದ್ಧಾಂತದ ಪ್ರಚಾರದ ಉದ್ದೇಶ. ಅವರು ತಾನು ಬ್ರಾಹ್ಮಣ ಅಲ್ಲ ಎಂದಿಲ್ಲ. ಬ್ರಾಹ್ಮಣರು ವೈದಿಕ ವಿಧಾನದಲ್ಲೆ ಸಂಸ್ಕಾರ ಮಾಡುವುದು. ಆದರೆ ಬ್ರಾಹ್ಮಣ ಎನ್ನುವುದು ನಿರ್ದಿಷ್ಠ ರಾಜಕೀಯ ಧೋರಣೆಯನ್ನು ಸೂಚಿಸುವುದಿಲ್ಲ.‌ ನಿರ್ದಿಷ್ಠ ಜನ ಸಮುದಾಯವನ್ನು ಸೂಚಿಸುತ್ತದೆ. ಅವರ ನಿಯಮಾನುಸಾರ ಮಾಡಲಾಗಿದೆ. ಅದಕ್ಕೆ ಇವರದೇನು ತಕರಾರು? ನಿರ್ಧಾರ ತೆಗೆದುಕೊಳ್ಳಬೇಕಾದ್ದು ಅವರ ಕುಟುಂಬ. ಆ ನಿರ್ಧಾರವನ್ನು ಗೌರವಿಸುವ ಪ್ರಜ್ಞೆ ಬೇಕು. ಇಲ್ಲೂ ಅಷ್ಟೆ;ಭಟ್ಟರ ಕುಟುಂಬದ ನಿರ್ಧಾರವನ್ನು ಗೌರವಿಸಬೇಕು. ಕುಟುಂಬವೇ ಹಾಗೆ ಮಾಡಬೇಕಿತ್ತು ಹೀಗೆ ಮಾಡಬೇಕಿತ್ತು ಎಂದು ಆಕ್ಷೇಪಿಸುವಷ್ಟು ಪಾರ್ಥೀವ ಶರೀರದ ಮೇಲೆ ಸಾರ್ವಜನಿಕರೊ, ಸಾಹಿತಿಗಳೊ ಒಡೆತನವನ್ನು ಹೇರಲು ಹೋಗಬಾರದು.

Ads on article

Advertise in articles 1

advertising articles 2

Advertise under the article