Big Twist to Love Jihad case | ಲವ್ ಜಿಹಾದ್ ಪ್ರಕರಣಕ್ಕೆ ದೊಡ್ಡ ತಿರುವು: 62ರ ರಸಿಕ, ಐವರು ಪತ್ನಿಯರ ಜೊತೆ ನಡೆಸಿದ್ದ ಕಳ್ಳಾಟ ಬಯಲು
ಮಂಗಳೂರು: ತನ್ನ ಪತಿಯನ್ನು ಅಪಹರಿಸಿದ್ದಾರೆ ಮತ್ತು ಮುಸ್ಲಿಂ ಯುವತಿಯೊಬ್ಬರ ಜೊತೆ ಅಕ್ರಮವಾಗಿ ಮದುವೆ ಮಾಡಿಸಿದ್ದಾರೆ ಎಂಬ ಮಹಿಳೆಯೊಬ್ಬರ ದೂರು ಕರಾವಳಿಯಲ್ಲಿ ಭಾರೀ ತಲ್ಲಣಕ್ಕೆ ಕಾರಣವಾಗಿದೆ. ಈ ಪ್ರಕರಣ ಇದೀಗ ದೊಡ್ಡ ತಿರುವುದ ಪಡೆದುಕೊಂಡಿದ್ದು, ಈ ಪತಿ ಮಹಾಶಯ ಒಂದಲ್ಲ ಎರಡಲ್ಲ... ಬರೋಬ್ಬರಿ ಐವರು ಯುವತಿಯರನ್ನು ವರಿಸಿದ್ದಾನೆ ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಈ ಕಿರಾತಕ ಬಹುಪತ್ನಿ ವಲ್ಲಭನ ಹೆಸರು ಕೆ. ಎಸ್. ಗಂಗಾಧರ್ ಆಲಿಯಾಸ್ ಅಬ್ದುಲ್ ಅನೀಸ್... ಈತ ಮಂಗಳೂರಿನ ಬೋಳಾರದ ನಿವಾಸಿ... ಮಂಗಳೂರು ನಗರದಲ್ಲಿ ತರಕಾರಿ ರಖಂ ವ್ಯವಹಾರದ ಜೊತೆಗೆ ರಿಯಲ್ ಎಸ್ಟೇಟ್ ವಹಿವಾಟನ್ನೂ ನಡೆಸಿಕೊಂಡಿದ್ದ. 62 ವಯಸ್ಸಿನ ಈ ಗಂಗಾಧರ್ ವಿರುದ್ಧ ಆತನ ಪತ್ನಿ ಯಶೋಧಾ ಅವರು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹಿಂದೂ ಪರ ಸಂಘಟನೆಗಳು ಈತನ ವಿಷಯಕ್ಕೆ ಸಂಬಂಧಿಸಿದಂತೆ ಲವ್ ಜಿಹಾದ್ ದಾಳವನ್ನು ಪ್ರಯೋಗಿಸುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದಾರೆ. ಆಗ ಈತನ ಐವರು ಪತ್ನಿಯರ ನಡುವಿನ ಕಳ್ಳಾಟದ ಪ್ರವರ ಬಹಿರಂಗಗೊಂಡಿದೆ.
ಆಕೆಯ ದೂರಿನಲ್ಲಿ ಪತಿ ಗಂಗಾಧರ್ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದು ಕಳೆದ ಜನವರಿ ಬಳಿಕ ತನ್ನ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದರು. ಅಲ್ಲದೆ, ಬಲವಂತವಾಗಿ ಪತಿಯನ್ನು ಯಾರೋ ಕರೆದೊಯ್ದು ಈ ಮದುವೆ ಮಾಡಿಸಿದ್ದಾರೆಂದು ದೂರಿದ್ದರು. ಅತ್ತ ದೂರು ಕೇಳಿಬರುತ್ತಿದ್ದಂತೆ, ಹಿಂದು ಸಂಘಟನೆಗಳು ಇದರ ಹಿಂದೆ ಲವ್ ಜಿಹಾದ್ ಜಾಲದ ಮತ್ತೊಂದು ಮುಖ ಇದೆ, ಮುಸ್ಲಿಂ ಯುವತಿಯ ಮೂಲಕ ದಾಳ ಬೀಸಿ, ಹಿಂದುವನ್ನು ಮದುವೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ವಿಷಯ ಜಾಲತಾಣದಲ್ಲಿ ಚರ್ಚೆ, ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಮಂಗಳೂರು ಪೊಲೀಸರು, ಗಂಗಾಧರ್ ನನ್ನು ಕರೆಸಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದು ತನ್ನ ನಿಜ ಕತೆಯನ್ನು ಹೇಳಿಕೊಂಡಿದ್ದಾನೆ. ಗಂಗಾಧರ್ ಮದುವೆಯಾಗಿರುವ ಮುಸ್ಲಿಂ ಯುವತಿಯ ಹೆಸರು ಸುಮಯ್ಯ. ಪುತ್ತೂರು ಮೂಲದ ಬಡ ಕುಟುಂಬದ ಯುವತಿ. ಆಕೆಯ ಗಂಡ ಮೃತಪಟ್ಟಿದ್ದು ಒಂದು ಮಗುವನ್ನು ಹೊಂದಿದ್ದಳು. ಈ ವಿಚಾರ ಅರಿತಿದ್ದ ಗಂಗಾಧರ್ ಗೆಳೆಯರಾದ ಶಬ್ಬೀರ್ ಮತ್ತು ಇಸ್ಮಾಯಿಲ್ ಸೇರಿ, ಹುಡುಗಿ ಮನೆಯವರನ್ನು ಒಪ್ಪಿಸಿದ್ದಾರೆ. ಇವರು ಮುಸ್ಲಿಂ ವ್ಯಕ್ತಿಯಾಗಿದ್ದು ಇನ್ನೂ ಮದುವೆಯಾಗಿಲ್ಲ. ಸ್ವಲ್ಪ ವಯಸ್ಸಾದ್ರೂ ಕೈಯಲ್ಲಿ ಹಣವಿದೆ ಎಂದು ನಂಬಿಕೆ ಹುಟ್ಟಿಸಿದ್ದಾರೆ.
ಮುಸ್ಲಿ ಯುವತಿಯದ್ದು ಬಡ ಕುಟುಂಬವಾಗಿದ್ದು ಹುಡುಗನಿಗೆ ವಯಸ್ಸಾದ್ರೂ ಆತನಲ್ಲಿರುವ ಹಣ ನೋಡಿ, ಮದುವೆ ಮಾಡಿಕೊಟ್ಟಿದ್ದಾರೆ. ಅವರೆದುರು ಅಬ್ದುಲ್ ಅನೀಸ್ ಆಗಿದ್ದ ಗಂಗಾಧರ್, ಮಂಗಳೂರಿನಲ್ಲಿ ಫ್ಲಾಟ್ ತೆಗೆದು ಅಲ್ಲಿ ಯುವತಿಯನ್ನು ಇರಿಸಿ, ಬಂದು ಹೋಗುತ್ತಿದ್ದ. ಈ ನಡುವೆ, ಯುವತಿಗೆ ಗಂಡನ ಚರ್ಯೆ ನೋಡಿ, ಈತ ಮುಸ್ಲಿಂ ಅಲ್ಲ ಅನ್ನುವ ಸಂಶಯ ಉಂಟಾಗಿದೆ. ಇದೇ ವೇಳೆ, ಆಕೆ ಗರ್ಭಿಣಿಯಾಗಿದ್ದು ಅದನ್ನು ಮಾತ್ರೆ ಕೊಟ್ಟು ತೆಗೆಸಿದ್ದು ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ದು ಅಡ್ಮಿಟ್ ಕೂಡ ಮಾಡಿಸಿದ್ದ. ಆನಂತರ ಆಕೆಯ ಮನೆಗೆ ಹೋಗುವುದನ್ನು ಕಡಿಮೆ ಮಾಡಿದ್ದು ಇಬ್ಬರ ನಡುವೆ ಮುನಿಸು ಬೆಳೆದಿತ್ತು.
ಮೊದಲ ಪತ್ನಿ ಯಶೋಧ ಪಾಂಡೇಶ್ವರ ಠಾಣೆಗೆ ದೂರು ನೀಡಿರುವ ವಿಚಾರ ತಿಳಿಯುತ್ತಿದ್ದಂತೆ, ಸುಮಯ್ಯ ಕೂಡ ಇದೀಗ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತನ್ನನ್ನು ಸುಳ್ಳು ಹೇಳಿ ಮದುವೆ ಮಾಡಿಕೊಂಡಿದ್ದಾನೆ, ತನಗೆ ಅಬಾರ್ಶನ್ ಮಾಡಿಸಿ ವಂಚಿಸಿದ್ದಾಗಿ ದೂರು ನೀಡಿದ್ದಾಳೆ.
ಪೊಲೀಸರ ತನಿಖೆಯಲ್ಲಿ ಇನ್ನೊಬ್ಬ ಯುವತಿ ಸವಿತಾ ಎಂಬಾಕೆಯನ್ನೂ ಗಂಗಾಧರ್ ಮದುವೆಯಾಗಿರುವ ವಿಚಾರ ತಿಳಿದುಬಂದಿದೆ. ಆಕೆಯನ್ನು 25 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಪ್ರತ್ಯೇಕವಾಗಿ ಇರಿಸಿಕೊಂಡು ನೋಡಿಕೊಂಡಿದ್ದಾನೆ. ಆಕೆಗೆ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗುವನ್ನೂ ಕರುಣಿಸಿದ್ದಾನೆ. ಮೊದಲ ಪತ್ನಿಯ ಮಕ್ಕಳು ದೊಡ್ಡವರಾಗಿದ್ದು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಸದ್ಯಕ್ಕೆ ಮೂರು ಮದುವೆ, ಐವರು ಮಕ್ಕಳು ಮಾಡಿರುವ ವಿಚಾರ ತಿಳಿದುಬಂದಿದೆ. ಇನ್ನೂ ಎರಡು ಮದುವೆಯಾಗಿದ್ದಾನೆಂದು ಹೇಳಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ಗಂಗಾಧರ್ ಯಾನೆ ಅಬ್ದುಲ್ ಅನೀಸ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಇಬ್ಬರು ಗೆಳೆಯರನ್ನು ವಿಚಾರಣೆ ನಡೆಸಿದ್ದೇವೆ. ಅವರಿಬ್ಬರು ಗಂಗಾಧರ್ ಜೊತೆಗೆ ತರಕಾರಿ ವಹಿವಾಟಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಈತನ ಮದುವೆ ಪುರಾಣ ಎಲ್ಲವೂ ಗೊತ್ತಿರುವ ಸಾಧ್ಯೆತೆಯಿದೆ, ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಮುಸ್ಲಿಮರಲ್ಲಿ ಕೆಲವರು ಮೂರ್ನಾಲ್ಕು ಮದುವೆಯಾಗುವುದು, ಎಲ್ಲ ಹೆಂಡತಿಯರನ್ನು ತಕ್ಕಮಟ್ಟಿಗೆ ಇಟ್ಟುಕೊಂಡು ಸಂಭಾಳಿಸುವುದನ್ನು ಕೇಳಿದ್ದೇವೆ. ಹಿಂದೂವಾಗಿ ಈ ರೀತಿ ನಾಲ್ಕೈದು ಹುಡುಗಿಯರನ್ನು ಕಟ್ಟಿಕೊಂಡು ಸಂಭಾಳಿಸುತ್ತಿರುವ ವಿಚಾರ ಕರಾವಳಿಯ ಮಟ್ಟಿಗೆ ಚೊಚ್ಚಲ ಪ್ರಕರಣವೇ ಇರಬೇಕು. ಐವರು ಹೆಂಡಿರನ್ನು ಕಟ್ಟಿಕೊಂಡು ಸಂಭಾಳಿಸಲು ಆತ ಅಸಾಮಾನ್ಯ ರಸಿಕನೇ ಆಗಿರಬೇಕು....