Forest officials illegal raid | ಅರಣ್ಯ ಸಿಬ್ಬಂದಿಯಿಂದಲೇ ಮರಗಳ್ಳತನ?: ದೂರುದಾರರ ಮನೆಗೆ ಕುಡಿದ ಮತ್ತಿನಲ್ಲಿ ತೆರಳಿ ದಾಂಧಲೆ- Video
ಕಡಬ: ಅರಣ್ಯ ಇಲಾಖೆ ವಿರುದ್ಧ ದೂರು ನೀಡಿದ ಏಕೈಕ ಕಾರಣಕ್ಕೆ ಅಧಿಕಾರಿಗಳು ಕುಡಿತದ ಮತ್ತಿನಲ್ಲಿ ಪೊಲೀಸ್ ಸಿಬ್ಬಂದಿ ಜೊತೆ ದೂರುದಾರರ ಮನೆಗೆ ನುಗ್ಗಿ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯ ಸೊತ್ತುಗಳನ್ನು ಹೊತ್ತೊಯ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.
ಅರಣ್ಯದ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡಲಾಗಿದ್ದು ಇದರಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಕಳೆದ ತಿಂಗಳು ಅರಣ್ಯ ಇಲಾಖೆಯ ವಿರುದ್ಧ ಪ್ರಸಾದ್ ಎಂಬವರು ದೂರು ನೀಡಿದ್ದರು.
ಇದರಿಂದ ಅರಣ್ಯ ಅಧಿಕಾರಿಗಳು ಈ ರೀತಿ ದ್ವೇಷ ಸಾಧನೆ ಮಾಡಿದ್ದಾರೆ ಎಂದು ದೂರುದಾರರ ಕುಟುಂಬ ಆರೋಪಿಸಿದೆ.
ಗಂಡಸರು ಇಲ್ಲದಿದ್ದಾಗ ದೂರುದಾರರ ಮನೆಗೆ ಮಧ್ಯರಾತ್ರಿ ಅರಣ್ಯ ಅಧಿಕಾರಿಗಳ ತಂಡ ಅಕ್ರಮವಾಗಿ ದಾಳಿ ನಡೆಸಿದೆ ಎಂದು ದೂರುದಾರ ಪ್ರಸಾದ್ ಅವರ ಪತ್ನಿ ದೀಪಾ ಆರೋಪಿಸಿದ್ದಾರೆ.
ಸುಮಾರು 10 ರಿಂದ 15 ಮಂದಿ ಅಧಿಕಾರಿಗಳ ತಂಡ ಈ ಕೃತ್ಯ ನಡೆಸಿದ್ದು, ಮನೆಯೊಳಗಿದ್ದ ಪ್ರಸಾದ್ ಅವರ ಪತ್ನಿ ಮತ್ತು ಪುಟ್ಟ ಮಗುವಿಗೆ ಅಧಿಕಾರಿಗಳು ಹಲ್ಲೆ ನಡೆಸಿದ್ದಾಗಿ ಆರೋಪ ಕೇಳಿಬಂದಿದಿದೆ. ಪ್ರಸಾದ್ ಅವರ ವೃದ್ಧ ತಂದೆ ತಾಯಿಯ ಮೇಲೂ ಕೈ ಮಾಡಲಾಗಿದೆ ಎಂದು ದೂರಲಾಗಿದೆ.
ಮನೆಯೊಳಗಿಂದ ಹಣ ಸೇರಿದಂತೆ, ಪ್ರಸಾದ್ ಅವರು ಕೆಲಸ ಮಾಡುವ ಉಪಕರಣಗಳು, ಚಾವಣಿಯಲ್ಲಿದ್ದ ಹಳೆಯ ಹಲಗೆ ಅಧಿಕಾರಿಗಳು ಹೊತ್ತೊಯ್ದ ಎಂಬುದಾಗಿ ಅವರು ಆರೋಪಿಸಿದ್ದಾರೆ.
ಮಾಧ್ಯಮಗಳಿಗೆ ತಿಳಿಸಿ ನಮ್ಮ ಮಾನ ತೆಗೆದಿದ್ದೀರಾ ಎಂದು ಅರಣ್ಯಾಧಿಕಾರಿ ಅವಾಚ್ಯವಾಗಿ ನಿಂದಿಸಿ ಮಾತನಾಡುತ್ತಿದ್ದರು ಎಂದು ಅವರು ಆರೋಪಿಸಿದ್ಧಾರೆ.
ಅರಣ್ಯ ಸಂಚಾರ ದಳದ ಅಧಿಕಾರಿ ಸಂಧ್ಯಾ ನೇತೃತ್ವದಲ್ಲಿ ಅಧಿಕಾರಿಗಳು ಆಗಮಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಖಾಕಿ ದಾಖಲೆಗಳಿಗೆ ಸಹಿ ಮಾಡುವಂತೆ ಬೆದರಿಕೆ ಹಾಕಲಾಗಿದೆ. ಸಹಿ ಮಾಡಿಲ್ಲವಾದರೆ ಎಲ್ಲರ ಮೇಲೂ ಪ್ರಕರಣ ದಾಖಲಿಸುತ್ತೇವೆ ಎಂದು ಸಂಕಷ್ಟದಲ್ಲಿ ನೆರೆಕರೆಯ ಮನೆಯವರಿಗೆ ಬೆದರಿಕೆ ಹಾಕಿದರು ಎಂದು ಹೇಳಲಾಗಿದೆ.