Student suicide case- 3 arrested | ಭವ್ಯ ಭವಿಷ್ಯದ ಕನಸು ಕಂಡಿದ್ದ ವಿದ್ಯಾರ್ಥಿನಿಯ ನಿಗೂಢ ಸಾವು: ಕೊಲೆ ಶಂಕೆ ಮೇಲೆ ಮೂವರು ಯುವಕರು ಅರೆಸ್ಟ್
ಮಂಗಳೂರು: ಮಾಡೆಲ್ ಆಗುವ ಕನಸು ಕಂಡಿದ್ದ ಉದಯೋನ್ಮುಖ ರೂಪದರ್ಶಿ ಹಾಗೂ ವಿದ್ಯಾರ್ಥಿನಿ ಪ್ರೇಕ್ಷಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಯತಿರಾಜ್, ಸೌರವ್ ಹಾಗೂ ಭವಿತ್ ಎಂದು ಗುರುತಿಸಲಾಗಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಂಡಿದ್ದ ಪ್ರೇಕ್ಷಾ(20) ಫೋಟೋ ಶೂಟ್‌ಗಾಗಿ ರಾಜಧಾನಿ ಬೆಂಗಳೂರಿಗೆ ತೆರಳುವ ಸಿದ್ಧತೆ ಮಾಡಿಕೊಂಡಿದ್ದಳು. ಈ ಹಂತದಲ್ಲಿ ಇದ್ದಕ್ಕಿದ್ದಂತೆ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಗುರುವಾರ ಪೋಟೋ ಶೂಟ್‌ಗೆ ಹಾಜರಾಗಬೇಕಿದ್ದ ಪ್ರೇಕ್ಷಾ ಮುನ್ನಾ ದಿನವೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮತ್ತು ಆಘಾತ ಮೂಡಿಸಿತ್ತು. ಜೊತೆಗೆ ಇದೊಂದು ಕೊಲೆಯಾಗಿರಬಹುದು ಎಂಬ ಅನುಮಾನವನ್ನು ಮೂಡಿಸಿತ್ತು.
ಪ್ರೇಕ್ಷಾ ಮಂಗಳೂರಿನ ಪ್ರತಿಷ್ಠಿತ ನಿಟ್ಟೆ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಳು. ಶೈಕ್ಷಣಿಕ ಅವಧಿಯಲ್ಲೇ ಆಕೆಗೆ ಯತಿರಾಜ್ ಎಂಬ ಯುವಕನ ಪರಿಚಯವಾಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಈ ಮಧ್ಯೆ, ಯತಿರಾಜ್ ಡ್ರಗ್ ವ್ಯಸನಿಯಾಗಿದ್ದ ಎಂಬ ವಿಚಾರ ಪ್ರೇಕ್ಷಾಳಿಗೆ ಗೊತ್ತಾಯಿತು. ಹಾಗೂ ಪ್ರೇಕ್ಷಾ ಮಾಡೆಲಿಂಗ್ ಮಾಡುತ್ತಿರುವ ಬಗ್ಗೆ ಯತಿರಾಜ್ ತೀವ್ರ ವಿರೋಧ ಮತ್ತು ಆಕ್ಷೇಪ ಇತ್ತು ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ಯತಿರಾಜ್ ಪ್ರೇಕ್ಷಾಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಅಂತೆಯೇ, ಬೆಂಗಳೂರಿನ ತೆರಳುವ ಮುನ್ನಾ ದಿನ, ಯತಿರಾಜ್ ತನ್ನ ಸ್ನೇಹಿತರಾದ ಸೌರವ್ ಮತ್ತು ಭವಿತ್ ಎಂಬವರ ಜೊತೆ ಪ್ರೇಕ್ಷಾಳ ಮನೆಗೆ ಬಂದು ಉಪದ್ರವ ನೀಡಿದ್ದ.
ಮಂಗಳೂರು ಹೊರವಲಯದ ಕುಂಪಲ ಆಶ್ರಯ ಕಾಲೊನಿಯಲ್ಲಿ ಇರುವ ಪ್ರೇಕ್ಷಾಳ ಮನೆಯಲ್ಲಿ ಯತಿರಾಜ್ ಬಂದು ಸಾಕಷ್ಟು ಗಲಾಟೆ ಮಾಡಿದ್ದ ಎನ್ನಲಾಗಿದೆ. ಜಗಳದ ಬಳಿಕ ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.
ಇದೊಂದು ಕೊಲೆ ಎಂಬ ಅನುಮಾನದ ಮೇಲೆ ಪೊಲೀಸರು ತನಿಖೆ ನಡೆಸಿದ್ದು, ಈ ಸಂಬಂಧ, ಮೂವರು ಯುವಕರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.