Rape case convicted by Mangaluru Court | ಮದುವೆಯಾಗುವ ನಂಬಿಸಿ ಅತ್ಯಾಚಾರ: ಆರೋಪಿಗೆ 10 ವರ್ಷ ಕಠಿಣ ಸಜೆ ನೀಡಿದ ಮಂಗಳೂರು ನ್ಯಾಯಾಲಯ
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಮಂಗಳೂರು ಪೋಕ್ಸೊ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಗ್ರಾಮವೊಂದರ 17 ವರ್ಷದ ಅಪ್ರಾಪ್ತೆ ಮನೆಗೆ ಅದೇ ಗ್ರಾಮದ 38 ವರ್ಷ ವಯಸ್ಸಿನ ದಿನೇಶ್ ಶೆಟ್ಟಿ ಆಗಾಗ ಬರುತ್ತಿದ್ದ. ಗೆಳೆತನ ಬೆಳೆಸಿ ಅಪ್ರಾಪ್ತೆಯನ್ನು ಪುಸಲಾಯಿಸಿ ಮದುವೆಯಾಗುವುದಾಗಿ ನಂಬಿಸಿ ಎರಡು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಇದರ ಪರಿಣಾಮವಾಗಿ ಆಕೆ ಗರ್ಭವತಿಯಾಗಿದ್ದಳು.
ಈ ವಿಷಯ ಎರಡು ತಿಂಗಳ ಬಳಿಕ ಆಕೆಯ ಪೋಷಕರಿಗೆ ಗೊತ್ತಾಯಿತು. ತಕ್ಷಣ ಅಪ್ರಾಪ್ತೆಯ ಪೋಷಕರು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗಿನ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಎಲ್. ಸಿದ್ದರಾಜು ಆರೋಪಿ ದಿನೇಶ್ ಶೆಟ್ಟಿ ಅವರನ್ನು ಬಂಧಿಸಿ ತನಿಖೆ ನಡೆಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪೊಲೀಸರ ದೋಷಾರೋಪ ಪಟ್ಟಿ ಆಧಾರದಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಮಂಗಳೂರಿನ
ವಿಶೇಷ ಪೋಕ್ಸೋ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.
ಸುದೀರ್ಘ ವಿಚಾರಣೆಯಲ್ಲಿ 15 ಜನರ ಸಾಕ್ಷಿ ಮತ್ತು 12 ದಾಖಲೆಗಳನ್ನು ವಿಚಾರಣೆಗೊಳಪಡಿಸಲಾಯಿತು. ಐಪಿಸಿ ಸೆಕ್ಷನ್ 6ರ ಪ್ರಕಾರ ಹತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಐವರು ಸಾವಿರ ರೂ. ದಂಡ, ದಂಡ ತಪ್ಪಿದ್ದಲ್ಲಿ ಮತ್ತೆರಡು ತಿಂಗಳ ಕಾಲ ಸಾದಾ ಜೈಲುವಾಸದ ಶಿಕ್ಷೆಯನ್ನು ಆರೋಪಿಗೆ ನೀಡಲಾಗಿದೆ.
ನ್ಯಾಯಾಧೀಶರಾದ ಸಾವಿತ್ರಿ ವಿ ಭಟ್ ಈ ಮಹತ್ವದ ತೀರ್ಪು ನೀಡಿದ್ದರೆ ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ವಾದ ಮಂಡಿಸಿದ್ದರು.