Case taken back by Dinesh Kallahalli | ಸಿಡಿ ಪ್ರಕರಣ: ಖುದ್ದು ಠಾಣೆಗೆ ತೆರಳಿ ದೂರು ಹಿಂದೆ ಪಡೆದ ದಿನೇಶ್ ಕಲ್ಲಹಳ್ಳಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಕಬ್ಬನ್ ಪಾರ್ಕ್ ಠಾಣೆಗೆ ಖುದ್ದಾಗಿ ತೆರಳಿದ ಅವರು ತಾವು ಈ ಹಿಂದೆ ನೀಡಿದ್ದ ದೂರನ್ನು ಲಿಖಿತವಾಗಿ ಹಿಂದಕ್ಕೆ ಪಡೆದುಕೊಂಡಿದ್ಧಾರೆ. ಭಾನುವಾರ ತಮ್ಮ ವಕೀಲರ ಮೂಲಕ ದೂರನ್ನು ಹಿಂಪಡೆಯಲು ಅವರು ಮುಂದಾಗಿದ್ದರು.
ಆದರೆ, ವೈಯಕ್ತಿಕವಾಗಿ ಠಾಣೆಗೆ ಬಂದು ದೂರನ್ನು ಹಿಂದಕ್ಕೆ ಪಡೆಯುವಂತೆ ಪೊಲೀಸರು ಸೂಚಿಸಿದ ಹಿನ್ನೆಲೆಯಲ್ಲಿ ದೂರು ಹಿಂಪಡೆಯದೆ ವಾಪಸ್ ಆಗಿದ್ದರು.
ಕಳೆದ ಮಾರ್ಚ್ 2ರಂದು ರಮೇಶ್ ಜಾರಕಿಹೊಳಿ ವಿರುದ್ಧ ಅವರು ದೂರು ದಾಖಲಿಸಿದ್ದರು. ದೂರಿನಲ್ಲಿ ಸಮರ್ಪಕ ಮಾಹಿತಿ ನೀಡದಿರುವುದರಿಂದ ಮತ್ತು ಹೆಚ್ಚಿನ ಮಾಹಿತಿ ಅಗತ್ಯವಿದ್ದ ಕಾರಣ ಪೊಲೀಸರು ದೂರದಾರರನ್ನು ಮತ್ತೆ ಠಾಣೆಗೆ ಬರುವಂತೆ ಕೋರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಪೊಲೀಸರ ಮುಂದೆ ಹಾಜರಾಗಿ ಮರು ಹೇಳಿಕೆ ದಾಖಲಿಸಿಕೊಂಡಿದ್ದರು.
ಇದೇ ವೇಳೆ, ತಾವು ಬಿಡುಗಡೆ ಮಾಡಿದ್ದ ಅಶ್ಲೀಲ ವೀಡಿಯೋ ರಾಜಕೀಯವಾಗಿ ಸಂಚಲನ ಮೂಡಿಸಿದ್ದ ಕಾರಣದಿಂದ ರಮೇಶ್ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಇನ್ನೂ ಮೂವರು ಸಚಿವರ ವೀಡಿಯೋ ಇದೆ ಎಂದು ಹೇಳಿದ್ದ ಕಲ್ಲಹಳ್ಳಿ ಅವರು ರಾಜಕೀಯ ವಲಯದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದ್ದರು.
ಇನ್ನೊಂದೆಡೆ, ದೂರುದಾರರು ಐದು ಕೋಟಿ ರೂ. ಡೀಲ್ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದರು. ಇಂತಹ ಆರೋಪದಿಂದ ಬೇಸರವಾಗಿದೆ, ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆ ಆಗಿದೆ ಎಂದು ಅಲವತ್ತುಕೊಂಡ ಕಲ್ಲಹಳ್ಳಿ ತಮ್ಮ ನೋವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದರು.
ಇದೀಗ ಅವರು ಯೂಟರ್ನ್ ಹೊಡೆದಿರುವುದು ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.