Yashwanth Sinha joins TMC | ಪ.ಬಂಗಾಳ ಚುನಾವಣೆಗೆ ಹೊಸ ಖದರ್: ಮೋದಿ ಟೀಕಾಕಾರ ಯಶ್ವಂತ್ ಸಿನ್ಹ ತೃಣಮೂಲ ಸೇರ್ಪಡೆ
2018ರಲ್ಲಿ ಬಿಜೆಪಿ ತೊರೆಯುವ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಬಲ ಟೀಕಾಕಾರರಲ್ಲಿ ಒಬ್ಬರೆಂದೇ ಗುರುತಿಸಿಕೊಂಡಿದ್ದ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹ ತೃಣಮೂಲ ಕಾಂಗ್ರೆಸ್‌ಗೆ ಬಲ ತುಂಬಿದ್ದಾರೆ.
83 ವರ್ಷದ ಹಿರಿಯ ನಾಯಕ ವಾಜಪೇಯಿ ಸರ್ಕಾರದಲ್ಲಿ ಹಣಕಾಸು ಸಚಿವಾಲಯದಂತಹ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು.
ಡೆರಿಕ್ ಓ ಬ್ರಿಯಾನ್, ಸುದೀಪ್ ಬಂದೋಪಾಧ್ಯಾಯ ಹಾಗೂ ಸುಬ್ರತೊ ಮುಖರ್ಜಿ ಸಮ್ಮುಖದಲ್ಲಿ ಅವರು ಪಕ್ಷದ ಅಧಿಕೃತ ಸದಸ್ಯತ್ವವನ್ನು ಪಡೆದುಕೊಂಡರು.
ದೇಶ ಈಗ ಅಭೂತಪೂರ್ವ ಸಂದಿಗ್ಧ ಪರಿಸ್ಥಿತಿಯಲ್ಲಿ ಮುನ್ನಡೆಯುತ್ತಿದೆ. ಪ್ರಜಾಪ್ರಭುತ್ವಕ್ಕೆ ಅಪಾಯ ಉಂಟಾಗಿದೆ. ಪ್ರಜಾಸತ್ತೆಗೆ ಬಲ ತುಂಬವ ಕಾರ್ಯ ಆಗಬೇಕಾಗಿದೆ. ಎಲ್ಲ ಸಂವಿಧಾನಾತ್ಮಕ ಸಾಂಸ್ಥಿಕ ಅಂಗಗಳು ಬಲಹೀನವಾಗಿದೆ. ನ್ಯಾಯಾಂಗವೂ ನಿಶ್ಶಕ್ತವಾಗಿದೆ ಎಂದು ತೃಣಮೂಲ ಸೇರಿದ ಯಶವಂತ ಸಿನ್ಹ ಪ್ರತಿಕ್ರಿಯಿಸಿದ್ದಾರೆ.
ಮೋದಿ ಮತ್ತು ವಾಜಪೇಯಿ ಅವರ ಮಧ್ಯೆ ತುಲನೆ ಮಾಡಿದ ಸಿನ್ಹ, ಅವರಿಬ್ಬರ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ರೈತ ಚಳವಳಿ, ಭಾರತ-ಚೈನಾ ಗಡಿ ಪ್ರಕ್ಷುಬ್ಧತೆ ಅಟಲ್ ಕಾಲದಲ್ಲಿ ಊಹಿಸಲೂ ಅಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಚಿತ್ತ ಮತ್ತು ಒಮ್ಮತಾಭಿಪ್ರಾಯದ ಆಡಳಿತ, ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸುವ ಛಾತಿ ವಾಜಪೇಯಿ ಅವರಲ್ಲಿ ಮಾತ್ರ ಕಾಣಬಹುದು. ಈಗಿನ ಸರ್ಕಾರ ನಿರ್ದಯಿ, ಆಕ್ರಮಣಕಾರಿ ಮತ್ತು ಎದುರಾಳಿಗಳನ್ನು ಸದೆಬಡಿಯುವ ಹೀನ ಕಾಯಕದಲ್ಲಿ ತೊಡಗಿದೆ ಎಂದು ವಿವರಿಸಿದರು.
ಅಕಾಲಿ ದಳ ಬಿಜೆಪಿಯನ್ನು ತೊರೆದಿದೆ. ಬಿಜೂ ಜನತಾದಳ ಕೂಡ ಕಮಲ ಸಾಂಗತ್ಯವನ್ನು ಬಿಟ್ಟಿದೆ. ಮತ್ತಷ್ಟು ಪಕ್ಷಗಳು ಆ ಮೈತ್ರಿಕೂಟದಿಂದ ಹೊರಬರಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.