a real story of vaccine | ಲಸಿಕೆ! ಲಸಿಕೆ!! ಲಸಿಕೆ!!! : ಲಸಿಕೆ ಹಾಕ್ಕೊಳ್ಳಲು ಹೋದಾಗ ನಡೆದ ನೈಜ ಕಥೆ
ಏಪ್ರಿಲ್ ಮಧ್ಯದಲ್ಲಿ ಮೊದಲ ಲಸಿಕೆ ಆಯ್ತು. ಸಾಮಾನ್ಯನಂತೆ ಹತ್ತಿರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ಯೋಚನೆ ಬಂದರೂ, ಇರಲಿ ನಾನು 250/- ರೂ ಕೊಟ್ಟು ಖಾಸಗಿಯಾಗಿಯೇ ಹಾಕಿಸಿಕೊಂಡರೆ ಸರ್ಕಾರದ ಆರೋಗ್ಯ ಕೇಂದ್ರದ ಮೇಲೆ ಒತ್ತಡ ಕಡಿಮೆ ಆದೀತು ಅಂದುಕೊಂಡು 'ನ್ಯಾನೊ ಹಾಸ್ಪಿಟಲ್' ನಲ್ಲಿ ಹಾಕಿಸಿಕೊಂಡೆ.
ಈಗ ಎರಡನೆಯದಕ್ಕೆ ಅಂತ ನ್ಯಾನೊಗೆ ಹೋದರೆ ಅವರು ಈಗ ಲಸಿಕೆ ಕೊಡ್ತಿಲ್ಲ ಅಂತ ತಿಳೀತು. ಅಪೋಲೋದಲ್ಲಿ ವಿಚಾರಿಸಿದೆ. ಅಲ್ಲೂ ಇಲ್ಲಾಂದ್ರು. ಮೊದಲನೇ ಲಸಿಕೆ ಹಾಕಿ ಇರಡನೇದಕ್ಕೆ ಇಲ್ಲಾಂದ್ರೆ ಯಾವ ನ್ಯಾಯ ! ಆದರೆ ಅಲ್ಲಿ ಯಾರನ್ನ ಕೇಳಬೇಕು ತಿಳಿಯಲ್ಲ. ಫೋನ್ ಮಾಡಿದರೆ ಪ್ರೆಸ್ ಒನ್ ಪ್ರೆಸ್ಸ್ ಟೂ !!!
ಸರಿ ನಮ್ಮ ಅರಕೆರೆಯ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಮೂರು ದಿನಕ್ಕೆ ಮೊದಲು ಹೋದಾಗ ಇವತ್ತು 75 ಟೋಕನ್ ಮುಗೀತು ನಾಳೆ 9 ಗಂಟೆಗೆ ಬಂದು ಟೋಕನ್ ತಗೊಳಿ ಅಂದ್ರು. ಮೊನ್ನೆ 8.30 ಕ್ಕೇ ಹೋಗಿ ಒಂದು ಅಂದಾಜಿನ ಮೇಲೆ ಕ್ಯೂ ನಿಂತವರನ್ನೆಲ್ಲಾ ಎಣಿಸಿ ನೋಡಿ ಸಿಗಬಹುದು ಅನ್ನುವ ಖಾತ್ರಿಯಲ್ಲಿ ನಿಂತಿದ್ದೆ. ಇನ್ನೂ 10-15 ಜನರಿಗಿಂತ ಮೊದಲೇ ಎಲ್ಲರೂ ಕೈ ಅಲ್ಲಾಡಿಸುತ್ತಾ 75 ಟೋಕನ್ ಮುಗೀತು ನಾಳೆ ನಾಳೆ ಅಂದುಕೊಳ್ಳುತ್ತಾ ಎಲ್ಲಾ ಮನೆಕಡೆ ಹೋದರು. ನಾನು ಯೋಚನೆ ಮಾಡಿದೆ. ನಾನು ಲೆಕ್ಕದಲ್ಲಿ ವೀಕನ್ನೋದು ನಿಜ.
ಎಸ್ಸೆಸ್ಸೆಲ್ಸಿಯಲ್ಲಿ ಅದೊಂದರಲ್ಲೇ ಫೇಲ್ ಆಗಿದ್ದು ನಿಜ. ಇದೇನು 75 ರವರೆಗಿನ ಸಿಂಪಲ್ ಎಣಿಕೆಯು ಕೈ ಕೊಡ್ತಲ್ಲಾ ಅಂತ ತುಂಬಾ ಪೇಚಾಡಿದೆ. ಮನೆಗೆ ಬಂದೆ. ಮರುದಿನ ಮೊದಲನೇವನೇ ನಾನಾಗಿರಬೇಕು ಅಂತ ಹೋಗೋ ಹೊತ್ತಿಗೆ ಆಗಲೇ 20-25 ಜನರು ನಿಂತಿದ್ದರು. ಯಾರೋ ಇವತ್ತು 50 ತ್ತೇ ಟೋಕನ್ ಕೊಡೋದಂತೆ ಅಂದರು. ಆದರೂ ನನ್ನದು ಗ್ಯಾರಂಟಿ ಅಂದುಕೊಂಡು ಖುಷಿ ಆಯ್ತು. ಯಥಾಪ್ರಕಾರ ಇನ್ನೊಂದು 7-8 ಜನರಿರುವಾಗಲೇ 50 ಖಾಲಿ ಆಯ್ತು ಅಂದ್ರು. ಎಲ್ಲಾ ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಝನ್ಸ್ ಎಲ್ಲಾ ಜೋಲು ಮೋರೆ ಹಾಕಿಕೊಂಡು ವಾಪಸ್ ಹೋದರು. ಆದರೆ ನನ್ನ ಗಣಿತದ ಬಗ್ಗೆ ವಿಶ್ವಾಸ ವಾಪಸ್ ಬಂದು ನಮ್ಮ ಆರೋಗ್ಯ ಕೇಂದ್ರದಲ್ಲಿ ಏನೋ ಕರಾಮತ್ತು ನೆಡೀತಿದೆ ಅನ್ನುವ ಅನುಮಾನ ಬಂತು.
ಸರಿ ಇವತ್ತಿನ ದಂಡೆಯಾತ್ರೆಯಲ್ಲಿ ಆದದ್ದೇ ಬೇರೆ. ನಾನು ಕ್ಯೂನಲ್ಲಿ 20 ರ ಒಳಗಿನವನೇ ಆಗಿದ್ದೆ. ಆದರೆ ಇವತ್ತಿನ ಆರೋಗ್ಯ ಕೇಂದ್ರದ ಕರಾಮತ್ತು ಸೂಪರ್ ಸ್ಪೆಶಲ್ ಆಗಿತ್ತು. ಇವತ್ತು 25 ದೇ ಟೋಕನ್ ಕೊಡೋದು ಎಂದ ಹೇಳಿ 10-12 ಜನರಿಗೆ ಕೊಟ್ಟು ಮುಗೀತು ಅಂದುಬಿಟ್ಟರು.
ನಮ್ಮ ಅರಕೆರೆಯ ಜನ ತುಂಬಾ ಒಳ್ಳೇಯವರು. ಮೂರು ದಿನ ಶಾಂತಿ ಕಾಪಾಡಿದ್ದರು. ಇವತ್ತು ವಿಚಾರಿಸಲು ಒಳಗೆ ಹೋದರು. ನಾನೂ ಹೋದೆ.
ಸಾರಾಂಶ ಏನೂಂದ್ರೇ.... ಅಲ್ಲಿ ಹೇಳೋರು ಕೇಳೋರು ಅಧಿಕಾರಿಗಳು ಯಾರೂ ಇಲ್ಲ. ನಮ್ಮ ಜೊತೆಗೆ ಮಾತಾಡಿದವರ್ಯಾರೂ ಜವಾಬ್ದಾರಿಯಿಂದ ಮಾತಾಡುತ್ತಿದ್ದಾರೆ ಅನಿಸಲಿಲ್ಲ. ಒಬ್ಬಿಬ್ಬರು ತಲೆ ಮರೆಸಿಕೊಂಡು ಮರೆಯಾದರೆ. ಇನ್ನೊಂದಿಬ್ಬರು ನಿಮಗ್ಯಾಕೆ ಸಾರ್ ನಾನು ನಾಳೆ ನಿಮಗೆ ಕೊಡ್ಸಿಕೊಡ್ತೀನಿ... ನಿಮ್ಮವ್ರದು ಒಂದೈದಾರು ಹೆಸರು ಬರಕೊಡಿ ಸಾರ್ ಅಂತಿದ್ದರು. ಅವರಲ್ಲಿ ಸಿಬ್ಬಂದಿ ಯಾರು ಬೇರೆಯವರು ಯಾರು ಒಂದೂ ತಿಳಿಯದೇ ಅಯೋಮಯವಾಗಿತ್ತು. ವೈದ್ಯಾಧಿಕಾರಿಯವರನ್ನು ಕಾಣೋಣವೆಂದು ಅವರ ಕೊಠಡಿಗೆ ಹೋದೆವು. ಅವರ ಕೊಠಡಿ ಬಿಕೋ ಅನ್ನುತ್ತಿತ್ತು.
ಮತ್ತೊಮ್ಮೆ ಲಾಕ್ ಡೌನ್ ಆಗಿ ವಲಸೆಗಾರರು ಹಸಿವು, ಕೂಲಿ ಕೆಲಸ ಅನ್ನುತ್ತಿದ್ದಾರೆ. ಅವರ ನೋವನ್ನು ಯಾರೂ ಕೇಳುತ್ತಿಲ್ಲ. ನಾವು ಲಸಿಕೆ ಲಸಿಕೆ ಎಂದು ಅಲೆಯುತ್ತಿದ್ದೇವೆ.
ಇದು ಒಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕತೆ. ಎಷ್ಟು ಕೇಂದ್ರಗಳಿವೆಯೋ... ??