![Article by Na Divakara | ಕೊರೋನಾ ಬಲು ಜಾಣ..! ಬುದ್ಧಿವಂತ.. - ರಾಜಕಾರಣಿಗಳಿಗಿಂತಲೂ ಸಾವಿರ ಪಾಲು ವಾಸಿ Article by Na Divakara | ಕೊರೋನಾ ಬಲು ಜಾಣ..! ಬುದ್ಧಿವಂತ.. - ರಾಜಕಾರಣಿಗಳಿಗಿಂತಲೂ ಸಾವಿರ ಪಾಲು ವಾಸಿ](https://blogger.googleusercontent.com/img/b/R29vZ2xl/AVvXsEjUBcy_qV26jAwT601j2-Bf3BT-UAwCUA_wJt6nkjU71_zBXsoXnfNqucYgb9T4-7gaCM94G7AqJm6_Cql_WKrbGnJEswwtOm__RJp1XwztMnGyhfg0755jEvk7l7CmPzS6_hfU5jwpZdo/s16000/coronavirus.jpg)
Article by Na Divakara | ಕೊರೋನಾ ಬಲು ಜಾಣ..! ಬುದ್ಧಿವಂತ.. - ರಾಜಕಾರಣಿಗಳಿಗಿಂತಲೂ ಸಾವಿರ ಪಾಲು ವಾಸಿ
ಬರಹ: ನಾ ದಿವಾಕರ
ಒಂದು ವರ್ಷದಲ್ಲಿ ಕೊರೋನಾ ವೈರಾಣು ಎಷ್ಟು ಜಾಣನಾಗಿದೆ, ಎಷ್ಟೊಂದು ತಿಳುವಳಿಕೆ ಹೊಂದಿದೆ! ತಾನು ಎಲ್ಲಿ ಶೀಘ್ರವಾಗಿ ಹರಡಬೇಕು, ಎಲ್ಲಿಗೆ ಪ್ರವೇಶಿಸಬೇಕು, ಎಲ್ಲಿ ಹೊರಗಿರಬೇಕು ಎಂದು ಸ್ಪಷ್ಟವಾಗಿ ತಿಳಿದುಕೊಂಡಿದೆ. ತವರು ಮನೆಯನ್ನು ತೊರೆದಿರುವುದರಿಂದ ಈಗ ಕೊರೋನಾ ಸರ್ವ ಸ್ವತಂತ್ರ. ಚೀನಾ ನಂಟಿನ ಹಂಗಿಲ್ಲ. ತಬ್ಲೀಗಿಗಳಿಂದ ವಿಚ್ಚೇದನ ಪಡೆದಾಗಿದೆ. ಸುದ್ದಿಮನೆಗಳು ಈಗತಾನೇ ಬಾಂಬುಗಳ ತಯಾರಿಕೆಯಲ್ಲಿ ತೊಡಗಿವೆ. ಕುಂಭಮೇಳದ ಬಾಂಬ್ ಇನ್ನೂ ಸ್ಫೋಟಿಸಿದಂತೆ ಕಾಣುತ್ತಿಲ್ಲ. ವಲಸೆ ಬಾಂಬುಗಳಿಗೆ, ರಾಜ್ಯಾವಾರು ಬಾಂಬುಗಳಿಗೆ ಇನ್ನೂ ಕಾಲ ಕೂಡಿಬಂದಿಲ್ಲ.
ಇಷ್ಟರ ನಡುವೆ ಹೌಸ್ ಫುಲ್ ಆಗುವ ಚಿತ್ರಮಂದಿರಕ್ಕೆ ಕೊರೋನಾ ನುಗ್ಗುವುದಿಲ್ಲ. ಪುನೀತ್, ಯಶ್, ಸುದೀಪ್ ಮೇಲಿನ ಅಭಿಮಾನ ಇನ್ನೆಷ್ಟಿರಬೇಕು ? ೭ ನೆಯ ತಾರೀಖಿನ ನಂತರ ಚಿತ್ರಮಂದಿರಕ್ಕೆ ಕೊರೋನಾ ನುಗ್ಗುವ ಸಾಧ್ಯತೆಗಳನ್ನು ಸರ್ಕಾರ ಅಲ್ಲಗಳೆಯುವುದಿಲ್ಲ. ಆಗ ೫೦% ಜನ ಇದ್ದರೆ ಕೊರೋನಾ ಹೊಂದಿಕೊಂಡು ಹೋಗುತ್ತದೆ. ಎಷ್ಟು ಜಾಣ ಅಲ್ಲವೇ ? ರಾಜಕಾರಣಿಗಳಿಗಿಂತಲೂ ಸಾವಿರ ಪಾಲು ವಾಸಿ !!!!!
ಇಷ್ಟೇ ಅಲ್ಲ ಈ ವೈರಾಣುವಿಗೆ ಎಷ್ಟು ಬುದ್ಧಿ ನೋಡಿ. ಸಾಮಾನ್ಯ ಜನರ ಮದುವೆ ಇತರ ಸಮಾರಂಭಗಳಲ್ಲಿ ೫೦೦ ಜನರ ಮೇಲೆ ಸೇರಿದರೆ ಧಾಳಿ ಮಾಡುತ್ತೆ. ರಾಜಕಾರಣಿಗಳ ಸಭೆ ಸಮಾರಂಭಗಳತ್ತ ಸಾವಿರಾರು ಜನ ಇದ್ದರೂ ಸುಳಿಯುವುದಿಲ್ಲ. ಅಲ್ಲಿ ಮಾಸ್ಕ್ ಇಲ್ಲದಿದ್ದರೂ ಕಣ್ಮುಚ್ಚಿಕೊಂಡು ಓಡಾಡಿಕೊಂಡಿರುತ್ತದೆ. ದೇವಸ್ಥಾನ ಜಾತ್ರೆ ಧಾರ್ಮಿಕ ಸಭೆಗಳತ್ತ ನೋಡುವುದೇ ಇಲ್ಲ. ಪಾಪ ಕೋಟ್ಯಂತರ ಜನ ಸೇರುವ ಕುಂಭಮೇಳವನ್ನು ನೋಡಲೂ ಕೇಂದ್ರ ಸರ್ಕಾರ ಕೊರೋನಾಗೆ ಅವಕಾಶ ಕೊಡಲಿಲ್ಲ. ಅಲ್ಲಿ ಒಳಗೆ ನುಸುಳಲು ಕೊರೋನಾಗೆ ಅವಕಾಶ ಇತ್ತೋ ಇಲ್ಲವೋ ಮುಂದಿನ ದಿನಗಳಲ್ಲಿ ತಿಳಿಯುತ್ತದೆ.
ರಾಜಕಾರಣಿಗಳೆಂದರೆ ಕೊರೋನಾಗೂ ಅಲರ್ಜಿ ಎನಿಸುತ್ತದೆ . ನಾಯಕರ ಮೂಗಿನ ಹೊಳ್ಳೆ ಕಮಲದಂತೆ ಅರಳಿದ್ದರೂ ಕೊರೋನಾ ಹತ್ತಿರ ಸುಳಿಯದು. ಜನಸಾಮಾನ್ಯರು ಮಾಸ್ಕ್ ಧರಿಸದಿದ್ದರೆ ಥಟ್ ಅಂತ ಬಡಿಯುವ ಈ ವೈರಾಣು ರಾಜಕಾರಣಿಗಳ ಮೂಗಿನ ಬಳಿ ಸುಳಿಯುವುದೇ ಇಲ್ಲ. ಹಾಗಾಗಿ ಮಾಸ್ಕ್ ನಿಂದ ಮುಕ್ತಿ ನಮ್ಮ ಸಚಿವರಿಗೆ, ಶಾಸಕರಿಗೆ, ನಾಯಕರಿಗೆ.
ಚುನಾವಣಾ ಭಾಷಣಗಳನ್ನು ಅದು ಕೇಳುವುದಿಲ್ಲಾದ ಕಾರಣ ತೊಂದರೆಯಿಲ್ಲ
ಆದರೆ ಶಾಲಾ ಮಕ್ಕಳನ್ನು ಕಂಡರೆ ಈ ವೈರಾಣುವಿಗೆ ಅದೇನೋ ಸಿಟ್ಟು. ಶಾಲೆಯ ಗೇಟ್ ತೆಗೆದರೆ ಒಳಗೆ ನುಗ್ಗುತ್ತೇನೆ ಎಂದು ಬೆದರಿಕೆ ಹಾಕಿದೆ. ಪಾಪ ತಜ್ಞರ ಸಮಿತಿಯೂ ಈ ಬೆದರಿಕೆಗೆ ಮಣಿದಿದೆ. ಹಾಗಾಗಿ ಶಾಲಾ ಕಾಲೇಜುಗಳು ಬಂದ್. ಪುನೀತ್ ರಾಜಕುಮಾರ್ ಮೇಲೆ ಇರುವಷ್ಟು ಗೌರವ ಆದರ ಈ ಕೊರೋನಾಗೆ ಶಾಲಾ ಮಕ್ಕಳ ಮೇಲಿಲ್ಲ. ಮಕ್ಕಳಿಗೆ ಶಾಲೆಗೆ ಹೋಗಲು ಬಿಡುತ್ತಿಲ್ಲ.
ಇಂತಿಪ್ಪ #ಆತ್ಮನಿರ್ಭರ ಭಾರತದಲ್ಲಿ ಕೊರೋನಾ ತನ್ನ ದ್ವಿತೀಯ ದಂಡಯಾತ್ರೆಯನ್ನು ಮುಂದುವರೆಸಿದೆ. ಸುದ್ದಿಮನೆಗಳು ವೈವಿಧ್ಯಮಯ ಬಾಂಬುಗಳ, ರಕ್ಕಸರ, ರಕ್ಕಸಿಯರ ಶೋಧದಲ್ಲಿ ತೊಡಗಿರುವಂತೆಯೇ ಕೊರೋನಾ ವ್ಯಾಪಿಸುತ್ತಿದೆ. ಮುಂದಿನ ಕತೆ ಪರದೆಯ ಮೇಲೆ