Convocation of Mangaluru Univerasity | ಮಂಗಳೂರು ವಿವಿ ಘಟಿಕೋತ್ಸವ: ಗಣ್ಯರ ಅನುಪಸ್ಥಿತಿ, ಗೌರವ ಡಾಕ್ಟರೇಟ್ ಇಲ್ಲ, ಯೂ ಟ್ಯೂಬ್, ಫೇಸ್ ಬುಕ್ ನಲ್ಲಿ ನೇರ ಪ್ರಸಾರ
ಎಪ್ರಿಲ್ 10 ರಂದು ಮಂಗಳೂರು ವಿಶ್ವವಿದ್ಯಾನಿಲಯದ 39ನೇ ಘಟಿಕೋತ್ಸವ
ಗಣ್ಯರ ಅನುಪಸ್ಥಿತಿ
ಗೌರವ ಡಾಕ್ಟರೇಟ್ ಇಲ್ಲ
ಯೂ ಟ್ಯೂಬ್, ಫೇಸ್ ಬುಕ್ ನಲ್ಲಿ ನೇರ ಪ್ರಸಾರ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 39ನೇ ಘಟಿಕೋತ್ಸವ ಎಪ್ರಿಲ್ 10ರಂದು ಬೆಳಗ್ಗೆ 11.00 ಕ್ಕೆ ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಈ ಬಾರಿಯ ಮುಖ್ಯ ಅತಿಥಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಪದ್ಮಶ್ರೀ ಡಾ. ಸುಧಾಮೂರ್ತಿ ಆನ್‌ಲೈನ್ ಮುಖಾಂತರ ಫಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಕುಲಪತಿಯಾಗಿ ತಮ್ಮ ಅವಧಿಯಲ್ಲಿ ನಡೆಯಲಿರುವ ಎರಡನೇ ಘಟಿಕೋತ್ಸವದ ಕುರಿತು ಗುರುವಾರ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಾಹಿತಿ ಹಂಚಿಕೊಂಡ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಈ ಬಾರಿ ಕುಲಾಧಿಪತಿ (ರಾಜ್ಯಪಾಲರು) ಮತ್ತು ಸಹಕುಲಾಧಿಪತಿ (ಉನ್ನತ ಶಿಕ್ಷಣ ಸಚಿವರು)ಗಳ ಅನುಪಸ್ಥಿತಿಯಲ್ಲಿ ಘಟಿಕೋತ್ಸವ ನಡೆಯಲಿದೆ. ಕೋವಿಡ್ ನಿಯಮಾವಳಿ ಪಾಲನೆಗೆ ಒತ್ತು ನೀಡಲಾಗಿದೆ. ಕಾರ್ಯಕ್ರಮವನ್ನು ಯೂ ಟ್ಯೂಬ್, ಫೇಸ್ ಬುಕ್ ಮುಖಾಂತರ ನೇರ ಪ್ರಸಾರ ಮಾಡಲಾಗುವುದು ಎಂದು ಹೇಳಿದರು.
ಈ ಬಾರಿ ಯಾರಿಗೂ ಗೌರವ ಡಾಕ್ಟರೇಟ್ ನೀಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಕುಲಪತಿಗಳು, ಪಿ.ಹೆಚ್.ಡಿ. ಪಡೆದವರು, ಚಿನ್ನದ ಪದಕ ವಿಜೇತರು ಮತ್ತು ಪ್ರಥಮ Rank ಪಡೆಯುವ ವಿದ್ಯಾರ್ಥಿಗಳು ಮಾತ್ರ ತಮ್ಮ ಪದವಿಯನ್ನು ಸ್ವಯಂ ಹಾಜರಾಗಿ ಪಡೆಯಲಿದ್ದಾರೆ. ನಗದು ಬಹುಮಾನವನ್ನು ಚೆಕ್ ಮೂಲಕ ಮತ್ತು ಹಾಗೂ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಒಂದು ವಾರದೊಳಗೆ ಅಂಚೆಯ ಮೂಲಕ ಕಳಿಸಿಕೊಡಲಾಗುವುದು, ಎಂದರು.
ಇದೇ ವೇಳೆ ಮಾತನಾಡಿದ ಕುಲಸಚಿವ (ಪ್ರಭಾರ) ಪ್ರೊ. ಪಿ ಎಲ್ ಧರ್ಮ, ಈ ಬಾರಿ 14 ಮಂದಿ ವಿದೇಶಿಗರೂ ಸೇರಿದಂತೆ 117 ಮಂದಿಗೆ ಪಿ.ಹೆಚ್.ಡಿ ಪದವಿ ಪ್ರಧಾನ ಮಾಡಲಾಗುವುದು.
ಹತ್ತು ಮಂದಿಗೆ ಚಿನ್ನದ ಪದಕ ಮತ್ತು ವಿವಿಧ ಕೋರ್ಸುಗಳ ಒಟ್ಟು 188 Rankಗಳಲ್ಲಿ ಪ್ರಥಮ Rank ಪಡೆದ 69 ಮಂದಿಗೆ Rank ಪ್ರಮಾಣ ಪತ್ರ ನೀಡಲಾಗುವುದು. ಒಟ್ಟಾರೆ 43,743 ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳಿಗೆ ಹಾಜರಾಗಿದ್ದು 33,806 (77.28%) ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಇವರಲ್ಲಿ ಎಂದಿನಂತೆ ಹುಡುಗಿಯರು (62.62%) ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹಳೆಯ ಕಂಪೆನಿ ಜೊತೆ ಒಪ್ಪಂದ ಮುಕ್ತಾಯವಾದುದರಿಂದ ವಿಶ್ವವಿದ್ಯಾನಿಲಯ ಪರೀಕ್ಷಾ ವ್ಯವಸ್ಥೆಗೆ ಹೊಸ ಸಾಫ್ಟ್‌ವೇರ್ ಬಳಕೆಗೆ ನಿರ್ಧರಿಸಿದ್ದು, ಪುನರಾವಾರ್ತಕ ಅಭ್ಯರ್ಥಿಗಳ ಕೋಡ್‌ವರ್ಡ್ ಬದಲಾವಣೆಯಿಂದ ಸಮಸ್ಯೆ ಆಗಿರುವುದು ನಿಜ. ಸಧ್ಯಕ್ಕೆ ಮ್ಯಾನುವಲ್ ಮೋಡ್ ನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದ್ದು ಆತಂಕಕ್ಕೆ ಕಾರಣಗಳಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಸಾಫ್ಟ್‌ವೇರ್‌ನ ಭವಿಷ್ಯ ನಿರ್ಧರಿಸಲಾಗುವುದು, ಎಂದರು.
ಕುಲಪತಿ ಹಂತದಲ್ಲಿ ಕ್ರಮ :
ವಿಶ್ವವಿದ್ಯಾನಿಲಯವೊಂದರ ಕುಲಪತಿ ಹುದ್ದೆಗಾಗಿ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಪ್ರಾಧ್ಯಾಪಕ, CDC ನಿರ್ದೇಶಕ ಪ್ರೊ. ಎಂ. ಜಯಶಂಕರ್ ಅವರ ಪ್ರಕರಣ ವಿಚಾರಣೆಯ ಹಂತದಲ್ಲಿದ್ದು, ಕುಲಪತಿ ಹಂತದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ, ಎಂದು ಪ್ರೊ. ಪಿ ಎಸ್ ಯಡಪಡಿತ್ತಾಯ ಹೇಳಿದರು. ವಿಶ್ವವಿದ್ಯಾನಿಲಯ ನೀಡಿದ ನೋಟಿಸ್‌ಗೆ ಉತ್ತರ ದೊರೆತಿದ್ದು ಎಪ್ರಿಲ್ 09 ರಂದು ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಯಲಿದೆ. ಮುಂದಿನ ಆದೇಶದವರೆಗೆ ಅವರನ್ನು ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸೆಲ್‌ಗೆ ಉಪ ನಿರ್ದೇಶಕರಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ, ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಡಾ. ಬಿ ನಾರಾಯಣ, ಯೋಜನೆ, ಮಾನಿಟರಿಂಗ್ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕ ಪ್ರೊ. ಕೆ ಎಸ್ ಜಯಪ್ಪ, ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ವಿಶ್ವವಿದ್ಯಾಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಬ್ಯೂರೋ (ಯುಇಐಜಿಬಿ) ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿʼಸೋಜ ಮೊದಲಾದವರು ಉಪಸ್ಥಿತರಿದ್ದರು.
ಕುಲಪತಿ ಹೇಳಿದ್ದು…
• ಘಟಿಕೋತ್ಸವ- ಸಭಾಂಗಣದ ಒಳಗಡೆ ಬರುವವರಿಗೆ ಥರ್ಮಲ್ ಸ್ಕ್ಯಾನ್
• ಮಾಸ್ಕ್ ವಿತರಣೆ, ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯ- ವಿತರಣೆಗೆ ವ್ಯವಸ್ಥೆ
• ಅತಿಥಿ ಭಾಷಣ ವೆಬ್‌ಸೈಟ್‌ನಲ್ಲಿ ಲಭ್ಯ- ಪ್ರಸಾರಾಂಗದ ಮೂಲಕ ಪ್ರಕಟಣೆಗೆ ಚಿಂತನೆ
• ಸಿಂಡಿಕೇಟ್ ಸಭೆ ಬಳಿಕ ಇನ್ವಿಜಿಲೇಟರ್ಗಳ ವೇತನ ಹೆಚ್ಚಳ ತೀರ್ಮಾನ