Udupi DC Fb account hacked | ಜಿಲ್ಲಾಧಿಕಾರಿ ಹೆಸರಲ್ಲೂ ನಕಲಿ ಫೇಸ್‌ಬುಕ್ ಅಕೌಂಟ್, ಹಣಕ್ಕಾಗಿ ಮೊರೆ: ಸೈಬರ್ ಪೊಲೀಸರು ಏನು ಮಾಡುತ್ತಿದ್ದಾರೆ...?
ಉಡುಪಿ: ವಿಐಪಿಗಳು, ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಮಾಡಿ ವಂಚಿಸುತ್ತಿದ್ದ ಹ್ಯಾಕರ್‌ಗಳು ಇದೀಗ ಜಿಲ್ಲಾಧಿಕಾರಿಗಳ ಖಾತೆಯನ್ನೂ ಬಿಟ್ಟಿಲ್ಲ. ಉಡುಪಿ ಜಿಲ್ಲಾಧಿಕಾರಿ ಡಾ. ಜಗದೀಶ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಸೃಷ್ಟಿಸಿದ ಖದೀಮರು ಹಣಕ್ಕಾಗಿ ಮೊರೆ ಇಟ್ಟಿದ್ಧಾರೆ.
ಜಿಲ್ಲಾಧಿಕಾರಿಯ ಹೆಸರಲ್ಲಿ ನಕಲಿ ಸಂದೇಶ ಕಳಿಸಿರುವ ಹ್ಯಾಕರ್‌ಗಳು, ತಮ್ಮ ಸಂಬಂಧಿಕರ ಮೊಬೈಲ್‌ಗೆ ಹಣ ಕಳಿಸುವಂತೆ ಬೇಡಿಕೆ ಇಟ್ಟಿದ್ದಾರೆ.
ತಕ್ಷಣ ಎಚ್ಚೆತ್ತ ಉಡುಪಿ ಜಿಲ್ಲಾದಿಕಾರಿ ಡಾ. ಜಗದೀಶ್ ಈ ಬಗ್ಗೆ ಮಾಹಿತಿ ಹಂಚಿಕೊಂಡು, ಈ ಸಂದೇಶಕ್ಕೆ ಯಾರೂ ಮರುಳಾಗದಿರಿ ಎಂದು ವಿನಂತಿಸಿಕೊಂಡಿದ್ದಾರೆ.
ಇದುವರೆಗೆ ಸಾಮಾನ್ಯರನ್ನು, ಆಯ್ದ ವಿಐಪಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಹ್ಯಾಕರ್‌ಗಳು ಇದೀಗ ಸರ್ಕಾರಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನೂ ಟಾರ್ಗೆಟ್ ಮಾಡುತ್ತಿರುವುದು ಪರಿಸ್ತಿತಿ ಗಂಭೀರ ಸ್ವರೂಪಕ್ಕೆ ತಿರುಗತ್ತಿದೆ ಎಂಬ ಸೂಚನೆಯನ್ನು ನೀಡುತ್ತಿದೆ.
ಇಷ್ಟೆಲ್ಲಾ ಆದರೂ ಏನೂ ಪ್ರಯೋಜನವಾಗಿಲ್ಲ. ದೂರು ನೀಡಿದರೂ ನಿಮ್ಮದೇ ತಪ್ಪು ಎಂದು ಸೈಬರ್ ಕ್ರೈಂ ಪೊಲೀಸರು ಸಾಗ ಹಾಕುತ್ತಾರೆ. ನಮಗೆ ಅದರ ಯುಆರ್‌ಎಲ್ ಲಿಂಕ್ ಕಳಿಸಿಕೊಡಿ ಎಂದು ಮತ್ತಷ್ಟು ಗೋಳು ಹೊಯ್ದುಕೊಳ್ಳುತ್ತಾರೆ.
ಡಿಜಿಟಲ್ ಇಂಡಿಯಾ ಎಂದು ಹೇಳಿಕೊಳ್ಳುವ ಕೇಂದ್ರ ಸರ್ಕಾರ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ, ಗೃಹ ಸಚಿವಾಲಯ, ಆಂತರಿಕ ಭದ್ರತಾ ಪೊಲೀಸರು.. ಹೀಗೆ ಎಷ್ಟೆಲ್ಲ ಇಲಾಖೆಗಳು ಇದ್ದರೂ ಖದೀಮರು ಖುಲ್ಲಂಖುಲ್ಲ ಮೋಸ ಮಾಡುತ್ತಲೇ ಇದ್ದಾರೆ.