Fire break out in MSEZ | ಮಂಗಳೂರು SEZ ಕೈಗಾರಿಕಾ ಘಟಕದಲ್ಲಿ ಭಾರೀ ದುರಂತ: ಜನಪ್ರತಿನಿಧಿಗಳು, ಅಧಿಕಾರಿಗಳ ಭೇಟಿ
ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಭಾರೀ ಅಗ್ನಿ ದುರಂತವೊಂದು ಸಂಭವಿಸಿದೆ. Catasynth speciality chemicals ಎಂಬ ಹೆಸರಿನ ವಿಶೇಷ ಆರ್ಥಿಕ ವಲಯದಲ್ಲಿನ ಕಂಪನಿಯಲ್ಲಿ ಈ ಅವಘಡ ಸಂಭವಿಸಿದೆ.
ಅಗ್ನಿ ಅನಾಹುತ ಸಂಭವಿಸಿದ msez ಒಳಗಿನ ಸುಗಂಧ ದ್ರವ್ಯ ಉತ್ಪಾದಿಸುವ ಕಂಪೆನಿ ಇದಾಗಿದ್ದು, ಬಜಪೆ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕಂಪೆನಿ ಇದೆ.
ಶನಿವಾರ ಕೋವಿಡ್ ಲಾಕ್ ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಈ ಕೈಗಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ನೌಕರರು ಗೈರು ಹಾಜರಾಗಿದ್ದರು. ಈ ಕಾರಣದಿಂದ ದೊಡ್ಡ ಮಟ್ಟದಲ್ಲಿ ಆಗಬಹುದಾಗಿದ್ದ ಪ್ರಾಣ ಹಾನಿ ತಪ್ಪಿದಂತಾಗಿದೆ ಎಂದು ವಿಶೇಷ ಆರ್ಥಿಕ ವಲಯದ ಮೂಲಗಳು ತಿಳಿಸಿವೆ. ಕೈಗಾರಿಕಾ ಘಟಕದ ಬಹುತೇಕ ಯಂತ್ರೋಪಕರಣಗಳು, ಕಟ್ಟಡ ಸೇರಿದಂತೆ ಬೆಂಕಿಯಿಯಿಂದ ದೊಡ್ಡ ನಷ್ಟ ಸಂಭವಿಸಿದೆ.
ಸುಗಂಧ ದ್ರವ್ಯದ ಕಂಪೆನಿಯಲ್ಲಿ ಗುತ್ತಿಗೆದಾರರು ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದು, ರಕ್ಷಣಾ ಕ್ರಮಗಳನ್ನು ಸರಿಯಾಗಿ ಅಳವಡಿಸದ ಕಾರಣ ಸ್ಪಾರ್ಕ್ ಉಂಟಾಗಿ ಕೆಮಿಕಲ್ ಸಾಗಾಟದ ಪೈಪ್ ಲೈನ್ ನಲ್ಲಿ ಬೆಂಕಿ ಹತ್ತಿದೆ ಎಂದು ಆಂತರಿಕ ಮೂಲಗಳ ಮಾಹಿತಿಗಳು ಸ್ಪಷ್ಟಪಡಿಸಿವೆ.
ಈ ಕಂಪೆನಿ 20 ಎಕರೆ ಜಮೀನು ಹೊಂದಿದೆ. 85 ಪರ್ಮನೆಂಟ್, 270 ಗುತ್ತಿಗೆ ಕಾರ್ಮಿಕರು ಉದ್ಯೋಗ ಪಡೆದಿದ್ದಾರೆ. ಘಟಕ ಉತ್ಪಾದನೆ ಆರಂಭಿಸಿ ಹನ್ನೊಂದು ತಿಂಗಳಷ್ಟೆ ಕಳೆದಿದೆ.
ಈಗ ಆಗಿರುವ ಅನಾಹುತ ನೋಡಿದರೆ ಇಡೀ ಘಟಕ ಮರು ನಿರ್ಮಾಣದ ಅಗತ್ಯ ಬೀಳಬಹುದು ಎಂದು ಕೆಲ ಅಧಿಕಾರಿಗಳು ಹೇಳಿದ್ದಾರೆ.