Kateel Jathre Cancelled | ಕಟೀಲಿನ ಐತಿಹಾಸಿಕ ಜಾತ್ರೋತ್ಸವಕ್ಕೆ ಬ್ರೇಕ್: ತೂಟೆದಾರ, ಎಕ್ಕಾರು-ತಿಬರ್ ಭೇಟಿ ರದ್ದು
ತುಳುನಾಡಿನ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ವಾರ್ಷಿಕ ಜಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಕಟೀಲಿನ ಸಂಪ್ರದಾಯ ಪ್ರಕಾರ ನಡೆಯುತ್ತಿರುವ ಜಾತ್ರೋತ್ಸವ ಅರ್ಧಕ್ಕೆ ನಿಂತಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತದ ಸೂಚನೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೋವಿಡ್ ನಿರ್ಬಂಧದಿಂದ ಧಾರ್ಮಿಕ ಜಾತ್ರೋತ್ಸವಗಳಿಗೆ ವಿನಾಯಿತಿ ನೀಡಬೇಕು ಎಂದು ಸ್ಥಳಿಯ ಶಾಸಕರು ಒತ್ತಾಯ ಮಾಡಿದ್ದರೂ ಅವರ ಮನವಿಗೆ ಸರ್ಕಾರ ಯಾವುದೇ ಮಣೆ ಹಾಕಿಲ್ಲ.
ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಈ ಆದೇಶದನ್ವಯ ಸಂಜೆ ನಡೆಯಬೇಕಿದ್ದ ಕಟೀಲು ಶ್ರೀ ದೇವಿಯ ಪೌರಾಣಿಕ ಎಕ್ಕಾರು ಭೇಟಿ ಮತ್ತು ಶಿಬರೂರು ಶ್ರೀ ಕೊಡಮಣಿತ್ತಾಯ ಭೇಟಿಯ ಧಾರ್ಮಿಕ ಆಚರಣೆ ಕಾರ್ಯಕ್ರಮ ರದ್ದಾಗಿದೆ.
ಈ ಬಾರಿ ನಿರ್ಬಂಧ ಇದ್ದರೂ ಸರಳವಾಗಿ ಜಾತ್ರೋತ್ಸವವನ್ನು ಆಚರಿಸಲು ನಿರ್ಧಾರ ಮಾಡಲಾಗಿತ್ತು. ಅದರಂತೆ ವಾರದ ಹಿಂದೆಯೇ ಜಾತ್ರೆ ಆರಂಭಗೊಂಡಿತ್ತು.
ಮುಜರಾಯಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೇ ಧಾರ್ಮಿಕ ಆಚರಣೆಗೆ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಇದಕ್ಕೆ ಕರಾವಳಿಯ ಬಹುತೇಕ ಶಾಸಕರು ಧ್ವನಿಗೂಡಿಸಿದ್ದರು. ಆದರೆ, ಅವರ ಯಾವುದೇ ಮನವಿಗೆ, ಒತ್ತಾಯಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂದು ಜನರು ಆಡಿಕೊಳ್ಳುತ್ತಿದ್ಧಾರೆ.